ವಾಯುಮಾಲಿನ್ಯಕ್ಕೆ ಅಂಕುಶ: ದೆಹಲಿಯಲ್ಲಿ ಹಳೆ ವಾಹನಗಳ ನಿರ್ಬಂಧ

ನವದೆಹಲಿ,ಡಿ-೧೮- ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಹೆಚ್ಚುತ್ತಿರುವ ವಾಯುಮಾಲಿನ್ಯದ ಹಿನ್ನೆಲೆಯಲ್ಲಿ ಹಳೆಯ ಕಾರು ಮತ್ತು ವಾಹನಗಳ ಸಂಚಾರಕ್ಕೆ ನಿರ್ಬಂಧ ಹೇರಿದ್ದು ನಿಯಮ ಪಾಲಿಸದಿದ್ದರೆ ೨೦ ಸಾವಿರ ದಂಡ ಅಥವಾ ದೆಹಲಿ ಗಡಿಯಿಂದ ಹೊರ ಹಾಕುವುದಾಗಿ ದೆಹಲಿ ಪೊಲೀಸರು ಎಚ್ಚರಿಕೆ ನೀಡಿದ್ದಾರೆ.


ದೆಹಲಿ ವಾಯು ಮಾಲಿನ್ಯ ಮೇಲ್ವಿಚಾರಣೆಯು ಬಿಎಸ್ ಮಾನದಂಡಗಳು ಮತ್ತು ಕೇಂದ್ರ ಪರಿಸರ ಮಾಲಿನ್ಯ ಮಂಡಳಿ-ಪಿಯುಸಿಸಿ ಸಿಂಧುತ್ವ ತಕ್ಷಣ ಪರಿಶೀಲಿಸಲು ವಾಹನ ನೋಂದಣಿ ಸಂಖ್ಯೆಗಳನ್ನು ನಮೂದಿಸುವ ಪೊರ್ಟಬಲ್ ಯಂತ್ರಗಳನ್ನು ಅವಳವಡಿಸುವ ಮೂಲಕ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲು ದೆಹಲಿ ಸರ್ಕಾರ ಮುಂದಾಗಿದೆ.


ಬೆಳಿಗ್ಗೆ ಮಬ್ಬು ಕವಿದ ವಾತಾವರಣದಲ್ಲಿ ಡಿಎನ್‌ಡಿ ಫ್ಲೈವೇಯಲ್ಲಿ ದೆಹಲಿ-ನೋಯ್ಡಾ ಗಡಿಯಲ್ಲಿ ವಿಷಕಾರಿ ಹೊಗೆಯ ದಪ್ಪ ಪದರ ಆವರಿಸಿದೆ, ಹತ್ತಿರದ ಚಿಲ್ಲಾ ಗಡಿಯಲ್ಲಿ ಗಾಳಿಯ ಗುಣಮಟ್ಟ ’ಅಪಾಯಕಾರಿ’ ವರ್ಗಕ್ಕೆ ಇಳಿದ್ದು ಸುಮಾರು ೪೯೦ ರ ವಾಯು ಸೂಚ್ಯಂಕ ದಾಖಲಿಸಿದೆ. ದೆಹಲಿ ಪೊಲೀಸರು ಮತ್ತು ಸಾರಿಗೆ ಅಧಿಕಾರಿಗಳು ವಾಹನಗಳ ಕಟ್ಟುನಿಟ್ಟಿನ ತಪಾಸಣೆ ಕೈಗೊಂಡಿದ್ದಾರೆ.


ಕಾರ್ಯಾಚರಣೆಗಳ ಮೇಲ್ವಿಚಾರಣೆ ನಡೆಸುತ್ತಿರುವ ದೆಹಲಿ ಸಾರಿಗೆ ಇಲಾಖೆ ಅಧಿಕಾರಿ ದೀಪಕ್, “ದೆಹಲಿಯ ಹೊರಗೆ ನೋಂದಾಯಿಸಲಾದ ಬಿಎಸ್ ೬ ಅಲ್ಲದ ವಾಣಿಜ್ಯ ಮತ್ತು ಖಾಸಗಿ ವಾಹನಗಳನ್ನು ಕಟ್ಟುನಿಟ್ಟಾಗಿ ಪರಿಶೀಲಿಸುತ್ತಿದ್ದೇವೆ. ಉಲ್ಲಂಘಿಸುವವರು ರೂ.೨೦,೦೦೦ ದಂಡ ಕಟ್ಟಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ.


ಯು-ಟರ್ನ್ ಮಾಡಲು ಒತ್ತಾಯಿಸಲಾಗುತ್ತದೆ. ನವೀಕರಿಸಿದ ಮಾಲಿನ್ಯ ನಿಯಂತ್ರಣ ಪ್ರಮಾಣಪತ್ರಗಳನ್ನು -ಪಿಯುಸಿ ಪಡೆಯದ ಚಾಲಕರಿಗೂ ದಂಡ ವಿಧಿಸುತ್ತಿದ್ದೇವೆ. ವಾಹನ ಸಂಚಾರ ನಿಧಾನಗೊಳಿಸಲು ದೆಹಲಿ ಪೊಲೀಸರ ಬ್ಯಾರಿಕೇಡ್‌ಗಳನ್ನು ಸಾಲುಗಟ್ಟಿ ನಿಲ್ಲಿಸಲಾಗಿದೆ ಎಂದು ಮಾಹಿತಿ ಹಂಚಿಕೊಂಡಿದ್ದಾರೆ


“ಹಳೆಯದಾಗಿ ಕಾಣುವ ಮತ್ತು ಬಿಎಸ್ ೬ ವಾಹನಗಳನ್ನು ತೋರಿಸುವ ನೀಲಿ ಸ್ಟಿಕ್ಕರ್‌ಳನ್ನು ಹೊಂದಿರದ ಕಾರುಗಳನ್ನು ನಿಲ್ಲಿಸುತ್ತಿದ್ದೇವೆ. ಬಿಎಸ್-೩ ಹೊರಸೂಸುವಿಕೆ ಮಾನದಂಡಗಳ ಅಥವಾ ೧೦ ವರ್ಷ ಹಳೆಯ ಡೀಸೆಲ್ ಮತ್ತು ೧೫ ವರ್ಷ ಹಳೆಯ ಪೆಟ್ರೋಲ್ ವಾಹನಗಳಿಗೆ ದಂಡ ವಿಧಿಸಲು ಸೂಚಿಸಲಾಗಿದೆ ಎಂದು ಉತ್ತರ ಪ್ರದೇಶದ ಸಂಚಾರ ಪೊಲೀಸ್ ಅಧಿಕಾರಿಯೊಬ್ಬರು ಹೇಳಿದ್ದಾರೆ.


ಫರಿದಾಬಾದ್ ನಿವಾಸಿ ರಾಕೇಶ್ ಪ್ರತಿಕ್ರಿಯಿಸಿ ಬಿಎಸ್ ೩ ಹುಂಡೈ ಕ್ರೆಟಾವನ್ನು ಚಾಲನೆ ಮಾಡುವಾಗ ನಿಲ್ಲಿಸಿ ಹತಾಶೆ ವ್ಯಕ್ತಪಡಿಸಿದ್ದಾರೆ “ಕೇಂದ್ರ ಸರ್ಕಾರ ಮಾಲಿನ್ಯವನ್ನು ನಿಯಂತ್ರಿಸಲು ಸಾಧ್ಯವಾಗುತ್ತಿಲ್ಲ, ಅದಕ್ಕಾಗಿ ನಾವುದಂಡವನ್ನು ಪಾವತಿಸಬೇಕಾಗಿದೆ. ಈಗ ಫರಿದಾಬಾದ್‌ನಲ್ಲಿ ವಾಸಿಸುತ್ತಿದ್ದೇನೆ ನಿಯಮದ ಬಗ್ಗೆ ತಿಳಿದಿರಲಿಲ್ಲ. ಸಂಚಾರ ಪೊಲೀಸರು ರಾಂಡಮ್ ಆಗಿ ಕಾರುಗಳನ್ನು ಪರಿಶೀಲಿಸುತ್ತಿದ್ದಾರೆ ಎಂದಿದ್ದಾರೆ.”


’ತೀವ್ರ’ ವಾಯು ಗುಣಮಟ್ಟದ ದಿನಗಳ ನಂತರ, ದೆಹಲಿಯು ರಾಜಧಾನಿಯ ಹೊರಗೆ ನೋಂದಾಯಿಸಲಾದ ಬಿಎಸ್-೪ ಅಲ್ಲದ ವಾಹನಗಳನ್ನು ನಿಷೇಧಿಸಲಾಗಿದೆ ಎಂದು ಹೇಳಲಾಗಿದೆ.

‘ನೋ ಪಿಯುಸಿ ನೋ ಫ್ಯೂಯಲ್’


ದೆಹಲಿಯಲ್ಲಿ ಮಿತಿಮೀರುತ್ತಿರುವ ವಾಯುಮಾಲಿನ್ಯಕ್ಕೆ ಅಂಕುಶ ಹಾಕಲು ದೆಹಲಿ ಸರ್ಕಾರ ‘ನೋ ಪಿಯುಸಿ ನೋ ಫ್ಯೂಯಲ್’ ನೀತಿಯನ್ನು ದೆಹಲಿ ಸರ್ಕಾರ ಇಂದಿನಿಂದ ಕಟ್ಟುನಿಟ್ಟಾಗಿ ಜಾರಿಗೊಳಿಸಿದೆ.


ಬಿಸ್-೪ ಮಾನದಂಡಗಳನ್ನು ಪಾಲಿಸದ ಖಾಸಗಿ ವಾಹನಗಳಿಗೆ ದೆಹಲಿ ಪ್ರವೇಶ ನಿರ್ಭಂದಿಸಿದೆ ಮಾಲಿನ್ಯ ಹೊರಸೂಸುವಿಕೆ ನಿಯಂತ್ರಣ ಮಟ್ಟದಲ್ಲಿ ಇಲ್ಲದ ವಾಹನಗಳಿಗೆ ಇಂಧನ ಪೂರೈಕೆ ಮಾಡದಂತೆ ಪೆಟ್ರೋಲ್ ಬಂಕ್ ಮಾಲಿಕರಿಗೆ ಸೂಚಿಸಿದೆ. ಮಾಲಿನ್ಯ ತಡೆಗಟ್ಟುವ ನಿಟ್ಟಿನಲ್ಲಿ ಗಡಿ ಪ್ರದೇಶಗಳೂ ಸೇರಿದಂತೆ ದೆಹಲಿಯಾದ್ಯಂತ ೧೨೬ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದೆ, ಇದರ ಜೊತೆಗೆ ೫೮೦ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದ್ದು, ಪೆಟ್ರೋಲ್ ಪಂಪ್‌ಗಳು ಮತ್ತು ಗಡಿ ಪ್ರದೇಶದಲ್ಲಿ ಸಾರಿಗೆ ಇಲಾಖೆಯ ತಂಡಗಳನ್ನು ನಿಯೋಜಿಸಲಾಗಿದೆ.

ಶೇ.೫೦ ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ


ನವದೆಹಲಿ, ಡಿ.೧೮-ಮಾಲಿನ್ಯದ ಬಗ್ಗೆ ದೆಹಲಿ ಸರ್ಕಾರವು ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ. ಎಲ್ಲಾ ಸರ್ಕಾರಿ ಮತ್ತು ಖಾಸಗಿ ಕಂಪನಿಗಳು ತಮ್ಮ ಉದ್ಯೋಗಿಗಳಲ್ಲಿ ಕೇವಲ ೫೦% ಜನರನ್ನು ಮಾತ್ರ ಕಚೇರಿಗೆ ಬರುವಂತೆ ಆದೇಶಿಸಲಾಗಿದೆ. ಉಳಿದ ೫೦% ಜನರಿಗೆ ಮನೆಯಿಂದಲೇ ಕೆಲಸ ಮಾಡಲು ಅವಕಾಶ ನೀಡಬೇಕು.
ಈ ಆದೇಶವನ್ನು ಪಾಲಿಸದಿದ್ದರೆ ದಂಡ ಪಾವತಿಸಲು ಸಿದ್ಧರಾಗಿರಿ ಎನ್ನುವ ನೋಟೀಸ್ ಜಾರಿ ಮಾಡಿದೆ.


ಸ್ಪಷ್ಟವಾಗಿ ದೆಹಲಿಯಲ್ಲಿ ಮಾಲಿನ್ಯವು ಇದೀಗ ದಾಖಲೆಯ ಮಟ್ಟವನ್ನು ತಲುಪಿದೆ. ಬುಧವಾರ, ದೆಹಲಿಯ ವಾಯು ಗುಣಮಟ್ಟ ಸೂಚ್ಯಂಕ (ಎಕ್ಯೂಐ) ಸುಮಾರು ೩೫೦ ದಾಖಲಾಗಿದೆ.


ದೆಹಲಿ-ಎನ್‌ಸಿಆರ್‌ನಲ್ಲಿ ಪ್ರಸ್ತುತ ಮಂಜು ಮತ್ತು ಮಬ್ಬು ಉತ್ತುಂಗದಲ್ಲಿದೆ.
ಗೋಚರತೆ ತೀರಾ ಕಡಿಮೆಯಾಗಿದೆ. ಇದು ಅನೇಕ ಅಪಘಾತಗಳಿಗೆ ಕಾರಣವಾಗುತ್ತಿದೆ. ಗಾಳಿಯು ವಿಷಕಾರಿಯಾಗಿದ್ದು, ಉಸಿರಾಟ ಕಷ್ಟವಾಗುತ್ತಿದೆ.
ಮಾಲಿನ್ಯವನ್ನು ಕಡಿಮೆ ಮಾಡಲು ದೆಹಲಿ ಸರ್ಕಾರ ಪ್ರಯತ್ನಗಳನ್ನು ಮಾಡುತ್ತಿದೆ.
ದೆಹಲಿಯಲ್ಲಿಯೂ ನಿರ್ಮಾಣ ಕಾರ್ಯಗಳು ಸ್ಥಗಿತಗೊಂಡಿವೆ.