
ಬೆಂಗಳೂರು,ಏ.೭-ಹೆಬ್ಬಗೋಡಿ, ಯಲಹಂಕ ಉಪನಗರ, ಮೈಕೋಲೇಔಟ್, ಪರಪ್ಪನ ಅಗ್ರಹಾರ, ಬಾಗಲೂರು ಹಾಗೂ ಬಾಣಸವಾಡಿ ಠಾಣಾ ವ್ಯಾಪ್ತಿಯಲ್ಲಿ ವಿದೇಶಿ ಪ್ರಜೆ, ಹೊರರಾಜ್ಯದ ನಾಲ್ವರು ಸೇರಿ ೮ ಮಂದಿ ಡ್ರಗ್ ಫೆಡ್ಲರ್ ಗಳನ್ನು ಬಂಧಿಸಿ ೨೭.೪೨ ಕೋಟಿ ಮೌಲ್ಯದ ಮಾದಕವಸ್ತುಗಳನ್ನು ನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಬಂಧಿತ ಆರೋಪಿಗಳಿಂದ ೨.೮೫ ಲಕ್ಷ ನಗದು ಸೇರಿ ೨೭.೪೨ ಕೋಟಿ ಮೌಲ್ಯದ ೧೨ ಕೆಜಿ ೯೧ ಗ್ರಾಂ ಎಂಡಿಎಂಎ, ೨೭೫ ಗ್ರಾಂ ಕೊಕೇನ್ ೩೪ ಕೆಜಿ ೮೦೨ ಗ್ರಾಂ ಗಾಂಜಾ, ೪೦ ಗ್ರಾಂ ಚಿನ್ನಾಭರಣ, ಕೃತ್ಯಕ್ಕೆ ಬಳಸಿದ್ದ ೨ ದ್ವಿಚಕ್ರ ವಾಹನ ಕಾರು, ೨ ಮೊಬೈಲ್ ಗಳನ್ನು ವಶಪಡಿಸಿಕೊಂಡು ಹೆಚ್ಚಿನ ತನಿಖೆಯನ್ನು ಕೈಗೊಳ್ಳಲಾಗಿದೆ ಎಂದು ನಗರ ಪೊಲೀಸ್ ಆಯುಕ್ತ ಸೀಮಂತ್ ಕುಮಾರ್ ಸಿಂಗ್ ಅವರು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಹೆಬ್ಬಗೋಡಿ ಪೊಲೀಸರು ನೈಜೀರಿಯಾದ ಇಮ್ಯಾನುಯಲ್ (೪೧)ನನ್ನು ಬಂಧಿಸಿ ೨.೮೫ ಲಕ್ಷ ನಗದು ೧೨ ಕೆಜಿ ೫೫ ಗ್ರಾಂ ಎಂಡಿಎಂಎ, ೨೭೫ ಗ್ರಾಂ ಕೊಕೇನ್,೨ ಮೊಬೈಲ್ ಕಾರು ಸೇರಿ ೨೫ ಕೋಟಿ,೬೩ ಲಕ್ಷ ೯೫ ಸಾವಿರ ಮೌಲ್ಯದ ಮಾಲುಗಳನ್ನು ಜಪ್ತಿ ಮಾಡಲಾಗಿದೆ ಎಂದು ಹೇಳಿದರು.
ಯಲಹಂಕ ಪೊಲೀಸರು ಕೇರಳದ ಮೊಹಮ್ಮದ್ ನಿಶಾದ್,ಆದೇಶ್ ನನ್ನು ಬಂಧಿಸಿ ೧೦.೫೦ಲಕ್ಷ ಮೌಲ್ಯದ ೨೧ಕೆಜಿ ೧೨೫ ಗ್ರಾಂ ಗಾಂಜಾ ಜಪ್ತಿ ಮಾಡಿದರೆ,ಮೈಕೋ ಲೇಔಟ್ ಪೊಲೀಸರು ಅಸ್ಸಾಂ ನ ಬೊಬ್ಬಿನಾಯ್ಡು ನನ್ನು ಬಂಧಿಸಿ ೩.೫೦ ಲಕ್ಷ ಮೌಲ್ಯದ ೬ ಕೆಜಿ ೪೦೦ಗ್ರಾಂ ಗಾಂಜಾ ಜಪ್ತಿ ಮಾಡಿದ್ದಾರೆ ಎಂದು ತಿಳಿಸಿದರು.
ಬಾಗಲೂರು ಪೊಲೀಸರು ಯಲಹಂಕದ ಮೊಹಮ್ಮದ್ ನಾಸೀರ್ ನನ್ನು ಬಂಧಿಸು ೧ಲಕ್ಷ ಮೌಲ್ಯದ ಡ್ರಗ್ಸ್ ವಶಪಡಿಸಿಕೊಂಡರೆ, ಪರಪ್ಪನ ಅಗ್ರಹಾರ ಪೊಲೀಸರು ೨ಲಕ್ಷ ಮೌಲ್ಯದ ಗಾಂಜಾ ಜಪ್ತಿಮಾಡಿ ಆರೋಪಿಯೊಬ್ಬನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ತಿಳಿಸಿದರು.
ಆರೋಪಿಗಳು ಹೆಚ್ಚಿನ ಹಣ ಗಳಿಸುವ ಉದ್ದೇಶದಿಂದ, ವಿದೇಶಿ ಮೂಲದ, ಹೊರರಾಜ್ಯದ ಮತ್ತು ಸ್ಥಳೀಯ ಅಪರಿಚಿತ ವ್ಯಕ್ತಿಗಳಿಂದ ನಿಷೇಧಿತ ಮಾದಕ ವಸ್ತುಗಳಾದ ಎಂಡಿಎಂಎ, ಕೊಕೇನ್ ಮತ್ತು ಗಾಂಜಾವನ್ನು ಕಡಿಮೆ ಬೆಲೆಗೆ ಖರೀದಿಸಿಕೊಂಡು ಬಂದು ಸಾರ್ವಜನಿಕರಿಗೆ, ಕಾಲೇಜು ವಿದ್ಯಾರ್ಥಿಗಳಿಗೆ ಮಾರಾಟ ಮಾಡುತ್ತಿರುವುದನ್ನು ಆರೋಪಿಗಳು ಒಪ್ಪಿಕೊಂಡಿದ್ದಾರೆ ಎಂದರು.
ಆರೋಪಿಗಳಿಗೆ ನಿಷೇಧಿತ ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿದ್ದ ಅಪರಿಚಿತ ವ್ಯಕ್ತಿಗಳ ಪತ್ತೆ ಕಾರ್ಯ ಮುಂದುವರೆದಿದ್ದು, ಪ್ರಕರಣಗಳ ತನಿಖೆ ಪ್ರಗತಿಯಲ್ಲಿರುತ್ತವೆ. ಈ ಪ್ರಕರಣಗಳಲ್ಲಿ ಭಾಗಿಯಾಗಿದ್ದ ಎಂಟು ಆರೋಪಿಗಳನ್ನು ವಿವಿಧ ದಿನಾಂಕಗಳಂದು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು ಅವರನ್ನು ನ್ಯಾಯಾಂಗ ಬಂಧನಕ್ಕೆ ಒಳಪಡಿಸಲಾಗಿದೆ.
ಡಿಸಿಪಿಗಳಾದ ನಾರಾಯಣ್,ಜಿ.ಕೆ.ಮಿಥುನ್ ಕುಮಾರ್, ಮೊಹಮ್ಮದ್ ಸುಜೀತ, ಡಾ:ವಿಕ್ರಮ್ ಆಮಟೆ ಮಾರ್ಗದರ್ಶನದಲ್ಲಿ ಕಾರ್ಯಾಚರಣೆ ಕೈಗೊಳ್ಳಲಾಗಿತ್ತು ಎಂದು ಹೇಳಿದರು.

























