ದಲಿತ ಸಿಎಂ, ಲಾಬಿ ಮಾಡಿಲ್ಲ

ಬೆಂಗಳೂರು, ಫೆ. ೨೬- ದಲಿತ ಸಿಎಂ ಬಗ್ಗೆ ನಾನು ಯಾವುದೇ ಲಾಬಿ ಮಾಡುತ್ತಿಲ್ಲ. ದಲಿತ ಸಿಎಂ ಗೊಂದಲ ಹೆಚ್ಚು ಮಾಡಲು ನಾನು ತಯಾರಿಲ್ಲ, ಹಾಗೂ ಈ ಗೊಂದಲಕ್ಕೆ ನಾನು ಕೈಜೋಡಿಸಲು ಹೋಗಲ್ಲ ಎಂದು ಗೃಹ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು.


ಬೆಂಗಳೂರಿನಲ್ಲಿಂದು ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ನನ್ನ ಹಿತೈಷಿಗಳು ನನ್ನ ಬಗ್ಗೆ ಘೋಷಣೆಗಳನ್ನು ಕೂಗುತ್ತಿದ್ದಾರೆ, ಒತ್ತಾಯವನ್ನು ಮಾಡುತ್ತಿದ್ದಾರೆ. ಹೀಗೆಲ್ಲಾ ಮಾಡಬೇಡಿ ಎಂದು ನಾನು ಹೇಳಿದ್ದೇನೆ. ದಲಿತ ಸಿಎಂ ಗೊಂದಲಕ್ಕೆ ನಾನು ಕೈಜೋಡಿಸಲ್ಲ. ಈಗಾಗಲೇ ಸಾಕಷ್ಟು ಗೊಂದಲವಾಗಿದೆ ಎಂದರು.
ದಲಿತ ಸಿಎಂ ವಿಚಾರದಲ್ಲಿ ಹೈಕಮಾಂಡ್ ಸೂಕ್ತ ಸಂದರ್ಭದಲ್ಲಿ ಸೂಕ್ತ ತೀರ್ಮಾನ ಮಾಡುತ್ತದೆ. ಹೀಗಾಗಿ ಇದರ ಬಗ್ಗೆ ಹೆಚ್ಚು ವ್ಯಾಖ್ಯಾನ ಅಗತ್ಯವಿಲ್ಲ. ನಾನು ಯಾವ ಲಾಬಿಯನ್ನು ಮಾಡಿಲ್ಲ, ಮಾಡುತ್ತಿಲ್ಲ ಎಂದು ಅವರು ಹೇಳಿದರು.


ನನ್ನ ಹಿತೈಷಿಗಳು, ಅಭಿಮಾನಿಗಳು ನಾನು ಸಿಎಂ ಆಗಬೇಕು ಎಂದು ಆಸೆಪಟ್ಟಿದ್ದಾರೆ. ಬಹಿರಂಗವಾಗಿಯೂ ಹೇಳಿಕೆ ಹಾಗೂ ಘೋಷಣೆಗಳನ್ನು ಕೂಗುತ್ತಾರೆ. ನಾನು ಇದೆಲ್ಲಾ ಬೇಡ ಎಂದು ಅವರಿಗೆ ಹೇಳಿದ್ದೇನೆ. ಎಲ್ಲದರ ಬಗ್ಗೆ ಹೈಕಮಾಂಡ್ ತೀರ್ಮಾನ ಮಾಡುತ್ತದೆ. ಅಲ್ಲಿಯವರೆಗೂ ನಾವು ಈ ಬಗ್ಗೆ ಮಾತನಾಡದಿರುವುದೇ ಸೂಕ್ತ ಎಂದು ಅವರು ಹೇಳಿದರು.


ಗ್ಯಾರಂಟಿಯನ್ನು ಸ್ವಯಂ ಪ್ರೇರಿತವಾಗಿ ಶ್ರೀಮಂತರು ಬಿಡಬೇಕು ಎಂಬ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಗ್ಯಾರಂಟಿ ಯೋಜನೆ ಜಾರಿ ಮಾಡುವಾಗ ನಾವು ಯಾವುದೇ ರೀತಿ ನಿಯಮ ಮಾಡಿರಲಿಲ್ಲ. ಹಣವಂತರು ಗ್ಯಾರಂಟಿ ತೆಗೆದುಕೊಳ್ಳಲ್ಲ ಎಂದು ಯೋಚಿಸಿದ್ದೇವು. ಆದರೆ ೧೦೦ ಎಕರೆ ಜಮೀನು ಇರುವವರೂ ಗ್ಯಾರಂಟಿ ತೆಗೆದುಕೊಳ್ಳುತ್ತಿದ್ದಾರೆ. ಈ ಹಿಂದೆ ಪ್ರಧಾನಿ ಮೋದಿ ಅವರು ಕರೆ ಕೊಟ್ಟಾಗ ಕೆಲವರು ಅಡುಗೆ ಅನಿಲ ಸಬ್ಸಿಡಿಯನ್ನು ಬಿಟ್ಟಿದ್ದರು. ಅದರಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಶ್ರೀಮಂತರು ಗ್ಯಾರಂಟಿ ಬಿಡಿ ಎಂಬ ಕರೆ ಕೊಟ್ಟಿದ್ದಾರೆ ಅಷ್ಟೇ ಎಂದರು.


ಗ್ಯಾರಂಟಿಯಿಂದ ಸರ್ಕಾರಕ್ಕೆ ಹೊರೆಯಾಗುತ್ತಿದೆ ಎಂಬ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು, ಡಿಕೆಶಿ ನಮ್ಮ ಪಕ್ಷದ ಅಧ್ಯಕ್ಷರು. ನಾವೆಲ್ಲಾ ಒಟ್ಟಾಗಿ ಸೇರಿ ಪ್ರಣಾಳಿಕೆ ಸಿದ್ದಪಡಿಸಿದ್ದೇವೆ. ಈಗ ಅವರ ಅಭಿಪ್ರಾಯ ಹೇಳಿದ್ದಾರೆ. ಎಲ್ಲರೂ ಕೂತು ಇದನ್ನು ಬಗೆಹರಿಸಬೇಕು ಎಂದು ತಿಳಿಸಿದರು.


ಧಾರವಾಡದಲ್ಲಿ ಉದ್ಯೋಗಾಕಾಂಕ್ಷಿಗಳು ಉದ್ಯೋಗ ಭರ್ತಿಗೆ ಪ್ರತಿಭಟನೆ ನಡೆಸಿರುವುದು ನಮ್ಮ ಗಮನದಲ್ಲಿದೆ. ಈ ಬಗ್ಗೆ ನಾವು ಇಂದು ಸಂಜೆ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ಮಾಡುತ್ತೇವೆ. ಒಳ ಮೀಸಲಾತಿಯಿಂದ ನೇಮಕಾತಿ ವಿಳಂಬವಾಗಿದೆ. ಇದನ್ನು ಸರಿಪಡಿಸುವ ಬಗ್ಗೆ ಚರ್ಚಿಸಿ ತೀರ್ಮಾನ ಕೈಗೊಳ್ಳುತ್ತೇವೆ ಎಂದರು


ಸರ್ಕಾರ ಮಟ್ಟದಲ್ಲಿ ಖಾಲಿ ಇರುವ ಎರಡೂವರೆ ಲಕ್ಷ ಹುದ್ದೆಗಳನ್ನು ಹಂತ ಹಂತವಾಗಿ ತುಂಬುತ್ತೇವೆ. ಈಗಾಗಲೇ ನಾವು ಎರಡೂವರೆ ವರ್ಷದಲ್ಲಿ ಹಲವಾರು ನೇಮಕಾತಿ ಮಾಡಿದ್ದೇವೆ. ನಮ್ಮ ಇಲಾಖೆಯಲ್ಲಿ ೧೭ ಸಾವಿರ ಹುದ್ದೆಗಳು ಖಾಲಿ ಇವೆ. ನೇಮಕಾತಿ ಮಾಡಲು ನಮಗೆ ಅನುಮತಿ ಸಿಕ್ಕಿದೆ ಎಂದು ಗೃಹ ಸಚಿವರು ಹೇಳಿದರು.


ಅಕ್ರಮ ಚಿನ್ನ ಸಾಕಾಣೆ ಪ್ರಕರಣಕ್ಕೆ ಸಂಬಂದಿಸಿದಂತೆ ಧನ್ಯರಾವ್ ಪ್ರಕರಣದಲ್ಲಿ ಇಡಿ ಆರೋಪ ಪಟ್ಟಿ ಸಲ್ಲಿಸಿರುವ ಬಗ್ಗೆ ನಮಗೆ ಮಾಹಿತಿ ಇಲ್ಲ. ಇಡಿಯವರು ಅವರ ಕೆಲಸ ಮಾಡುತ್ತಾರೆ ಎಂದರು.


ರಾಜ್ಯದಲ್ಲಿ ಅಕ್ರಮವಾಗಿ ನೆಲೆಸಿರುವ ಬಾಂಗ್ಲಾ ವಲಸಿಗರನ್ನು ಪತ್ತೆ ಮಾಡಲು ಆಂದೋಲನವನ್ನೇ ಆರಂಭಿಸಿದ್ದೇವೆ. ಬಾಂಗ್ಲಾ ದೇಶದವರಷ್ಟೇ ಅಲ್ಲ ಇತರೆ ವಿದೇಶಿಯರಾಗಲಿ ವಿಸಾ ಅವಧಿ ಮುಗಿದ ಮೇಲೆ ಅವರನ್ನು ಪತ್ತೆಹಚ್ಚಿ ದೇಶಕ್ಕೆ ಹೊರಗೆ ಕಳುಹಿಸುವ ಕೆಲಸ ಮಾಡುತ್ತೇವೆ ಎಂದು ಅವರು ಹೇಳಿದರು.