
ಬೆಂಗಳೂರು, ಮಾ. ೧೮- ರಾಜ್ಯದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆ ನಿಗದಿಯಾಗುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್ ಮತ್ತು ವಿಪಕ್ಷ ಬಿಜೆಪಿಯಲ್ಲಿ ಚಟುವಟಿಕೆಗಳು ಗರಿಗೆದರಿದ್ದು, ಅಭ್ಯರ್ಥಿಗಳ ಆಯ್ಕೆ ಸಂಬಂಧ ಎರಡು ಪಕ್ಷಗಳಲ್ಲಿ ಸಮಾಲೋಚನೆಗಳು ನಡೆದಿವೆ.
ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಅಭ್ಯರ್ಥಿ ಆಯ್ಕೆ ಸಂಬಂಧ ಮುಖ್ಯಮಂತ್ರಿ ಸಿದ್ದರಾಮಯ್ಯನವರು ವಿಧಾನಸೌಧದ ತಮ್ಮ ಕಚೇರಿಯಲ್ಲಿಂದು ಮಾಜಿ ಸಚಿವ ದಿ. ಹೆಚ್.ವೈ. ಮೇಟಿರವರ ಪುತ್ರ ಹಾಗೂ ಪುತ್ರಿಯರ ಜತೆ ಸಮಾಲೋಚನೆ ನಡೆಸಿದರು.
ಈ ಉಪಚುನಾವಣೆಯಲ್ಲಿ ತಮಗೆ ಟಿಕೆಟ್ ನೀಡಬೇಕೆಂದು ಮೇಟಿ ಕುಟುಂಬ ಪಟ್ಟು ಹಿಡಿದಿದ್ದು, ಒಂದು ವೇಳೆ ಕಾಂಗ್ರೆಸ್ ಪಕ್ಷ ತಮಗೆ ಟಿಕೆಟ್ ನೀಡದಿದ್ದರೆ ಚುನಾವಣೆಯಲ್ಲಿ ಸ್ಪರ್ಧೆ ಮಾಡುವುದಾಗಿ ಹೆಚ್.ವೈ. ಮೇಟಿ ರವರ ಪುತ್ರಿ ಮಹದೇವಿ ಮೇಟಿ ಹೇಳಿದ್ದರು.
ಈ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಇಂದು ವಿಧಾನಸೌಧದ ತಮ್ಮ ಕಚೇರಿಯಲ್ಲಿ ಮಾಜಿ ಸಚಿವ ದಿ. ಹೆಚ್.ವೈ. ಮೇಟಿಯವರ ಪುತ್ರರಾದ ಮಲ್ಲಿಕಾರ್ಜುನ ಮೇಟಿ, ಉಮೇಶ್ ಮೇಟಿ ಹಾಗೂ ಪುತ್ರಿಯರಾದ ಮಹದೇವಿ ಮೇಟಿ, ಬಾಯಕ್ಕ ಮೇಟಿ ರವರೊಂದಿಗೆ ಚರ್ಚೆ ನಡೆಸಿದರು.
ಬಾಗಲಕೋಟೆಯಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿಸಬೇಕು ಎಂಬ ಬಗ್ಗೆ ಪಕ್ಷದ ಹೈಕಮಾಂಡ್ ತೀರ್ಮಾನ ಕೈಗೊಳ್ಳುತ್ತದೆ. ಹೈಕಮಾಂಡ್ ತೀರ್ಮಾನಿಸುವ ಅಭ್ಯರ್ಥಿಗೆ ನೀವೆಲ್ಲರೂ ಬೆಂಬಲ ನೀಡಬೇಕು. ಅವರ ಪರವಾಗಿ ನೀವೆಲ್ಲರೂ ಕೆಲಸ ಮಾಡಬೇಕು ಎಂದು ಮೇಟಿ ಕುಟುಂಬಸ್ಥರಿಗೆ ಸೂಚನೆ ನೀಡಿದರು ಎಂದು ಹೇಳಲಾಗಿದೆ.
ಬಾಗಲಕೋಟೆಯಲ್ಲಿ ಯಾರನ್ನು ಅಭ್ಯರ್ಥಿಯನ್ನಾಗಿಸಿದರೆ ಗೆಲುವು ಸಾಧ್ಯವಾಗುತ್ತದೆ ಎಂಬುದರ ಮೇಲೆ ಅಭ್ಯರ್ಥಿಯನ್ನು ಹೈಕಮಾಂಡ್ ಆಯ್ಕೆ ಮಾಡುತ್ತದೆ. ಯಾರೇ ಅಭ್ಯರ್ಥಿಯಾಗಲೀ ಎಲ್ಲರೂ ಒಟ್ಟಾಗಿ ಕೆಲಸ ಮಾಡಿ ಎಂದು ಮುಖ್ಯಮಂತ್ರಿಗಳು ಹೇಳಿದರು ಎನ್ನಲಾಗಿದೆ.
ಬಿಜೆಪಿ ಅಭ್ಯರ್ಥಿ ಆಯ್ಕೆ ಇಂದು ಅಂತಿಮ
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಬಿಜೆಪಿ ಇಂದು ಅಭ್ಯರ್ಥಿಯನ್ನು ಅಂತಿಮಗೊಳಿಸಲಿದ್ದು, ಬಾಗಲಕೋಟೆಯಿಂದ ಮಾಜಿ ಶಾಸಕ ವೀರಣ್ಣ ಚರಂತಿಮಠ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದಿಂದ ಯಶವಂತರಾವ್ ಜಾಧವ್ ರವರು ಬಿಜೆಪಿ ಅಭ್ಯರ್ಥಿಗಳಾಗುವ ಸಾಧ್ಯತೆ ಇದೆ.
ರಾಜ್ಯ ಬಿಜೆಪಿಯ ಕೋರ್ ಕಮಿಟಿ ಸಭೆ ಸೇರಿ ಅಭ್ಯರ್ಥಿಗಳನ್ನು ಆಯ್ಕೆ ಮಾಡಿ ಪಕ್ಷದ ಹೈಕಮಾಂಡ್‌ಗೆ ಕಳುಹಿಸಿದ್ದು, ಬಿಜೆಪಿ ಹೈಕಮಾಂಡ್ ಇಂದು ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆಯನ್ನು ಅಂತಿಮಗೊಳಿಸಲಿದೆ ಎಂದು ಹೇಳಲಾಗಿದೆ.






























