ಸಿದ್ದು ಔಟ್ ಗೋಯಿಂಗ್ ಸಿಎಂ

ಬೆಳಗಾವಿ, ಡಿ. ೧೮- ರಾಜ್ಯದಲ್ಲಿ ಆಡಳಿತ ಹಾದಿ ತಪ್ಪಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಔಟ್ ಗೋಯಿಂಗ್ ಮುಖ್ಯಮಂತ್ರಿ ಎಂದು ಬಿಜೆಪಿಯ ವಿಜಯೇಂದ್ರ ಹೇಳಿದರು.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಾಂಗ್ರೆಸ್ ಸರ್ಕಾರದಲ್ಲಿ ಒಂದಾದ ಮೇಲೊಂದು ಹಗರಣ ನಡೆಯುತ್ತಿದೆ.

ಕಾಂಗ್ರೆಸ್ ಪಕ್ಷ ಆಡಳಿತಕ್ಕೆ ಬಂದಾಗಿನಿಂದ ಭ್ರಷ್ಟಾಚಾರದ ಮೂಲಕ ಹೈಕಮಾಂಡ್‌ಗೆ ಹಣ ಸಂದಾಯ ಮಾಡುವುದು ಮುಂದುವರೆದಿದೆ ಎಂದು ಟೀಕಿಸಿದರು.


ಕಾಂಗ್ರೆಸ್ ಹೈಕಮಾಂಡ್‌ನನ್ನು ತೃಪ್ತಿಪಡಿಸುವ ಕಾರ್ಯ ಗುತ್ತಿಗೆದಾರರಿಂದ ವಸೂಲಿ ಕುರಿತು ಗುತ್ತಿಗೆದಾರರ ಸಂಘದ ಅಧ್ಯಕ್ಷರೇ ಪತ್ರ ಬರೆದಿದ್ದಾರೆ. ಭ್ರಷ್ಟಾಚಾರ ಬಿಟ್ಟರೆ ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಆಗುತ್ತಿಲ್ಲ ಎಂದು ದೂರಿದರು.


ಕಾಂಗ್ರೆಸ್‌ನವರಿಗೆ ಬಡವರಾದರೇನು, ಶ್ರೀಮಂತರಾದರೇನು ರಾಜ್ಯದಲ್ಲಿ ಲೂಟಿ ಮಾಡಿ ಖಜಾನೆ ಖಾಲಿ ಮಾಡಿ ಕಾಂಗ್ರೆಸ್ ಹೈಕಮಾಂಡ್‌ನ್ನು ತೃಪ್ತಿಪಡಿಸಿ ತಾವು ಅಧಿಕಾರದಲ್ಲಿ ಮುಂದುವರೆಯಬೇಕಿದೆ. ಇದೇ ಈ ಸರಕಾರದಲ್ಲಿ ನಡೆದಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ನಾನು ಎಷ್ಟು ದಿನ ಮುಖ್ಯಮಂತ್ರಿಯಾಗಿರುತ್ತೇನೆ ಎಂಬ ಗೊಂದಲ ಕಾಡುತ್ತಿದೆ. ಅವರು ಔಟ್ ಗೋಯಿಂಗ್ ಮುಖ್ಯಮಂತ್ರಿ ಎಂದು ಟೀಕಿಸಿದರು.


ಕಾಂಗ್ರೆಸ್‌ನಲ್ಲಿ ಒಳ ಜಗಳ, ಡಿನ್ನರ್ ಮೀಟಿಂಗ್ ಬೆಳಗಾವಿಯಲ್ಲೂ ಮುಂದುವರೆದಿದೆ. ಮುಖ್ಯಮಂತ್ರಿ, ಸಚಿವರು, ಶಾಸಕರ ನಡುವಿನ ಒಳಜಗಳ, ಸಿಎಂ ಕುರ್ಚಿ ಪೈಪೋಟಿಯಿಂದ ಆಡಳಿತ ಹಳಿ ತಪ್ಪಿದೆ ಎಂದು ಅವರು ಆರೋಪಿಸಿದರು.


ಗೃಹಲಕ್ಷ್ಮೀ ಕುರಿತು ತಪ್ಪು ಮಾಹಿತಿ ನೀಡಿದ ಸಚಿವರು ಅಪಹಾಸ್ಯಕ್ಕೆ ಒಳಗಾಗಿದ್ದಾರೆ. ಪ್ರಾಥಮಿಕ ಮಾಹಿತಿಯೂ ಸಚಿವರ ಬಳಿ ಇರದಿದ್ದರೆ ಅದು ಖಂಡಿತ ಸರಿಯಲ್ಲ. ಗ್ಯಾರಂಟಿಗಳ ಪರಿಣಾಮವಾಗಿ ಸಾರಿಗೆ ಸಂಸ್ಥೆಯೂ ಸಂಕಷ್ಟಕ್ಕೆ ಸಿಲುಕಿದೆ. ಅಲ್ಲಿ ಸರಿಯಾಗಿ ಸಂಬಳ ಕೊಡಲು ಆಗುತ್ತಿಲ್ಲ ಎಂದು ದೂರಿದರು.


ಕಂದಾಯ ಸಚಿವ ಕೃಷ್ಣಭೈರೇಗೌಡರ ಭೂಕಬಳಿಕೆ ಆರೋಪ ಗಂಭೀರ ಸ್ವರೂಪದ್ದು. ಇದನ್ನು ನಾವು ಸದನದಲ್ಲಿ ಪ್ರಶ್ನೆ ಮಾಡುತ್ತೇವೆ. ಕಂದಾಯ ಸಚಿವರ ಅಕ್ರಮಕ್ಕೆ ಕಾನೂನಿನಲ್ಲಿ ಅವಕಾಶ ಇದೆಯೇ ಎಂದು ಅವರು ಪ್ರಶ್ನಿಸಿದರು.