Home ಮುಖಪುಟ ಸುದ್ದಿ ದಾವಣಗೆರೆ ಉಪಸಮರ: ಕೈನಿಂದ ಇಂದು ಅಭ್ಯರ್ಥಿ ಆಯ್ಕೆ ಅಂತಿಮ

ದಾವಣಗೆರೆ ಉಪಸಮರ: ಕೈನಿಂದ ಇಂದು ಅಭ್ಯರ್ಥಿ ಆಯ್ಕೆ ಅಂತಿಮ

ದಾವಣಗೆರೆ:ಮಾ.೨೧- ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಪ್ರಮುಖ ನಾಯಕರೊಂದಿಗೆ ಚರ್ಚೆ ನಡೆಸಿದ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಎಂ. ಸಮರ್ಥ್ ಮತ್ತು ಖಾಲಿದ್ ಸೈಫುಲ್ಲಾ ಅವರ ಹೆಸರನ್ನು ಅಂತಿಮಗೊಳಿಸಿ ವರಿಷ್ಠರಿಗೆ ಕಳುಹಿಸಿದ್ದಾರೆ.

ಇಂದು ಹೈಕಮಾಂಡ್ ನಿಂದ ಇಬ್ಬರಲ್ಲಿ ಒಬ್ಬರ ಹೆಸರು ಪ್ರಕಟಿಸುವುದು ಮಾತ್ರ ಬಾಕಿ ಉಳಿದಿದೆ. ಸಂಜೆ ಅಥವಾ ಬೆಳಿಗ್ಗೆ ಹೆಸರು ಅಂತಿಮವಾಗಲಿದ್ದು ಸೋಮವಾರ ಕಾಂಗ್ರೆಸ್ ನಿಂದ ಅಧಿಕೃತ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಕಾಂಗ್ರೆಸ್ ಟಿಕೆಟ್ ಗಾಗಿ ಪೈಪೋಟಿಗೆ ನಡೆದಿದೆ. ದಾವಣಗೆರೆ ದಕ್ಷಿಣದಲ್ಲಿ ಮುಸ್ಲಿಮರಿಗೆ ಟಿಕೆಟ್ ನೀಡಬೇಕೆಂದು ಪಟ್ಟು ಹಿಡಿಯಲಾಗಿದೆ. ಯಾವುದೇ ಕಾರಣಕ್ಕೂ ಟಿಕೆಟ್ ಬಿಟ್ಟು ಕೊಡುವುದು ಬೇಡ ಎನ್ನುವ ಅಭಿಪ್ರಾಯ ವ್ಯಕ್ತವಾಗಿದೆ. ತಡರಾತ್ರಿ ನಡೆದ ಮುಸ್ಲಿಂ ಮುಖಂಡರ ಸಭೆಯಲ್ಲಿ ಈ ಕುರಿತಾಗಿ ತೀರ್ಮಾನ ಕೈಗೊಳ್ಳಲಾಗಿದೆ.

ಹಳೆ ದಾವಣಗೆರೆಯ ಅಖ್ತರ್ ರಜಾ ವೃತ್ತದಲ್ಲಿ ಸಭೆ ನಡೆಸಲಾಗಿದೆ. ತಡರಾತ್ರಿ ಮುಸ್ಲಿಂ ಮುಖಂಡರು ಮತ್ತು ಯುವಕರು ಸಭೆ ನಡೆಸಿದ್ದಾರೆ. ಈ ದಿನ ಹಬ್ಬ ಮುಗಿದ ತಕ್ಷಣ ನೂರಾರು ಜನ ನಾಮಪತ್ರ ಹಾಕಿ. ಅದು ಏನು ಆಗುತ್ತೋ ಆಗಲಿ ನೋಡೋಣ ಎಂದು ಮುಖಂಡ ಮನ್ಸೂರ್ ಅಲಿ ಹೇಳಿದ್ದಾರೆ.

ನಾಮಿನೇಷನ್ ಮಾಡಿದವರ ಪೈಕಿ ಒಬ್ಬರಿಗೆ ಟಿಕೆಟ್ ಕೇಳೋಣ. ಟಿಕೆಟ್ ಸಿಗದಿದ್ದರೆ ಒಂದು ಕಡೆ ಕುಳಿತು ತೀರ್ಮಾನ ಮಾಡೋಣ. ನಾಮಪತ್ರ ಸಲ್ಲಿಕೆಗೆ ಏನು ದಾಖಲೆ ಬೇಕು ಕೇಳಿ ಮಾಹಿತಿ ನೀಡುತ್ತೇನೆ. ಆದರೆ ದಾವಣಗೆರೆ ದಕ್ಷಿಣ ಟಿಕೆಟ್ ಮಾತ್ರ ಬಿಟ್ಟುಕೊಡುವುದು ಬೇಡ, ಟಿಕೆಟ್ ತಪ್ಪಿದ್ದರೆ ಕಾಂಗ್ರೆಸ್ ಸೋಲಿಸೋಣ ಎಂದು ತಡರಾತ್ರಿ ನಡೆದ ಸಭೆಯಲ್ಲಿ ಚರ್ಚೆಯಾಗಿದೆ ಎನ್ನಲಾಗಿದೆ.