Home ಜಿಲ್ಲೆ ಬೆಂಗಳೂರು ಚಾಮರಾಜನಗರ ತಾಲ್ಲೂಕಿಗೆ ಡಾ: ರಾಜ್ ಹೆಸರು ನಾಮಕರಣಕ್ಕೆ ಒತ್ತಾಯ

ಚಾಮರಾಜನಗರ ತಾಲ್ಲೂಕಿಗೆ ಡಾ: ರಾಜ್ ಹೆಸರು ನಾಮಕರಣಕ್ಕೆ ಒತ್ತಾಯ

ಬೆಂಗಳೂರು, ಮೇ.೮: ಕರ್ನಾಟಕದ ಸಾಂಸ್ಕೃತಿಕ ರಾಯಭಾರಿ, ಕರ್ನಾಟಕ ರತ್ನ, ಪದ್ಮಭೂಷಣ ಡಾ. ರಾಜ್ ಕುಮಾರ್ ಅವರಿಗೆ ಸಮರ್ಪಕ ಗೌರವ ಸಲ್ಲಿಸಬೇಕೆಂದು ವಿವಿಧ ಬೇಡಿಕೆಗಳನ್ನು ಮುಂದಿರಿಸಿ “ಅಖಿಲ ಕರ್ನಾಟಕ ಡಾ|| ರಾಜ್ ಕುಮಾರ್ ಅಭಿಮಾನಿ ಸಂಘಗಳ ಒಕ್ಕೂಟ” ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದೆ.


ಕನ್ನಡ ನಾಡು, ನೆಲ, ಜಲ ಮತ್ತು ಭಾಷೆಗಾಗಿ ಅಪಾರ ಸೇವೆ ಸಲ್ಲಿಸಿದ ಡಾ. ರಾಜ್ ಕುಮಾರ್ ಅವರು ತಮ್ಮ ಸರಳತೆ, ಸಾಮಾಜಿಕ ಬದ್ಧತೆ ಮತ್ತು ಹೋರಾಟಗಳ ಮೂಲಕ ಜನಮನ ಗೆದ್ದ ಅಪರೂಪದ ವ್ಯಕ್ತಿತ್ವ ಎಂದು ಸಂಘಟನೆ ವಿವರಿಸಿದೆ. ೨,೩೦೦ ವರ್ಷಗಳ ಕನ್ನಡ ಇತಿಹಾಸದಲ್ಲೇ ಅತ್ಯಂತ ಜನಪ್ರಿಯ ವ್ಯಕ್ತಿಯಾಗಿ ಗುರುತಿಸಿಕೊಂಡಿದ್ದರೂ, ಅವರು ಜನಾಭಿಮಾನವನ್ನು ದುರುಪಯೋಗಪಡಿಸಿಕೊಳ್ಳದೆ ಕೇವಲ ಕಲಾವಿದರಾಗಿಯೇ ಉಳಿದಿರುವುದು ವಿಶೇಷವೆಂದು ಅಖಿಲ ಕರ್ನಾಟಕ ಡಾ ರಾಜಕುಮಾರ ಅಭಿಮಾನಿಗಳ ಒಕ್ಕೂಟದ ಗೌರವ ಅಧ್ಯಕ್ಷ ಎನ್ ಅರ್ ರಮೇಶ್ ತಿಳಿಸಿದರು.


೨೦೨೮-೨೯ರಲ್ಲಿ ಅವರ ಜನ್ಮ ಶತಮಾನೋತ್ಸವವನ್ನು ಅರ್ಥಪೂರ್ಣವಾಗಿ ಆಚರಿಸಲು ರಾಜ್ಯ ಸರ್ಕಾರ ಮುಂದಾಗಬೇಕು ಎಂದು ಒತ್ತಾಯಿಸಿ, ಉಪ ಮುಖ್ಯಮಂತ್ರಿ ಡಿ. ಕೆ. ಶಿವಕುಮಾರ್ ಅವರಿಗೆ ಈ ಕೆಳಕಂಡ ಪ್ರಮುಖ ಬೇಡಿಕೆಗಳನ್ನು ಸಲ್ಲಿಸಲಾಗಿದೆ:


ಡಾ. ರಾಜ್ ಕುಮಾರ್ ಅವರಿಗೆ ಮರಣೋತ್ತರ “ಭಾರತ ರತ್ನ” ಪ್ರಶಸ್ತಿ ನೀಡಲು ಕೇಂದ್ರಕ್ಕೆ ಶಿಫಾರಸು
ಚಾಮರಾಜನಗರ ತಾಲ್ಲೂಕಿಗೆ “ಡಾ. ರಾಜ್ ಕುಮಾರ್ ತಾಲ್ಲೂಕು” ಎಂದು ನಾಮಕರಣ
ಬೆಂಗಳೂರು ಮತ್ತು ಚಾಮರಾಜನಗರದಲ್ಲಿ ೧೦೦ ಅಡಿ ಎತ್ತರದ ಕಂಚಿನ ಪ್ರತಿಮೆಗಳ ಸ್ಥಾಪನೆ
ಬೆಂಗಳೂರು ಅಂತರರಾಷ್ಟ್ರೀಯ ವಿಮಾನ ನಿಲ್ದಾಣದ ಟರ್ಮಿನಲ್-೨ಗೆ ಅವರ ಹೆಸರಿಡುವ ಕ್ರಮ
ಮಾಗಡಿ ರಸ್ತೆ ಮೆಟ್ರೋ ನಿಲ್ದಾಣಕ್ಕೆ ಡಾ. ರಾಜ್ ಕುಮಾರ್ ಹೆಸರು
ಏಪ್ರಿಲ್ ೨೪ನ್ನು “ಅಂತರರಾಷ್ಟ್ರೀಯ ಕಲಾವಿದರ ದಿನ” ಎಂದು ಘೋಷಣೆ
ಮೈಸೂರಿನ ಫಿಲ್ಮ್ ಸಿಟಿಗೆ “ಡಾ. ರಾಜ್ ಕುಮಾರ್ ಚಲನಚಿತ್ರ ನಗರಿ” ನಾಮಕರಣ
ಚಿತ್ರರಂಗದ ಕಾರ್ಮಿಕರಿಗೆ “ಡಾ. ರಾಜ್ ಕುಮಾರ್ ಸಹಾಯಧನ” ಯೋಜನೆ
ಪ್ರತೀ ವರ್ಷ ರಾಜ್ಯಾದ್ಯಂತ ಡಾ. ರಾಜ್ ಕುಮಾರ್ ಜಯಂತಿ ಕಡ್ಡಾಯ ಆಚರಣೆ


ಇದೇ ವೇಳೆ, ಬೆಂಗಳೂರಿನ ಕಂಠೀರವ ಸ್ಟುಡಿಯೋದಲ್ಲಿರುವ ಡಾ. ರಾಜ್ ಕುಮಾರ್ ಅವರ ಪುಣ್ಯಭೂಮಿಗೆ ಅಗತ್ಯ ಮೂಲಸೌಕರ್ಯ ಒದಗಿಸುವಂತೆ ಸಹ ಒತ್ತಾಯಿಸಲಾಗಿದೆ. ಪ್ರತಿದಿನ ಸಾವಿರಾರು ಅಭಿಮಾನಿಗಳು ಭೇಟಿ ನೀಡುತ್ತಿದ್ದರೂ, ನೆರಳು, ಮೇಲ್ಚಾವಣಿ, ಶೌಚಾಲಯ ಸೇರಿದಂತೆ ಮೂಲಭೂತ ಸೌಲಭ್ಯಗಳ ಕೊರತೆ ಇರುವುದರಿಂದ ಸಾರ್ವಜನಿಕರಿಗೆ ತೊಂದರೆ ಉಂಟಾಗುತ್ತಿದೆ ಎಂದು ಸಂಘಟನೆ ಗಮನ ಸೆಳೆದಿದೆ.


ಹೀಗಾಗಿ, ಈ ಸ್ಮಾರಕ ಸ್ಥಳವನ್ನು ಸಮಗ್ರವಾಗಿ ಅಭಿವೃದ್ಧಿಪಡಿಸಲು ಸರ್ಕಾರ ತಕ್ಷಣ ಅನುದಾನ ಬಿಡುಗಡೆ ಮಾಡಿ ಕ್ರಮ ಕೈಗೊಳ್ಳಬೇಕು ಎಂದು ಒಕ್ಕೂಟ ಆಗ್ರಹಿಸಿದೆ.