ಅಣೆಕಟ್ಟು ಸುರಕ್ಷತೆ ರಾಷ್ಟ್ರೀಯ ಭದ್ರತೆ ಅಂಶ: ಸಿಎಂ

ಬೆಂಗಳೂರು,ಫೆ.೧೩: ಅಣೆಕಟ್ಟು ಸುರಕ್ಷತೆ ಇದೀಗ ಕೇವಲ ತಾಂತ್ರಿಕ ವಿಷಯವಲ್ಲ, ಅದು ರಾಷ್ಟ್ರೀಯ ಭದ್ರತೆಯ ಅನಿವಾರ್ಯ ಅಂಶವಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟರು.


ಅವರಿಂದು ಬೆಂಗಳೂರಿನ ಭಾರತೀಯ ವಿಜ್ಞಾನ ಸಂಸ್ಥೆ (ಐಐಎಸ್ಸಿ)ಯಲ್ಲಿ ಹಮ್ಮಿಕೊಳ್ಳಲಾದ ಅಂತಾರಾಷ್ಟ್ರೀಯ ಅಣೆಕಟ್ಟು ಸುರಕ್ಷತಾ ಸಮ್ಮೇಳನ?೨೦೨೬ಕ್ಕೆ ಭವ್ಯ ಚಾಲನೆ ದೊರಕಿತು. ಮುಖ್ಯಮಂತ್ರಿ ಅವರು ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.


ಬೆಂಗಳೂರು ನಗರವು ನಾವೀನ್ಯತೆ, ತಂತ್ರಜ್ಞಾನ ಮತ್ತು ಸಂಶೋಧನೆಯ ಕೇಂದ್ರವಾಗಿದ್ದು, ಅಣೆಕಟ್ಟು ಸುರಕ್ಷತೆ ಹಾಗೂ ಸುಸ್ಥಿರ ಜಲ ನಿರ್ವಹಣೆ ಕುರಿತ ಚರ್ಚೆಗೆ ಅತ್ಯಂತ ಸೂಕ್ತ ವೇದಿಕೆಯಾಗಿದೆ ಎಂದು ಅವರು ಹೇಳಿದರು. ಕರ್ನಾಟಕ ದೇಶದಲ್ಲೇ ಅತಿ ಹೆಚ್ಚು ಅಣೆಕಟ್ಟುಗಳನ್ನು ಹೊಂದಿರುವ ರಾಜ್ಯಗಳಲ್ಲಿ ಒಂದಾಗಿದ್ದು, ಸುರಕ್ಷತೆ ವಿಷಯದಲ್ಲಿ ಅನುಭವ ಮತ್ತು ಜವಾಬ್ದಾರಿ ಎರಡನ್ನೂ ಹೊಂದಿದೆ ಎಂದರು.


‘ಸುರಕ್ಷಿತ ಮತ್ತು ಭದ್ರವಾದ ಅಣೆಕಟ್ಟುಗಳು” ಎಂಬ ವಿಷಯದಡಿ ನಡೆಯುತ್ತಿರುವ ಈ ಸಮ್ಮೇಳನದಲ್ಲಿ ವಿವಿಧ ದೇಶಗಳ ತಜ್ಞರು, ನೀತಿ ನಿರೂಪಕರು ಮತ್ತು ಅಭ್ಯಾಸಿಗಳು ಭಾಗವಹಿಸಿದ್ದಾರೆ. ಜಾಗತಿಕ ಸಹಕಾರದ ಮೂಲಕ ಸುಸ್ಥಿರ ಜಲ ಸಂಪನ್ಮೂಲ ನಿರ್ವಹಣೆಗೆ ಹೊಸ ದಿಕ್ಕು ಸಿಗಲಿದೆ ಎಂದು ಅಭಿಪ್ರಾಯಪಟ್ಟರು.


ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರೂ ಅವರು ಅಣೆಕಟ್ಟುಗಳನ್ನು “ಆಧುನಿಕ ಭಾರತದ ದೇವಾಲಯಗಳು” ಎಂದು ಕರೆದಿದ್ದರು ಎಂದು ಉಲ್ಲೇಖಿಸಿದ ಅವರು, ಅಣೆಕಟ್ಟುಗಳು ಕೃಷಿ, ಕೈಗಾರಿಕಾ ಪ್ರಗತಿ ಮತ್ತು ಸಾಮಾಜಿಕ ಅಭಿವೃದ್ಧಿಯ ಜೀವಾಳವಾಗಿವೆ ಎಂದರು.


ಭಾರತದಲ್ಲಿ ಪ್ರಸ್ತುತ ೬,೬೨೮ ನಿರ್ದಿಷ್ಟ ಅಣೆಕಟ್ಟುಗಳಿದ್ದು, ವಿಶ್ವದಲ್ಲಿ ಮೂರನೇ ಅತಿ ದೊಡ್ಡ ಅಣೆಕಟ್ಟುಗಳ ರಾಷ್ಟ್ರವಾಗಿದೆ. ಕರ್ನಾಟಕದಲ್ಲಿ ೨೩೧ ಅಣೆಕಟ್ಟುಗಳಿದ್ದು, ದೇಶದಲ್ಲಿ ಆರನೇ ಸ್ಥಾನದಲ್ಲಿದೆ.


ಮೈಸೂರು ಮಹಾರಾಜರು, ವಿಶೇಷವಾಗಿ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ನೀರಾವರಿ ಅಭಿವೃದ್ಧಿಗೆ ನೀಡಿದ ಪ್ರೋತ್ಸಾಹವನ್ನು ಸ್ಮರಿಸಿದ ಮುಖ್ಯಮಂತ್ರಿ, ನಂತರ ದೇವರಾಜ ಅರಸು ಅವರ ಆಡಳಿತದಲ್ಲಿ ಸಮಾನ ಪ್ರಾದೇಶಿಕ ಅಭಿವೃದ್ಧಿಗೆ ನೀರಾವರಿ ವಿಸ್ತರಣೆ ನಡೆದಿದೆ ಎಂದರು.


ರಾಜ್ಯದ ಸ್ಥಾಪಿತ ಜಲವಿದ್ಯುತ್ ಸಾಮರ್ಥ್ಯ ಸುಮಾರು ೪,೮೦೦ ಮೆಗಾವ್ಯಾಟ್ ಆಗಿದ್ದು, ನೂರಾರು ಟಿಎಂಸಿ ಅಡಿ ನೀರನ್ನು ಸಂಗ್ರಹಿಸುವ ಸಾಮರ್ಥ್ಯವಿರುವ ಜಲಾಶಯಗಳು ಕೃಷಿ ಹಾಗೂ ನಗರ ನೀರಿನ ಅಗತ್ಯ ಪೂರೈಸುತ್ತಿವೆ. ಕೃಷ್ಣಾ ನದಿ ಮತ್ತು ಕಾವೇರಿ ನದಿ ತೀರದ ಜಲಾಶಯ ಯೋಜನೆಗಳು ಲಕ್ಷಾಂತರ ಜನರ ಬದುಕನ್ನು ಸುಸ್ಥಿರಗೊಳಿಸಿವೆ ಎಂದು ಹೇಳಿದರು.


ರಾಜ್ಯದ ಶೇಕಡಾ ೭೦ರಷ್ಟು ಅಣೆಕಟ್ಟುಗಳು ೨೫ ವರ್ಷಕ್ಕಿಂತ ಹಳೆಯವಾಗಿದ್ದು, ಅವುಗಳಿಗೆ ನಿಯಮಿತ ಸುರಕ್ಷತಾ ಮೌಲ್ಯಮಾಪನ, ಆಧುನೀಕರಣ ಮತ್ತು ಅಪಾಯ ಮುನ್ಸೂಚನೆ ವ್ಯವಸ್ಥೆಗಳನ್ನು ತುರ್ತಾಗಿ ಅಳವಡಿಸಬೇಕಾಗಿದೆ ಎಂದು ಅವರು ಒತ್ತಿಹೇಳಿದರು.


ಹವಾಮಾನ ಬದಲಾವಣೆ, ಅತಿವೃಷ್ಟಿ?ಬರಗಾಲ ಚಕ್ರ, ಭೂಕಂಪ ಅಪಾಯ, ಹೂಳು ಶೇಖರಣೆ ಹಾಗೂ ಹಳೆಯ ರಚನೆಗಳ ಮೇಲೆ ಹೆಚ್ಚುತ್ತಿರುವ ಒತ್ತಡವು ಸಂಕೀರ್ಣ ಸವಾಲುಗಳನ್ನು ಸೃಷ್ಟಿಸಿವೆ ಎಂದರು.ಡಿಜಿಟಲ್ ವ್ಯವಸ್ಥೆಯಿಂದ ಕಾರ್ಯನಿರ್ವಹಿಸುವ ಅಣೆಕಟ್ಟುಗಳಿಗೆ ಸೈಬರ್ ಸುರಕ್ಷತೆ ಅತ್ಯವಶ್ಯಕವಾಗಿದೆ. ಜಲ ಮೂಲಸೌಕರ್ಯಗಳು ಭಯೋತ್ಪಾದನೆ ಮತ್ತು ವಿಧ್ವಂಸಕ ಕೃತ್ಯಗಳಿಗೆ ತುತ್ತಾಗುವ ಸಾಧ್ಯತೆ ಇರುವುದರಿಂದ ಗುಪ್ತಚರ ವ್ಯವಸ್ಥೆ ಮತ್ತು ನಿರಂತರ ಎಚ್ಚರಿಕೆ ಅಗತ್ಯವಿದೆ ಎಂದು ಎಚ್ಚರಿಸಿದರು.


ಜಲಾಶಯಗಳಿಂದ ಮೀಥೇನ್ ಅನಿಲ ಹೊರಸೂಸುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ, ಪರಿಸರ ಸ್ನೇಹಿ ಯೋಜನೆಗಳು ಅಗತ್ಯವಿದೆ. ದೊಡ್ಡ ಯೋಜನೆಗಳಿಂದ ಸ್ಥಳಾಂತರಗೊಳ್ಳುವ ಜನರಿಗೆ ಪಾರದರ್ಶಕ ಹಾಗೂ ನ್ಯಾಯಯುತ ಪುನರ್ವಸತಿ ವ್ಯವಸ್ಥೆ ಕಲ್ಪಿಸಬೇಕು ಎಂದರು.


ಕೇಂದ್ರ?ರಾಜ್ಯ ಸರ್ಕಾರಗಳು ನಿಯಮಿತ ತಪಾಸಣೆ, ಸುರಕ್ಷತಾ ಲೆಕ್ಕಪರಿಶೋಧನೆ ಮತ್ತು ತುರ್ತು ಕ್ರಿಯಾ ಯೋಜನೆಗಳನ್ನು ಕಟ್ಟುನಿಟ್ಟಾಗಿ ಜಾರಿಗೆ ತರುವುದು ಅಗತ್ಯ. ನಿಯಂತ್ರಣಾ ಸಂಸ್ಥೆಗಳು ನೈಜ ಸಮಯದ ಮಾಹಿತಿ ಆಧಾರಿತ ನಿರ್ಧಾರ ವ್ಯವಸ್ಥೆಗಳನ್ನು ರೂಪಿಸಬೇಕು. ಶೈಕ್ಷಣಿಕ ಸಂಸ್ಥೆಗಳು ಹವಾಮಾನ ವೈಪರೀತ್ಯ ಮತ್ತು ಹಳೆಯ ಮೂಲಸೌಕರ್ಯದ ಅಪಾಯಗಳನ್ನು ಮುಂಚಿತವಾಗಿ ಗುರುತಿಸುವ ಸಂಶೋಧನೆಗೆ ಒತ್ತು ನೀಡಬೇಕು ಎಂದರು.


ಭಾರತ ಸರ್ಕಾರ, ಕರ್ನಾಟಕ ಸರ್ಕಾರ, ಕೇಂದ್ರ ಜಲ ಆಯೋಗ, ವಿಶ್ವ ಬ್ಯಾಂಕ್ ಹಾಗೂ ಐಐಎಸ್ಸಿ ಸೇರಿದಂತೆ ಅಂತಾರಾಷ್ಟ್ರೀಯ ಪಾಲುದಾರರ ಸಹಯೋಗ ಸಾರ್ವಜನಿಕ ಸುರಕ್ಷತೆಗೆ ಬದ್ಧತೆಯನ್ನು ತೋರಿಸುತ್ತದೆ ಎಂದು ಹೇಳಿದರು.


‘ನಾವು ಎಷ್ಟು ಎತ್ತರದ ಅಣೆಕಟ್ಟುಗಳನ್ನು ನಿರ್ಮಿಸಿದ್ದೇವೆ ಎಂಬುದಲ್ಲ, ಅವನ್ನು ಎಷ್ಟು ಸುರಕ್ಷಿತವಾಗಿ ಉಳಿಸಿಕೊಂಡಿದ್ದೇವೆ ಎಂಬುದೇ ಅಭಿವೃದ್ಧಿಯ ಅಳತೆ” ಎಂದು ಹೇಳಿದ ಅವರು, ಸಮ್ಮೇಳನವು ಸುರಕ್ಷಿತ, ಭದ್ರ ಮತ್ತು ಸ್ಥಿತಿಸ್ಥಾಪಕ ಜಲ ಮೂಲಸೌಕರ್ಯ ನಿರ್ಮಾಣದ ದಿಕ್ಕಿನಲ್ಲಿ ಮೈಲಿಗಲ್ಲಾಗಲಿ ಎಂದು ಆಶಿಸಿದರು.