Home ಮುಖಪುಟ ಸುದ್ದಿ ಕೈ ಶಾಸಕರಿಗೆ ಡಿಕೆಶಿ ಔತಣ ಕೂಟ

ಕೈ ಶಾಸಕರಿಗೆ ಡಿಕೆಶಿ ಔತಣ ಕೂಟ

ಬೆಂಗಳೂರು, ಮಾ. ೧೦- ಕರ್ನಾಟಕ ಪ್ರದೇಶ ಕಾಂಗ್ರೆಸ್ ಅಧ್ಯಕ್ಷರಾಗಿ ೬ ವರ್ಷ ಪೂರೈಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇಂದು ರಾತ್ರಿ ಎಲ್ಲಾ ಕಾಂಗ್ರೆಸ್ ಶಾಸಕರಿಗೆ ಔತಣಕೂಟ ಆಯೋಜಿಸಿದ್ದಾರೆ.


ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಕಾಂಗ್ರೆಸ್ ಶಾಸಕರಿಗೆ ರಾತ್ರಿ ಔತಣಕೂಟ ಆಯೋಜಿಸಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೂ ಔತಣಕೂಟದಲ್ಲಿ ಭಾಗಿಯಾಗುವಂತೆ ಆಹ್ವಾನ ನೀಡಿದ್ದಾರೆ.


ಅಧಿಕಾರ ಹಂಚಿಕೆಯ ವಿಚಾರ ಕಾಂಗ್ರೆಸ್‌ನಲ್ಲಿ ಬೂದಿಮುಚ್ಚಿದ ಕೆಂಡದಂತಿರುವಾಗಲೇ ಉಪಮುಖ್ಯಮಂತ್ರಿ ಹಾಗೂ ಕೆಪಿಸಿಸಿ ಅಧ್ಯಕ್ಷರು ಎಲ್ಲಾ ಶಾಸಕರಿಗೆ ಔತಣಕೂಟ ಆಯೋಜಿಸಿರುವುದು ರಾಜಕೀಯವಾಗಿ ಮಹತ್ವ ಪಡೆದುಕೊಂಡಿದೆ.


ಈ ಔತಣಕೂಟದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಸೇರಿದಂತೆ ಕಾಂಗ್ರೆಸ್‌ನ ಎಲ್ಲಾ ಶಾಸಕರು ಪಾಲ್ಗೊಳ್ಳಲಿದ್ದಾರೆ.


ಕೆಪಿಸಿಸಿ ಅಧ್ಯಕ್ಷರಾಗಿ ೬ ವರ್ಷ ಪೂರ್ಣ


ಉಪಮುಖ್ಯಮಂತ್ರಿಯಾಗಿರುವ ಡಿ.ಕೆ. ಶಿವಕುಮಾರ್ ಅವರು ಕೆಪಿಸಿಸಿ ಸಾರಥ್ಯ ವಹಿಸಿಕೊಂಡು ೬ ವರ್ಷ ಪೂರೈಸಿದ್ದಾರೆ.


೨೦೨೦ ಮಾರ್ಚ್ ೧೧ ರಂದು ಕೆಪಿಸಿಸಿ ಅಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ಪಕ್ಷದ ಸಂಘಟನೆಗೆ ಹೊಸ ಶಕ್ತಿ ತುಂಬಿ ೨೦೨೩ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ರಾಜ್ಯದಲ್ಲಿ ಅಧಿಕಾರಕ್ಕೆ ತರಲು ದೊಡ್ಡ ಕೊಡುಗೆಯನ್ನೇ ನೀಡಿದ್ದರು.


ಹಾಗೆಯೇ ೨೦೨೪ರ ಲೋಕಸಭಾ ಚುನಾವಣೆಯಲ್ಲೂ ಕಾಂಗ್ರೆಸ್ ಪಕ್ಷಕ್ಕೆ ಹೆಚ್ಚು ಸ್ಥಾನಗಳು ಬರುವಂತೆ ಸಂಘಟನಾತ್ಮಕವಾಗಿ ಕೆಲಸ ಮಾಡಿದ್ದರು.


ಕೆಪಿಸಿಸಿ ಅಧ್ಯಕ್ಷರಾಗಿ ೬ ವರ್ಷ ಪೂರೈಸಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರಿಗೆ ಅಭಿನಂದನೆಗಳ ಮಹಾಪೂರವೇ ಹರಿದು ಬಂದಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಎಲ್ಲಾ ಸಚಿವರು, ಶಾಸಕರು, ಮುಖಂಡರು ಹಾಗೂ ಕಾರ್ಯಕರ್ತರುಗಳು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರನ್ನು ಅಭಿನಂದಿಸಿದ್ದಾರೆ.

ನಾಳೆ ವಿವರ ನೀಡುವೆ

ಕೆಪಿಸಿಸಿ ಅಧ್ಯಕ್ಷರಾಗಿ ೬ ವರ್ಷ ಪೂರೈಸಿರುವ ಬಗ್ಗೆ ಬೆಂಗಳೂರಿನಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿರುವ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ರವರು ಪಕ್ಷದ ಅಧ್ಯಕ್ಷರಾದ ಮೇಲೆ ಪಕ್ಷಕ್ಕೆ ಯಾವ ರೀತಿ ಶಕ್ತಿ ತುಂಬಿ, ಸಂಘಟನಾತ್ಮಕವಾಗಿ ಏನೆಲ್ಲಾ ಕಾರ್ಯಕ್ರಮಗಳನ್ನು ಮಾಡಲಾಗಿದೆ ಎಂಬ ಬಗ್ಗೆ ನಾಳೆ ಸುದ್ದಿಗೋಷ್ಠಿಯಲ್ಲಿ ವಿವರವಾಗಿ ಮಾತನಾಡುವುದಾಗಿ ಹೇಳಿದರು.


ಇಂದು ಪಕ್ಷದ ಶಾಸಕರು, ಸಂಸದರು ಹಾಗೂ ಬೆಂಗಳೂರಿನಲ್ಲಿರುವ ಎಐಸಿಸಿ ಕಾರ್ಯದರ್ಶಿಗಳು ಎಲ್ಲರಿಗೂ ಔತಣಕೂಟ ಆಯೋಜಿಸಿದ್ದೇನೆ. ನಾಳೆ ಪಕ್ಷದ ಅಧ್ಯಕ್ಷನಾಗಿ ಸಂಘಟನಾತ್ಮಕವಾಗಿ ಏನೆಲ್ಲಾ ಮಾಡಿದ್ದೇನೆ ಎಂಬ ಬಗ್ಗೆ ಮಾತನಾಡುತ್ತೇನೆ ಎಂದು ಹೇಳಿದರು.