
ಬೆಳಗಾವಿ, ಡಿ.೧೮- ಮೊಟ್ಟೆಯಲ್ಲಿ ಕ್ಯಾನ್ಸರ್‌ಕಾರಕ ಅಂಶಗಳಿವೆ ಎಂಬ ವರದಿಗಳ ಬಗ್ಗೆ ವಿಧಾನಸಭೆಯಲ್ಲಿಂದು ಸ್ಪಷ್ಟನೆ ನೀಡಿದ ಆರೋಗ್ಯ ಸಚಿವ ದಿನೇಶ್‌ಗುಂಡೂರಾವ್, ಯಾರೂ ಮೊಟ್ಟೆಯ ಬಗ್ಗೆ ಯಾರೂ ಯಾವುದೇ ರೀತಿಯ ಆತಂಕಪಡುವ ಅಗತ್ಯವಿಲ್ಲ ಎಲ್ಲರೂ ಮೊಟ್ಟೆ ತಿನ್ನಬಹುದು. ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಶಾಲಾ ಮಕ್ಕಳಿಗೆ ಕೊಡುತ್ತಿರುವ ಮೊಟ್ಟೆ ದರ ಏರಿಕೆ ಸಂಬಂಧ ವಿಧಾನಸಭೆಯಲ್ಲಿ ಪ್ರಸ್ತಾಪಿಸಿದ ಸಂದರ್ಭದಲ್ಲಿ ಸದಸ್ಯರೊಬ್ಬರು ಮಾತನಾಡಿ, ಮೊಟ್ಟೆ ಬಗ್ಗೆ ಕೆಲವು ಆತಂಕಕಾರಿ ವರದಿಗಳು ಬರುತ್ತಿವೆ. ಈ ಬಗ್ಗೆ ಆರೋಗ್ಯ ಸಚಿವರು ಸ್ಪಷ್ಟನೆ ಕೊಡಬೇಕು ಎಂದು ಹೇಳಿದಾಗ ಆರೋಗ್ಯ ಸಚಿವರು, ಯಾವುದೇ ರೀತಿಯ ಆತಂಕ ಬೇಡ ನಾವು ೧೪೭ ಮಾದರಿಯ ಮೊಟ್ಟೆಗಳನ್ನು ಪರೀಕ್ಷಿಸಿದ್ದೇವೆ. ಅದರಲ್ಲಿ ಒಂದು ಮಾದರಿ ಮಾತ್ರ ಫೇಲಾಗಿದೆ. ಉಳಿದಂತೆ ಯಾವುದೇ ಆತಂಕ ಇಲ್ಲ. ಮೊಟ್ಟೆ ತಿನ್ನಬಹುದು. ಆರೋಗ್ಯಕ್ಕೆ ಒಳ್ಳೆಯದು ಎಂದು ಹೇಳಿದರು.
ಹಣ ಏರಿಕೆ ಪರಿಶೀಲನೆ
ಮೊಟ್ಟೆ ವಿತರಿಸಲು ನೀಡುತ್ತಿರುವ ಹಣವನ್ನು ಏರಿಕೆ ಮಾಡುವ ಬಗ್ಗೆ ಸರ್ಕಾರ ಪರಿಶೀಲನೆ ನಡೆಸಿದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧು ಬಂಗಾರಪ್ಪ ವಿಧಾನಸಭೆಯಲ್ಲಿಂದು ಹೇಳಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ಹರೀಶ್ ಪೂಂಜಾ ಅವರ ಪ್ರಶ್ನೆಗೆ ಉತ್ತರಿಸಿದ ಸಚಿವರು, ಪ್ರಸ್ತುತ ಬಿಸಿಯೂಟ ಯೋಜನೆಯಡಿ ವಾರಕ್ಕೆ ೬ ದಿನ ಪೌಷ್ಠಿಕ ಆಹಾರವಾಗಿ ಮೊಟ್ಟೆ ಅಥವಾ ಬಾಳೆಹಣ್ಣನ್ನು ವಿತರಿಸಲಾಗುತ್ತಿದೆ. ಮೊಟ್ಟೆ ವಿತರಣೆಗೆ ಸರ್ಕಾರ ವಾರಕ್ಕೆ ಎರಡು ದಿನ ಪ್ರತಿ ವಿದ್ಯಾರ್ಥಿಗೆ ಐದು ರೂಪಾಯಿ ನೀಡುತ್ತಿದೆ.
ಉಳಿದಿದ್ದನ್ನು ಅಜೀಂ ಪ್ರೇಮ್‌ಜಿ ಸಂಸ್ಥೆ ವಿತರಿಸುತ್ತಿದೆ. ಮೊಟ್ಟೆಗೆ ನೀಡುತ್ತಿರುವ ಹಣ ಕಡಿಮೆ ಇದ್ದು, ಉಳಿದ ಹಣವನ್ನು ಶಾಲಾ ಅಭಿವೃದ್ಧಿ ಸಮಿತಿ ಹಾಗೂ ಶಿಕ್ಷಕರು ಭರಿಸುತ್ತಿದ್ದಾರೆ ಎಂಬ ವರದಿ ಹಿನ್ನೆಲೆಯಲ್ಲಿ ಮೊಟ್ಟೆಗೆ ನೀಡುತ್ತಿರುವ ಹಣ ಏರಿಕೆಗೆ ಚಿಂತನೆ ನಡೆಸಿದ್ದೇವೆ. ಈ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಮಾತನಾಡಿ ಒಂದು ತೀರ್ಮಾನ ಕೈಗೊಳ್ಳಲಾಗುವುದು ಎಂದರು.
ಈ ಹಂತದಲ್ಲಿ ಮಾತನಾಡಿದ ವಿಧಾನಸಭಾಧ್ಯಕ್ಷ ಯು.ಟಿ. ಖಾದರ್ ನೀವುಮೊಟ್ಟೆಗೆ ಹಣ ಜಾಸ್ತಿ ಮಾಡಿದರೆ ಮೊಟ್ಟೆ ಮಾರಾಟಗಾರರು ಹಣ ಜಾಸ್ತಿ ಮಾಡುತ್ತಾರೆ. ಹಾಗಾಗಿ ಈ ಸಮಸ್ಯೆಗೆ ಪರಿಹಾರ ಸಿಗಬೇಕು ಎಂದರೆ ವರ್ಷದ ಟೆಂಡರ್ ಮಾಡಿ ಮೊಟ್ಟೆ ದರ ನಿಗದಿ ಮಾಡಿ ಎಂದು ಸಚಿವರಿಗೆ ಸೂಚನೆ ನೀಡಿದರು.



























