15 ರಂದು ವ್ಯಸನಮುಕ್ತ ಭಾರತ ಅಭಿಯಾನಕ್ಕೆ ಚಾಲನೆ

ಕಲಬುರಗಿ,ಫೆ.13-ಇಲ್ಲಿನ ಸೇಡಂ ರಸ್ತೆಯಲ್ಲಿರುವ ಗೀತಾ ನಗರದ ಬ್ರಹ್ಮಕುಮಾರೀಸ್ ಅಮೃತ ಸರೋವರ ರಿಟ್ರೀಟ್ ಸೆಂmರ್‍ನಲ್ಲಿ ಮಹಾಶಿವರಾತ್ರಿ ಅಂಗವಾಗಿ ಫೆ.14 ಮತ್ತು 15 ರಂದು ವಿವಿಧ ಕಾರ್ಯಕ್ರಮಗಳನ್ನು ಆಯೋಜಿಸಲಾಗಿದೆ ಎಂದು ಬ್ರಹ್ಮಕುಮಾರೀಸ್ ಕಲಬುರಗಿ ವಲಯದ ಮುಖ್ಯಸ್ಥೆ ಬಿ.ಕೆ.ವಿಜಯಾ ದೀದಿ, ಸಂಸ್ಥೆಯ ರಾಷ್ಟ್ರೀಯ ಸಂಯೋಜಕ ಬಿ.ಕೆ.ಪ್ರೇಮಣ್ಣ ತಿಳಿಸಿದರು.
ನಗರದ ಆದರ್ಶ ನಗರದ ಸತ್ಯತೀರ್ಥದಲ್ಲಿ ಗುರುವಾರ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜಸ್ಥಾನದ ಅಬು ಪರ್ವತದ ವೈದ್ಯಕೀಯ ವಿಭಾಗದ ಕಾರ್ಯದರ್ಶಿ ಡಾ.ಬನಾರಸಿಲಾಲ್ ಸಾಹ, ಎಂಜಿನಿಯರಿಂಗ್ ವಿಭಾಗದ ಸಂಯೋಜಕ ಬಿ.ಕೆ.ಪಿಯೂಷ್ ಪಾಲ್ಗೊಳ್ಳುವರು. ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ ಪಾಟೀಲ ಕಾರ್ಯಕ್ರಮಕ್ಕೆ ಚಾಲನೆ ನೀಡುವರು ಎಂದು ತಿಳಿಸಿದರು.
ವ್ಯಸನಮುಕ್ತ ಅಭಿಯಾನ ಎರಡು ತಿಂಗಳವರೆಗೆ ನಡೆಯಲಿದ್ದು, ಜಿಲ್ಲೆಯ ವಿಶ್ವವಿದ್ಯಾಲಯಗಳು, ಶಾಲೆ, ಕಾಲೇಜುಮ ತಾಲ್ಲೂಕು, ಹೋಬಳಿ ಮಟ್ಟದಲ್ಲಿ ಜನ ಜಾಗೃತಿ ಮೂಡಿಸುವ ಕೆಲಸ ಮಾಡಲಾಗುವುದು. ಕಾರ್ಯಕ್ರಮದಲ್ಲಿ ಶಾಸಕರು, ವರ್ತಕರು, ಗಣ್ಯರು, ಶಿಕ್ಷಣ ತಜ್ಞರು ಭಾಗವಹಿಸಲಿದ್ದಾರೆ. ಸುಸಜ್ಜಿತ ಅಭಿಯಾನದ ವಾಹನ ದೊಡ್ಡ ಎಲ್‍ಇಡಿ ಸ್ಕ್ರೀನ್ ಮತ್ತು ಮಲಗಿರುವ ಕುಂಭಕರ್ಣನ ಮೂರ್ತಿ ಎದ್ದು ಸಂದೇಶ ನೀಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಎರಡು ದಿನಗಳ ಕಾರ್ಯಕ್ರಮದಲ್ಲಿ ಫೆ.14 ರಂದು ಸಂಜೆ 4 ಗಂಟೆಗೆ ಸಂತ ಸಮಾಗಮ ಕಾರ್ಯಕ್ರಮ ನಡೆಯಲಿದ್ದು, ಕಲಬುರಗಿಯ ಶರಣಬಸವೇಶ್ವರ ಸಂಸ್ಥಾನದ ದಾಕ್ಷಾಯಣಿ ಎಸ್.ಅಪ್ಪ ಸೇರಿದಂತೆ 100ಕ್ಕೂ ಹೆಚ್ಚು ಮಠಾಧೀಶರು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಬಿ.ಕೆ.ರಾಗಿಣಿ ಉಪಸ್ಥಿತರಿದ್ದರು.

ನಾಳೆ ಸಂತ ಸಮಾಗಮ
ಗೀತಾ ನಗರದ ಅಮೃತ ಸರೋವರದಲ್ಲಿ ಮಹಾ ಶಿವರಾತ್ರಿ ಪ್ರಯುಕ್ತ ಸಂತ ಸಮಾಗಮ ಕಾರ್ಯಕ್ರಮವು ಫೆ.14 ರಂದು ಸಂಜೆ 4 ಗಂಟೆಗೆ ನಡೆಯಲಿದೆ ಎಂದು ಬಿ.ಕೆ.ವಿಜಯಾ ದೀದಿ ತಿಳಿಸಿದರು.
ಕಲಬುರಗಿ, ಬೀದರ್ ಮತ್ತು ಯಾದಗಿರಿ ಜಿಲ್ಲೆಗಳಿಂದ ವಿವಿಧ ಸಂತರು, ಮಠಾಧೀಶರು ಸೇರಿದಂತೆ 100ಕ್ಕೂ ಹೆಚ್ಚು ಜನ ಸ್ವಾಮೀಜಿಗಳು ಭಾಗಿಯಾಗಲಿದ್ದಾರೆ ಎಂದು ತಿಳಿಸಿದರು.


ಅಮೃತ ಸರೋವರದಲ್ಲಿ ಅರಳಿದ ಸ್ವರ್ಣಲಿಂಗ

ಹತ್ತು ವರ್ಷಗಳಿಂದ ಪ್ರಜಾಪಿತ ಬ್ರಹ್ಮಾಕುಮಾರೀಸ್ ಈಶ್ವರೀಯ ವಿಶ್ವವಿದ್ಯಾಲಯದ ಅಮೃತ ಸರೋವರದಲ್ಲಿ ಮಹಾ ಶಿವರಾತ್ರಿಯನ್ನು ವಿಶೇಷವಾಗಿ ಆಚರಿಸಲಾಗುತ್ತಿದೆ. ಈ ಬಾರಿ ಮೀನಕಾರಿ ಕಲೆಯಲ್ಲಿ 47 ಅಡಿ ಎತ್ತರದ ಸ್ವರ್ಣಲಿಂಗ ವ್ಯವಸ್ಥೆ ಮಾಡಲಾಗಿದೆ. ವಿಶೇಷವಾಗಿ ಅಲ್ಯುಮಿನಿಯಂ ಶೀಟ್ ಗೋಲ್ಡ್ ಕೋಟೆಡ್‍ನಿಂದ ಸ್ವರ್ಣಲಿಂಗವನ್ನು ಅಲಂಕರಿಸಲಾಗಿದೆ. ಪ್ರತಿವರ್ಷ 40 ಸಾವಿರಕ್ಕೂ ಅಧಿಕ ಭಕ್ತರು ಅಮೃತ ಸರೋವರಕ್ಕೆ ಭೇಟಿ ನೀಡಿ ದರ್ಶನ ಪಡೆಯಲಿದ್ದಾರೆ. ಈ ಬಾರಿಯೂ ಸ್ವರ್ಣಲಿಂಗ ಸಾರ್ವಜನಿಕರಿಗೆ ಫೆ.14 ರಿಂದ ದರ್ಶನ ಸಿಗಲಿದೆ ಎಂದು ಬ್ರಹ್ಮಾಕುಮಾರೀಸ್ ಕಲಬುರಗಿ ವಲಯದ ಮುಖ್ಯಸ್ಥರಾದ ಬಿ.ಕೆ.ವಿಜಯಾ ದೀದಿ ತಿಳಿಸಿದರು.