Home ಜಿಲ್ಲೆ ಕಲಬುರಗಿ ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ ನಿಸರ್ಗಗೆ ಡಾ.ಅಜಯ್ ಸಿಂಗ್ ಸತ್ಕಾರ

ಎಸ್‍ಎಸ್‍ಎಲ್‍ಸಿ ಪರೀಕ್ಷೆಯಲ್ಲಿ ತಾಲ್ಲೂಕಿಗೆ ಪ್ರಥಮ ಸ್ಥಾನ ಗಳಿಸಿದ ನಿಸರ್ಗಗೆ ಡಾ.ಅಜಯ್ ಸಿಂಗ್ ಸತ್ಕಾರ

ಕಲಬುರಗಿ,ಏ.26-ಜಿಲ್ಲೆಯ ಯಡ್ರಾಮಿ ತಾಲೂಕಿನ ಇಜೇರಿ ಗ್ರಾಮದ ವಿದ್ಯಾರ್ಥಿನಿ ಕುಮಾರಿ ನಿಸರ್ಗ ಶಂಕರ ದೇಸಾಯಿ, 10ನೇ ತರಗತಿ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡುವ ಮೂಲಕ ತಾಲೂಕಿಗೆ ಕೀರ್ತಿ ತಂದಿದ್ದು ಇವರ ಮನೆಗೆ ಇಂದು ಕೆಕೆಆರ್‍ಡಿಬಿ ಅಧ್ಯಕ್ಷ ಡಾ.ಅಜಯ್ ಸಿಂಗ್ ಭೇಟಿ ನೀಡಿ ಈ ಸಾಧನೆಗಾಗಿ ನಿಸರ್ಗ ದೇಸಾಯಿ ಇವಳನ್ನು ಅಭಿನಂದಿಸಿದರು.
ಜೇವರ್ಗಿ ತಾಲೂಕಿನ ಆದರ್ಶ ವಿದ್ಯಾಲಯ ಚನ್ನೂರ್‍ನಲ್ಲಿ ವ್ಯಾಸಂಗ ಮಾಡಿದ್ದ ನಿಸರ್ಗ ಅವರು, 10ನೇ ತರಗತಿ ಪರೀಕ್ಷೆಯಲ್ಲಿ ಒಟ್ಟು 625 ಅಂಕಗಳ ಪೈಕಿ 620 ಅಂಕಗಳನ್ನು ಪಡೆದು ಜೇವರ್ಗಿ ತಾಲೂಕಿಗೆ ಪ್ರಥಮ ಸ್ಥಾನ ಮತ್ತು ಕಲಬುರಗಿ ಜಿಲ್ಲೆಗೆ ತೃತೀಯ ಸ್ಥಾನ ಗಳಿಸಿ ಸಾಧನೆ ಮಾಡಿದ್ದಾರೆ.
ವಿದ್ಯಾರ್ಥಿನಿಯ ಈ ಅದ್ಭುತ ಸಾಧನೆಯನ್ನು ಗುರುತಿಸಿದ ಜೇವರ್ಗಿ ಕ್ಷೇತ್ರದ ಶಾಸಕರು ಮತ್ತು ಕೆಕೆಆರ್‍ಡಿಬಿ ಅಧ್ಯಕ್ಷರಾದ ಡಾ. ಅಜಯ್ ಧರ್ಮಸಿಂಗ್ ಅವರು, ಕಾಂಗ್ರೆಸ್ ಪಕ್ಷದ ಸ್ಥಳೀಯ ಮುಖಂಡರೊಂದಿಗೆ ವಿದ್ಯಾರ್ಥಿನಿಯ ನಿವಾಸಕ್ಕೆ ತೆರಳಿ ಅಭಿನಂದನೆ ಸಲ್ಲಿಸಿದರು.
ಈ ಸಂದರ್ಭದಲ್ಲಿ ನಿಸರ್ಗ ಅವರನ್ನು ಸನ್ಮಾನಿಸಿದ ಶಾಸಕರು, ಪೆÇೀಷಕರಿಗೂ ಶುಭಾಶಯ ತಿಳಿಸಿದರು. ವಿದ್ಯಾರ್ಥಿನಿಯ ಮುಂದಿನ ಉನ್ನತ ಶಿಕ್ಷಣಕ್ಕೆ ಶುಭ ಹಾರೈಸಿದ ಅವರು, ಇದೇ ರೀತಿಯ ಸಾಧನೆಯನ್ನು ಮುಂದುವರಿಸಿ ಭವಿಷ್ಯದಲ್ಲಿ ಉತ್ತಮ ವ್ಯಕ್ತಿಯಾಗಿ ಹೊರಹೊಮ್ಮಲಿ ಎಂದು ಆಶಿಸಿದರು.
ಗ್ರಾಮೀಣ ಭಾಗದ ವಿದ್ಯಾರ್ಥಿನಿಯೊಬ್ಬಳು ಇಂತಹ ಸಾಧನೆ ಮಾಡಿರುವುದು ಸುತ್ತಮುತ್ತಲ ಗ್ರಾಮಸ್ಥರಲ್ಲಿ ಹರ್ಷ ತಂದಿದೆ. ಈ ವೇಳೆ ಸ್ಥಳೀಯ ಕಾಂಗ್ರೆಸ್ ಮುಖಂಡರು ಹಾಗೂ ಗ್ರಾಮದ ಹಿರಿಯರು ಉಪಸ್ಥಿತರಿದ್ದರು.