Home ಜಿಲ್ಲೆ ಕಲಬುರಗಿ ಡಾ.ಡಿ.ಎನ್.ಪಾಟೀಲ್ ಮನೆ ಗ್ರಂಥಾಲಯ 8 ಸಾವಿರ ಕೃತಿ ಸಂಗ್ರಹ-ಸನ್ಮಾನ

ಡಾ.ಡಿ.ಎನ್.ಪಾಟೀಲ್ ಮನೆ ಗ್ರಂಥಾಲಯ 8 ಸಾವಿರ ಕೃತಿ ಸಂಗ್ರಹ-ಸನ್ಮಾನ

ಕಲಬುರಗಿ,ಮಾ.4- ಕನ್ನಡ ಪುಸ್ತಕ ಪ್ರಾಧಿಕಾರದ “ಮನೆಗೊಂದು ಗ್ರಂಥಾಲಯ”ಅಭಿಯಾನವು ಓದುವ ಸಂಸ್ಕೃತಿಗೆ ಪ್ರೇರಣೆ ನೀಡುತ್ತದೆ ಎಂದು ಆಕಾಶವಾಣಿಯ ನಿವೃತ್ತ ಕಾರ್ಯಕ್ರಮದ ಡಾ. ಸದಾನಂದ ಪೆರ್ಲ ಹೇಳಿದರು. ಕನ್ನಡ ಪುಸ್ತಕ ಪ್ರಾಧಿಕಾರದ ವತಿಯಿಂದ ಕಲಬುರಗಿಯ ಸಾರ್ವಜನಿಕ ಶಿಕ್ಷಣ ಇಲಾಖೆಯ ಬಿ ಆರ್ ಪಿ ಡಾ. ಡಿ ಎನ್ ಪಾಟೀಲ್ ಅವರ ಮನೆಯ 8 ಸಾವಿರಕ್ಕೂ ಅಧಿಕ ಸಂಗ್ರಹ ಇರುವ ಗ್ರಂಥಾಲಯಕ್ಕೆ ಭೇಟಿ ನೀಡಿ ಪ್ರಾಧಿಕಾರದ ವತಿಯಿಂದ ನಡೆದ ಕಾರ್ಯಕ್ರಮವನ್ನು ಮಾರ್ಚ್ 18ರಂದು ಉದ್ಘಾಟಿಸಿ ಸನ್ಮಾನಿಸಿ ಮಾತನಾಡಿದ ಅವರು ಮೊಬೈಲ್ ಮತ್ತು ಆಧುನಿಕ ತಂತ್ರಜ್ಞಾನದಿಂದ ಓದುವ ಸಂಸ್ಕೃತಿ ಮರೆಯಾಗುತ್ತಿರುವ ಸಂದರ್ಭದಲ್ಲಿ ಮನೆಗೊಂದು ಗ್ರಂಥಾಲಯ ಅಭಿಯಾನದ ಮೂಲಕ ಪ್ರಾಧಿಕಾರವು ಸದಭಿರುಚಿಯನ್ನು ಮೂಡಿಸಿ ಜ್ಞಾನ ವಿಸ್ತರಣೆಗೆ ಉತ್ತಮ ನೆರವು ನೀಡುತ್ತಿದೆ. ಸುಮಾರು 8 ಸಾವಿರ ಸಂಗ್ರಹದ ಗ್ರಂಥಗಳಿರುವ ಪುಸ್ತಕಾಲಯ ಸಂಶೋಧಕರಿಗೆ ಮತ್ತು ಜ್ಞಾನಾಸಕ್ತರಿಗೆ ಅನುಕೂಲಕರವಾಗಲಿದೆ. ಇಂತಹ ಗ್ರಂಥಾಲಯ ನಿರ್ಮಾಣ ಮಾಡಿದ ಸಾಧಕರ ಕುರಿತಾಗಿ ಕಿರು ಹೊತ್ತಿಗೆ ಪ್ರಕಟಿಸಿದರೆ ಮನೆಗೊಂದು ಗ್ರಂಥಾಲಯದ ದಾಖಲಾತಿ ಸಾಧ್ಯವಾಗುತ್ತದೆ.ಎಲ್ಲ ಮನೆಗಳಲ್ಲಿ ವಾಸ್ತು, ದೇವರಕೋಣೆ ಇರುವಂತೆ ಪುಸ್ತಕ ಸಂಗ್ರಹಕ್ಕೂ ಕೋಣೆ ಮೀಸಲಿಡಬೇಕು ಎಂದು ಡಾ.ಪೆರ್ಲ ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಸದಸ್ಯರಾದ ಬಿ ಎಚ್ ನಿರಗುಡಿ ಅವರು ಮಾತನಾಡುತ್ತಾ ಕನ್ನಡ ಪುಸ್ತಕ ಪ್ರಾಧಿಕಾರ ಲೇಖಕ,ಪ್ರಕಾಶಕ,ಓದುಗರ ಕೊಂಡಿಯಾಗಿ ಕೆಲಸ ನಿರ್ವಹಿಸತ್ತಿದೆ. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳ ಜೊತೆಗೆ ಮನೆಗೊಂದು ಗ್ರಂಥಾಲಯ ವಿಶಿಷ್ಟ ಕಾರ್ಯಕ್ರಮ ಯುವ ಪೀಳಿಗೆಗೆ ಸಾಹಿತ್ಯವನ್ನು ಅಧ್ಯಯನ ಮಾಡಲು ಹಾಗೂ ಓದುವ ಸಂಸ್ಕೃತಿಯನ್ನು ಬೆಳೆಸಲು ಕನ್ನಡ ಸಾಹಿತ್ಯ ಪಸರಿಸಲು ಇಂತಹ ಕಾರ್ಯಕ್ರಮಗಳು ಅವಶ್ಯಕ.ಡಾ ಡಿ ಎನ್ ಪಾಟೀಲರವರು ಅದ್ಭುತ ಮನೆಯಲ್ಲಿ ಗ್ರಂಥಾಲಯ ನಿರ್ಮಿಸಿದ್ದಾರೆ ಹಾಗಾಗಿ ಅವರನ್ನು ಕನ್ನಡ ಪುಸ್ತಕ ಪ್ರಾಧಿಕಾರ ಅಭಿನಂದನಾ ಪತ್ರ ನೀಡಿ ಗೌರವಿಸಲಾಯಿತು.
ಗ್ರಂಥಾಲಯದ ರೂವಾರಿ ಡಾ. ಡಿ ಎನ್ ಪಾಟೀಲರವರು ನನ್ನ ಜೀವನದ ಅತ್ಯಂತ ಪ್ರೀತಿಯ ಸ್ಥಳ ನಮ್ಮ ಮನೆಯ ಗ್ರಂಥಾಲಯ ಇದನ್ನು ತುಂಬಾ ಶ್ರಮಪಟ್ಟು ನಿರ್ಮಿಸಿದ್ದೇನೆ. ಪುಸ್ತಕ ಓದುವುದರಿಂದ ನನ್ನ ಜೀವನದ ನೆಮ್ಮದಿಯನ್ನು ಕಂಡಿದ್ದೇನೆ.ನನ್ನ ಮಾಸಿಕ ವೇತನದ ಅರ್ಧ ಭಾಗ ಪುಸ್ತಕ ಖರೀದಿಸಲು ಮೀಸಲು ಇಟ್ಟಿದ್ದೇನೆ. ಸಾಹಿತ್ಯದ ವಿವಿಧ ಪ್ರಕಾರಗಳಲ್ಲಿ ಕಥೆ, ಕಾವ್ಯ, ವಿಮರ್ಶೆ,ನಾಟಕ, ವಿಮರ್ಶೆ, ಸಂಶೋಧನೆ, ಜೀವನ ಚರಿತ್ರೆ,ವಚನ,ದಾಸ ಹೀಗೆ ಎಲ್ಲಾ ಪ್ರಕಾರದ ಸಂಪುಟಗಳ ಒಂದು ಬೃಹತ್ ಗಾತ್ರದ ಗ್ರಂಥಾಲಯ ವಾಗಿದೆ ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಜಿಲ್ಲಾ ಜಾಗೃತಿ ಸಮಿತಿಯ ಸದಸ್ಯರಾದ ವಿಜಯಕುಮಾರ್ ರೋಣದ, ಶ್ರೀಶೈಲ್ ಮದಾನೆ, ರೇವಣಸಿದ್ದಪ್ಪ ದುಕಾನ, ಚಾಮರಾಜ ದೊಡ್ಡಮನಿ ಹಾಗೂ ಕುಟುಂಬದವರು ವಿದ್ಯಾರ್ಥಿಗಳು ಇದ್ದರು.