
ಬೆಂಗಳೂರು, ಏ.೭- ಮಹಿಳೆಗೆ ಲೈಂಗಿಕ ದೌರ್ಜನ್ಯ ನೀಡಿದ ಆರೋಪದ ಹಿನ್ನೆಲೆಯಲ್ಲಿ ಬಸವ ಜಯ ಮೃತ್ಯುಂಜಯ ಸ್ವಾಮೀಜಿ ವಿರುದ್ಧ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ ಪರಮೇಶ್ವರ್ ಅವರಿಗೆ ಸಂತ್ರಸ್ತ ಮಹಿಳೆ ದೂರು ನೀಡಿದ್ದಾರೆ. ಅಲ್ಲದೆ ಮಾನವ ಹಕ್ಕುಗಳ ಆಯೋಗದ ಅಧ್ಯಕ್ಷ ಹಾಗೂ ಮಹಿಳಾ ಆಯೋಗಕ್ಕೂ ದೂರು ನೀಡಿದ್ದಾರೆ. ಇದರ ಮಧ್ಯೆಯೇ ಈ ಪ್ರಕರಣಕ್ಕೆ ದೊಡ್ಡ ತಿರುವು ಸಿಕ್ಕಿದೆ.
ಸದ್ಯ ಆರೋಪ ಮಾಡಿರುವ ಮಹಿಳೆ ಹಾಗೂ ಇತರ ನಾಲ್ವರ ವಿರುದ್ಧವೇ ಏಪ್ರಿಲ್ ನಾಲ್ಕರಂದೇ ಸ್ವಾಮೀಜಿ ದೂರು ನೀಡಿದ್ದು, ಫೆಬ್ರವರಿ ೧೧ರಂದು ಹಲ್ಲೆ ಮಾಡಿದ್ದಾರೆ ಎಂದು ಸ್ವಾಮೀಜಿ ಆರೋಪಿಸಿದ್ದಾರೆ. ವಿಜಯಪುರ ತಾಲೂಕಿನ ಕಗ್ಗೊಡ ಬಳಿ ನನ್ನ ಮೇಲೆ ಹಲ್ಲೆ ಮಾಡಲಾಗಿದ್ದು ಈ ಸಂಬಂಧ ವಿಜಯಪುರ ಗ್ರಾಮಾಂತರ ಠಾಣೆಗೆ ಮೃತ್ಯುಂಜಯ ಶ್ರೀಗಳು ದೂರು ನೀಡಿದ್ದಾರೆ.
ಬೆಂಗಳೂರು ಮೂಲದ ತ್ರಿವೇಣಿ, ಪೃಥ್ವಿ ಗೌಡ, ಯಶವಂತ ಹಾಗೂ ಸ್ಪೀಡ್ ನ್ಯೂಸ್ ಎಂ.ಡಿ ವೀರೇಶ್ ವಿರುದ್ಧ ಜಯ ಮೃತ್ಯುಂಜಯ ಶ್ರೀಗಳು ದೂರು ನೀಡಿದ್ದಾರೆ. ಎರಡು ಮೂರು ವರ್ಷಗಳ ಹಿಂದೆ ಬೆಂಗಳೂರಿನ ತ್ರಿವೇಣಿ ನನ್ನನ್ನು ಭೇಟಿಯಾಗಿದ್ದರು. ಈ ವೇಳೆ ನಾನು ಲಿಂಗಾಯತ ಸಮುದಾಯದವಳಾಗಿದ್ದು, ಆಶ್ರೀತ ಫೌಂಡೇಶನ್ ಮುಖ್ಯಸ್ಥೆ ಎಂದು ಹೇಳಿಕೊಂಡರು. ಬಡ ಹಾಗೂ ಅನಾಥ ಮಕ್ಕಳನ್ನು ಸಾಕುತ್ತಿದ್ದೇನೆ ಎಂದು ನನಗೆ ತಿಳಿಸಿದರು. ನಂತರ ಪಂಚಮಸಾಲಿ ಹೋರಾಟಕ್ಕೂ ಸಾಥ್ ನೀಡುತ್ತೇನೆ ಎಂದು ಹೇಳಿದರು ಎಂದಿದ್ದಾರೆ.
ನಂತರ ಫೌಂಡೇಶನ್ ಗಾಗಿ ಹಣ ನೀಡಬೇಕು ಎಂದು ಆಕೆ ಬೇಡಿಕೆಯಿಟ್ಟರು. ಯಾರಾದರೂ ದಾನಿಗಳಿದ್ದರೆ ಸಹಾಯ ಮಾಡಿಸುವುದಾಗಿ ನಾನು ಆಕೆಗೆ ಹೇಳಿದೆ. ನಂತರ ಹಣಕ್ಕಾಗಿ ಬೆಂಗಳೂರು ಮೂಲದ ತ್ರಿವೇಣಿ ಒತ್ತಾಡ ಹಾಕುತ್ತಿದ್ದರು. ಹಣ ನೀಡದ ಕಾರಣದ ಇಲ್ಲದ ಆರೋಪ ಮಾಡಿ ಬ್ಲಾಕ್ ಮೇಲ್ ಮಾಡಿದ್ದಾರೆ. ಫೆಬ್ರವರಿ ೧೧ರಂದು ನಾನು ಕಗ್ಗೋಡದಿಂದ ಬರುವಾಗ ವಾಹನವನ್ನು ಅಡ್ಡಗಟ್ಟಿದ್ದರು. ನನ್ನ ವಾಹನ ಡಗಟ್ಟಿ ನನ್ನನ್ನು ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದರು. ಹಣ ನೀಡದ ಕಾರಣ ನನ್ನ ಕಾರಿನ ಗ್ಲಾಸ್ ಗೆ ಗುದ್ದಿ ಹಲ್ಲೆ ನಡೆಸಿದ್ದಾರೆ ಎಂದು ಸ್ವಾಮೀಜಿ ದೂರಿದ್ದಾರೆ.
ಈ ವೇಳೆ ಬೆಂಗಾಗಲು ಸಿಬ್ಬಂದಿ ಪರಿಸ್ಥಿತಿಯನ್ನು ತಿಳಿಗೊಳಿಸಿದರು. ನನ್ನ ಶಿಷ್ಯ ರಾಜಕುಮಾರಗೆ ಕರೆ ಮಾಡಿ ಮೂರು ಕೋಟಿ ರೂಪಾಯಿಗೆ ಬೇಡಿಕೆಯಿಟ್ಟಿದ್ದಾರೆ. ಹಣ ನೀಡದಿದ್ದರೆ ನಿಮ್ಮ ವಿರುದ್ಧ ಕೆಟ್ಟದಾಗಿ ಬಿಂಬಿಸುವುದಾಗಿ ಬೆದರಿಕೆ ಹಾಕಿದರು. ಅತ್ಯಾಚಾರದ ಕೇಸ್ ಹಾಕುತ್ತೇನೆ ಎಂದು ತ್ರಿವೇಣಿ ಬೆದರಿಸಿದರು. ಆ ಕಾರಣಕ್ಕೆ ಬೆಂಗಳೂರು ಮೂಲದ ತ್ರಿವೇಣಿ ಪೃಥ್ವಿ ಗೌಡ ಯಶವಂತ್ ಹಾಗೂ ಸ್ಪೀಡ್ ನ್ಯೂಸ್ ವಿರುದ್ಧ ದೂರು ನೀಡಿದ್ದೇನೆ ಎಂದು ಶ್ರೀಗಳು ತಿಳಿಸಿದರು.























