
ಕಲಬುರಗಿ,ಸೆ.8-ಜಿಲ್ಲೆಯಲ್ಲಿ ವಾಡಿಕೆಗಿಂತ ಹೆಚ್ಚಿನ ಪ್ರಮಾಣದಲ್ಲಿ ಮಳೆಯಾಗಿರುವುದರಿಂದ ಬೆಳೆ ಹಾನಿ ಬಗ್ಗೆ ಜಿಲ್ಲಾ ಕೃಷಿಕ ಸಮಾಜ ಸಮೀಕ್ಷೆ ಮಾಡಿದೆ. ಹೆಸರು, ಉದ್ದು, ತೊಗರಿ, ಸೋಯಾ ಬೆಳೆಗಳು ಶೇ.75 ರಿಂದ 80 ರಷ್ಟು ಹಾಳಾಗಿದ್ದು, ಬೆಳೆ ಹಾನಿಯಾದ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಪರಿಹಾರ ಕೊಡಿಸಬೇಕು ಎಂದು ಜಿಲ್ಲಾ ಕೃಷಿಕ ಸಮಾಜದ ಅಧ್ಯಕ್ಷ ಸಿದ್ರಾಮಪ್ಪ ಪಾಟೀಲ ಧಂಗಾಪೂರ ನೇತೃತ್ವದ ನಿಯೋಗ ಎಐಸಿಸಿ ಅಧ್ಯಕ್ಷ ಹಾಗೂ ರಾಜ್ಯಸಭೆ ವಿರೋಧ ಪಕ್ಷದ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರನ್ನು ಮನವಿ ಮಾಡಿತು.
ಮಳೆಯಿಂದ ಬೆಳೆಹಾನಿಯಾದ ರೈತರಿಗೆ ರಾಜ್ಯ ಮತ್ತು ಕೇಂದ್ರ ಸರ್ಕಾರದಿಂದ ಸೂಕ್ತ ಪರಿಹಾರ ಕೊಡಿಸಲು ಪ್ರಯತ್ನಿಸುವುದಾಗಿ ಖರ್ಗೆ ಅವರು ನಿಯೋಗಕ್ಕೆ ಭರವಸೆ ನೀಡಿದರು.
ಕೃಷಿಕ ಸಮಾಜದ ಸದಸ್ಯ ಶ್ಯಾಮ್ ನಾಟಿಕಾರ ಸೇರಿದಂತೆ ಮತ್ತಿತರರು ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.