Home ಮುಖಪುಟ ಸುದ್ದಿ ಇ_ಖಾತಾ ವಿತರಣೆಯಲ್ಲಿ ಭ್ರಷ್ಟಾಚಾರ

ಇ_ಖಾತಾ ವಿತರಣೆಯಲ್ಲಿ ಭ್ರಷ್ಟಾಚಾರ

ದಾಖಲೆ ಪ್ರದರ್ಶಿಸಿದ ಅಶೋಕ್

ಬೆಂಗಳೂರು, ಮಾ. ೨೪- ರಾಜಧಾನಿ ಬೆಂಗಳೂರಿನಲ್ಲಿ ಇ-ಖಾತೆ ವಿತರಣೆಯಲ್ಲಿ ನಡೆಯುತ್ತಿರುವ ಭ್ರಷ್ಟಾಚಾರವನ್ನು ವಿಧಾನಸಭೆಯಲ್ಲಿಂದು ಎಳೆ ಎಳೆಯಾಗಿ ಬಿಡಿಸಿಟ್ಟ ಪ್ರತಿಪಕ್ಷ ನಾಯಕ ಆರ್. ಅಶೋಕ್, ಭ್ರಷ್ಟಾಚಾರಕ್ಕೆ ಸಂಬಂಧಿಸಿದಂತೆ ದಾಖಲೆಗಳನ್ನು ಸದನದಲ್ಲಿ ಪ್ರದರ್ಶಿಸಿದರು.


ಬೆಂಗಳೂರು ನಗರದಲ್ಲಿ ಅಭಿವೃದ್ಧಿ ಕುಂಠಿತವಾಗಿರುವ ಬಗ್ಗೆ ನಿಯಮ ೬೯ ರಡಿಯಲ್ಲಿ ಚರ್ಚೆಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಬೆಂಗಳೂರಿನಲ್ಲಿ ಇ ಖಾತಾ ಹೆಸರಿನಲ್ಲಿ ದೊಡ್ಡ ಭ್ರಷ್ಟಾಚಾರ ನಡೆಯುತ್ತಿದೆ. ಲಂಚ ಕೊಡದೆ ಇ ಖಾತೆಗಳು ಆಗುತ್ತಿಲ್ಲ. ಇ ಖಾತೆ ಹೆಸರಿನಲ್ಲಿ ದೊಡ್ಡ ಮಟ್ಟದಲ್ಲಿ ವಸೂಲಿ ನಡೆದಿದೆ ಎಂದು ಹೇಳಿದರು.
ಈ ಹಿಂದೆ ನಾವು ಇ ಖಾತಾ ವಿತರಣೆಯಲ್ಲಿ ಭ್ರಷ್ಟಾಚಾರ ನಡೆದಿದೆ ಎಂದಾಗ ಬೆಂಗಳೂರು ನಗರಾಭಿವೃದ್ಧಿ ಸಚಿವರಾದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು, ಇದಕ್ಕೆ ದಾಖಲೆಗಳನ್ನು ಕೊಡಿ ಭ್ರಷ್ಟಾಚಾರ ನಡೆದಿದ್ದರೆ ಆ ಅಧಿಕಾರಿಯ ವಿರುದ್ಧ ಕ್ರಮ ಕೈಗೊಳ್ಳುತ್ತೇನೆ ಎಂದೆಲ್ಲಾ ವೀರಾವೇಷದಿಂದ ಮಾತನಾಡಿದ್ದರು.ನಾನು ಈಗ ಇ ಖಾತೆಯ ಭ್ರಷ್ಟಾಚಾರವನ್ನು ಸಾಕ್ಷಿ ಸಮೇತ ಇಡುತ್ತೇನೆ ಎಂದು ಹೇಳಿ, ಹೆಚ್‌ಬಿಆರ್ ಲೇಔಟ್‌ನಲ್ಲಿ ಬಿಡಿಎ ಯಿಂದ ಹರಾಜಿನಲ್ಲಿ ಮೂಲ ನಿವೇಶನ ಖರೀದಿಸಿದ ವ್ಯಕ್ತಿಯೊಬ್ಬರಿಗೆ ಇ ಖಾತಾ ನೀಡದೆ ಅದು ಇ ಖಾತಾ ಎಂದು ಹೇಳಿ ಫೋನ್ ಪೇ ಮೂಲಕ ಕಂದಾಯ ಅಧಿಕಾರಿ ರಮೇಶ್ ಬಾಬು ಹಣ ಪಡೆದಿರುವ ದಾಖಲೆಗಳನ್ನು ಸದನದಲ್ಲಿ ಪ್ರದರ್ಶಿಸಿದರು.


ಈ ನಿವೇಶನದ ಮಾಲೀಕರಿಗೆ ಕಂದಾಯ ಅಧಿಕಾರಿಗಳು ೩೦ ಸಾವಿರ ರೂ. ಲಂಚದ ಬೇಡಿಕೆ ಇಟ್ಟಿದ್ದರು. ೧೫ ಸಾವಿರ ರೂ ಫೋನ್ ಪೇ ಮೂಲಕ ರಮೇಶ್ ಬಾಬು ಹಾಕಿಸಿಕೊಂಡಿದ್ದಾರೆ. ನಂತರ ಅವರು ಕಡತನವನ್ನು ಉಪ ಆಯುಕ್ತರಿಗೆ ಕಳುಹಿಸುತ್ತಾರೆ. ಉಪ ಆಯುಕ್ತರು ಅದನ್ನು ರೆಜೆಕ್ಟ್ ಮಾಡುತ್ತಾರೆ. ಹಾಗೆ ಲಂಚ ಪಡೆದ ಅಧಿಕಾರಿ ಮೂರು ಬಾರಿ ನಿವೇಶನದಾರರಿಂದ ಅರ್ಜಿ ಹಾಕಿಸುತ್ತಾರೆ. ಆದರೆ ಇ ಖಾತೆ ಆಗುವುದಿಲ್ಲ. ನಂತರ ಲಂಚ ಪಡೆದ ಹಣವನ್ನು ಅವರು ಫೋನ್ ಪೇ ಮೂಲಕವೇ ಮಾಲೀಕರಿಗೆ ವಾಪಸ್ ಹಾಕಿರುವ ದಾಖಲೆಗಳನ್ನು ಅಶೋಕ್ ಸದನದಲ್ಲಿ ಪ್ರದರ್ಶಿಸಿದರು.


ಉಪಮುಖ್ಯಮಂತ್ರಿಗಳು ಸಾಕ್ಷಿ ಗುಡ್ಡೆ ಎಂದೆಲ್ಲಾ ಭಾಷಣ ಮಾಡುತ್ತಾರೆ ನಾನು ಈಗ ಲಂಚದ ಸಾಕ್ಷಿ ಗುಡ್ಡೆಗಳನ್ನು ನೀಡಿದ್ದೇನೆ. ಬಿಬಿಎಂಪಿಯಚಲ್ಲಿ ಲಂಚವಿಲ್ಲದೆ ಏನೂ ಆಗುವುದಿಲ್ಲ. ಇ ಖಾತೆಯಲ್ಲಿ ದೊಡ್ಡ ಮಟ್ಟದ ಭ್ರಷ್ಟಾಚಾರ ನಡೆಯುತ್ತಿದೆ ಎಂದರು.


ಇದು ಬೆಂಗಳೂರಿಗೆ ಮಾತ್ರ ಸೀಮಿತವಾಗಿಲ್ಲ. ಕನಕಪುರದಲ್ಲಿ ಇ ಖಾತೆಗೆ ೧ ಲಕ್ಷ ಪೀಕಲಾಗುತ್ತಿದೆ. ದೇವನಹಳ್ಳಿಯಲ್ಲಿ ಇ ಖಾತೆಗೆ ೫೦ ಸಾವಿರ ಲಂಚ ನಿಗದಿಯಾಗಿದೆ. ಎಲ್ಲ ಕಡೆ ಲಂಚ ಇದೆ ಬೆಂಗಳೂರಿನ ಹರೇಹಳ್ಳಿಯಲ್ಲಿ ನಿವೃತ್ತ ಎ ಆರ್ ಓ ನಂಜುಂಡಪ್ಪ ಅವರು ಕಚೇರಿಯನ್ನೇ ತೆರೆದು ಇ ಖಾತಾ ಮಾಡಿಸಿಕೊಡಲು ೩೦ ರಿಂದ ೪೦ ಸಾವಿರ ರೂ. ಲಂಚ ಪಡೆಯುತ್ತಿದ್ದಾರೆ. ಇವರು ಯಾರ್ಯಾರಿಗೆ ಎಷ್ಟು ಹಣ ಕೊಡಬೇಕು ಎಂದು ಹೇಳಿರುವ ಆಡಿಯೋ ದಾಖಲೆಗಳು ಪೆನ್ ಡ್ರೈವನ್‌ಲ್ಲಿದೆ ಎಂದು ಆರ್. ಅಶೋಕ್ ಪೆನ್ ಡ್ರೈವ್‌ನ್ನು ಸದನದಲ್ಲಿ ಪ್ರದರ್ಶಿಸಿ, ಇ ಖಾತಾ ಲಂಚಾವತಾರಕ್ಕೆ ಕೊನೆ ಹಾಡಿ ಜನರಿಗೆ ತೊಂದರೆ ಕೊಡಬೇಡಿ ಎಂದು ಸರ್ಕಾರಕ್ಕೆ ಒತ್ತಾಯಿಸಿದರು.
ಇ ಖಾತಾ ಹೆಸರಿನಲ್ಲಿ ದೊಡ್ಡ ಮಾಫಿಯಾ ಗ್ಯಾಂಗ್ ಕೆಲಸ ಮಾಡುತ್ತಿದೆ. ಮೂಲ ದಾಖಲೆಗಳಲ್ಲಿ ಎ ಖಾತೆ ಇದ್ದರೂ ಅಧಿಕಾರಿಗಳು ಬಿ ಖಾತೆ ಎಂದು ನಮೂದಿಸಿ ಕಂಪ್ಯೂಟರ್ ಸಿಸ್ಟಮ್‌ನಲ್ಲಿ ಈ ರೀತಿ ಬಂದಿದೆ ಎಂದು ಜನರಿಂದ ಲಂಚ ಪಡೆದು ಇ ಖಾತೆ ಮಾಡಿಕೊಡುತ್ತಿದ್ದಾರೆ. ಇದಕ್ಕೆಲ್ಲಾ ಕೊನೆ ಹಾಡಲೇಬೇಕು ಎಂದು ಆರ್. ಅಶೋಕ್ ಹೇಳಿದರು.


ಬೆಂಗಳೂರಿನಲ್ಲಿ ತೆರಿಗೆ ಭಯೋತ್ಪಾದನೆ ಇದೆ. ದೊಡ್ಡ ಬಿಲ್ಡರ್‌ಗಳಿಗೆ ತೆರಿಗೆ ವಸೂಲಿ ಆಗುತ್ತಿದೆ. ಎಚ್‌ಎಂಟಿ ಸಂಸ್ಥೆಯಿಂದಲೇ ಸಾವಿರಾರು ಕೋಟಿ ರೂ. ಆಸ್ತಿ ತೆರಿಗೆ ಬಾಕಿ ಇದೆ. ಇಂತಹವರ ತಂಟೆಗೆ ಬಿಬಿಎಂ ಹೋಗುವುದಿಲ್ಲ. ಬಡವರ ಮೇಲೆ ಪ್ರಹಾರ ಮಾಡುತ್ತಾರೆ. ಸಮರ್ಪಕವಾಗಿ ತೆರಿಗೆ ಕಟ್ಟುತ್ತಿರುವವರಿಗೆ ಮನೆ ಹರಾಜು ಎಂಬ ನೋಟಿಸ್ ನೀಡಲಾಗಿದೆ. ಈ ರೀತಿ ನೂರಾರು ಜನರಿಗೆ ನೋಟಿಸ್ ನೀಡಿರುವ ದಾಖಲೆಗಳು ತಮ್ಮ ಬಳಿ ಇವೆ ಎಂದು ಹೇಳಿದರು.


ಸರಿಯಾಗಿ ಆಸ್ತಿ ತೆರಿಗೆ ಕಟ್ಟುತ್ತಿರುವವರಿಗೆ ನೋಟಿಸ್ ನೀಡುತ್ತಿದ್ದಾರೆ. ಇದು ನಿಮ್ಮ ಅಧಿಕಾರಿಗಳ ಕಾರ್ಯವೈಖರಿ ಎಂದು ಹೇಳಿದರು.
ಬೆಂಗಳೂರಿನಲ್ಲಿ ಗುಂಡಿಗಳಿಲ್ಲದ ರಸ್ತೆಯೇ ಇಲ್ಲ. ಗುಂಡಿ ಮುಚ್ಚಲು ಸಾವಿರಾರು ಕೋಟಿ ರೂ. ಖರ್ಚು ಮಾಡಿದ್ದೀರಾ. ಆ ಹಣ .ಯಾರ ಜೇಬಿಗೆ ಹೋಯ್ತು. ಗುಂಡಿಗಳಿಂದ ರಸ್ತೆಗಳಿಗೆ ಮುಕ್ತಿ ಸಿಕ್ಕಿಲ್ಲ. ಅಮಾಯಕ ಜನ ಗುಂಡಿಗಳಿಂದ ಅಪಘಾತವಾಗಿ ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದಕ್ಕೆ ಯಾರು ಹೊಣೆ ಎಂದು ಪ್ರಶ್ನಿಸಿದರು.
ಬೆಂಗಳೂರು ಇಡೀ ರಾಜ್ಯಕ್ಕೆ ಶೇ. ೬೫ ರಷ್ಟು ಆದಾಯ ಕೊಡುವ ನಗರ. ರಾಜ್ಯದ ಮುಖ್ಯ ಇಂಜಿನ್ ಇದ್ದ ಹಾಗೆ. ಇಲ್ಲಿಯೇ ಮೂಲ ಸೌಕರ್ಯಗಳು ಇಲ್ಲ ಎಂದರೇ ಹೇಗೆ. ಬಹಳಷ್ಟು ಕಂಪನಿಗಳು ಬೆಂಗಳೂರು ಬಿಟ್ಟು ಹೋಗುವ ಆತಂಕ ಎದುರಾಗಿದೆ. ಪಕ್ಕದ ರಾಜ್ಯದ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಹೈದರಾಬಾದ್‌ನ ಬೆಂಗಳೂರಿಗೆ ಹೋಲಿಸಬೇಡಿ. ಬೆಂಗಳೂರು ಓಪ್ಲೇಸ್ ಎಂದೆಲ್ಲಾ ಮಾತನಾಡಿದ್ದಾರೆ. ಉಪಮುಖ್ಯಮಂತ್ರಿಗಳು ಅವರಿಗೆ ಒಂದು ಪ್ರತಿಕ್ರಿಯೆ ನೀಡಿಲ್ಲ ಹೀಗಾದರೆ ಹೇಗೆ ಎಂದು ಪ್ರಶ್ನಿಸಿದರು.


ಬೆಂಗಳೂರಿನಲ್ಲಿ ಕಸ ವಿಲೇವಾರಿಯೂ ಸರಿಯಾಗಿ ನಡೆದಿಲ್ಲ. ಸರ್ಕಾರ ಬಂದಾಗ ಉಪಮುಖ್ಯಮಂತ್ರಿಗಳು ಬೆಂಗಳೂರಿನ ನಾಲ್ಕು ಕಡೆ ನೂರು ಎಕರೆ ಡಂಪ್ಪಿಂಗ್ ಯಾರ್ಡ್‌ಗೆ ಜಾಗ ನೀಡುತ್ತೇವೆ ಎಂದೆಲ್ಲಾ ಹೇಳಿದ್ದರು ಮೂರೂ ವರ್ಷವಾದರೂ ಕಸ ವಿಲೇವಾರಿ ಕೆಲಸ ಸಮರ್ಪಕವಾಗಿ ಆಗಿಲ್ಲ. ಮುಖ್ಯಮಂತ್ರಿಗಳು, ಉಪಮುಖ್ಯಮಂತ್ರಿಗಳು ಪಾದಯಾತ್ರೆ, ನಗರ ಪ್ರದರ್ಶನ ಮಾಡಿದರೂ ಬೆಂಗಳೂರಿನ ಸಮಸ್ಯೆಗಳು ಹಾಗಯೇ ಉಳಿದಿವೆ ಎಂದರು
ಬೆಂಗಳೂರಿನ ಹಲವೆಡೆ ಕಸದ ರಾಶಿಯೇ ಇದೆ. ಕಸ ಸಮಸ್ಯೆಗೆ ಸರ್ಕಾರ ಮುಕ್ತಿ ಕೊಡಬೇಕು ಎಂದರು.


ಬೇಸಿಗೆ ಕಾಲಿಟ್ಟಿದೆ. ಕುಡಿಯುವ ನೀರಿಗೆ ಹಾಹಾಕಾರ ಬರಬಹುದು ಅದಕ್ಕೆ ಏನು ಸಿದ್ಧತೆ ಮಾಡಿಕೊಂಡಿದ್ದಾರೆ ಎಂಬುದನ್ನು ಹೇಳಿಲ್ಲ ಎಂದರು
ಬೆಂಗಳೂರಿನಲ್ಲಿ ಓಸಿಸಿಸಿ ಸಮಸ್ಯೆ ದೊಡ್ಡದಾಗಿದೆ. ನಾಲ್ಕು ಲಕ್ಷ ಜನ ಮನೆ ಕಟ್ಟಿಸಿಕೊಂಡು ಓಸಿಸಿಸಿ ಇಲ್ಲದೆ ಸಂಕಷ್ಟಕ್ಕೆ ಸಿಲುಕಿದ್ದಾರೆ. ಸುಪ್ರೀಂಕೋರ್ಟ್ ಆದೇಶವನ್ನು ರಾಜ್ಯದಲ್ಲಿ ಮಾತ್ರ ಜಾರಿ ಮಾಡಲಾಗಿದೆ. ಮನೆ ಕಟ್ಟಿದ ಮೇಲೆ ಓಸಿಸಿಸಿ ಕೊಡಲ್ಲ ಎಂದರೆ ಹೇಗೆ. ಮನೆ ಕಟ್ಟಲು ಅವಕಾಶ ನೀಡಿದ ಇಂಜಿನಿಯರ್, ಕಮಿಷನರ್ ಮೇಲೆ ಕ್ರಮ ಆಗಬೇಕು. ವಾಣಿಜ್ಯ ಕಟ್ಟಡಗಳನ್ನು ಬಿಟ್ಟು ಮನೆ ನಿರ್ಮಿಸಿಕೊಂಡಿರುವವರಿಗೆ ಓಸಿಸಿಸಿ ನೀಡಬೇಕು ಎಂದು ಒತ್ತಾಯಿಸಿದರು.


ಬೆಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಹಲವು ವರ್ಷಗಳಿಂದ ಕೈಗೆತ್ತಿಕೊಂಡಿದ್ದ ಜಿಜಿ ಪುರ ಸೇತುವೆ ಪೂರ್ಣಗೊಂಡಿಲ್ಲ. ರಾಜರಾಜೇಶ್ವರಿ ಜಂಕ್ಷನ್ ಕಾಮಗಾರಿಗಳು ಪೂರ್ಣಗೊಂಡಿಲ್ಲ. ಉಳ್ಳಾಳು ಗ್ರೇಟ್ ಸಪರಟೇರ್ ಪೂರ್ಣಗೊಂಡಿಲ್ಲ. ಬೆಂಗಳೂರಿನಲ್ಲಿ ಅಭಿವೃದ್ಧಿ ಕಾರ್ಯಗಳೇ ನಡೆಯುತ್ತಿಲ್ಲ. ಕೇಳಿದರೆ ಯಾವುದಕ್ಕೂ ದುಡ್ಡಿನ ಕೊರತೆ ಇಲ್ಲ ಎಂದು ಹೇಳುತ್ತಾರೆ. ದುಡ್ಡಿನ ಕೊರತೆ ಇಲ್ಲದಿದ್ದರೆ ಈ ಕಾಮಗಾರಿಗಳನ್ನು ಏಕೆ ಪೂರ್ಣಗೊಳಿಸಿಲ್ಲ. ಬೆಂಗಳೂರಿನ ವೇಗಕ್ಕೆ ಏಕೆ ಬ್ರಾಂಡ್ ಬೆಂಗಳೂರು ಎಂದೆಲ್ಲಾ ಮಾತನಾಡುತ್ತೀರಿ ಯಾವ ಬ್ರ್ಯಾಂಡು ಆಗಿಲ್ಲ. ಬೆಂಗಳೂರು ಅಭಿವೃದ್ಧಿಯೂ ಆಗಿಲ್ಲ ಎಂದು ಆರ್. ಅಶೋಕ್ ಆಕ್ರೋಶದಿಂದ ಹೇಳಿದರು.