
ಬೆಳಗಾವಿ, ಡಿ. ೧೮- ಬಿಪಿಎಲ್ ಪಡಿತರ ಚೀಟಿ ವಿತರಣೆಯ ಕೆಲ ಮಾನದಂಡಗಳ ಪರಿಷ್ಕರಣೆಗೆ ಸರ್ಕಾರ ಚಿಂತನೆ ನಡೆಸಿದೆ ಎಂದು ಆಹಾರ ಸಚಿವ ಕೆ.ಹೆಚ್. ಮುನಿಯಪ್ಪ ವಿಧಾನಸಭೆಯಲ್ಲಿಂದು ತಿಳಿಸಿದರು.
ಪ್ರಶ್ನೋತ್ತರ ಅವಧಿಯಲ್ಲಿ ಬಿಜೆಪಿಯ ರಾಜೇಶ್‌ನಾಯಕ್ ಹಾಗೂ ಜೆಡಿಎಸ್‌ನ ಸಿ.ಎನ್. ಬಾಲಕೃಷ್ಣರವರ ಪ್ರಶ್ನೆಗೆ ಉತ್ತರಿಸಿದ ಅವರು, ರಾಜ್ಯದಲ್ಲಿ ಪ್ರಸ್ತುತ ಶೇ. ೭೩ ರಷ್ಟು ಜನರಿಗೆ ಬಿಪಿಎಲ್ ಕಾರ್ಡ್‌ಗಳನ್ನು ವಿತರಿಸಲಾಗಿದೆ. ಕೇಂದ್ರ ಸರ್ಕಾರದ ಮಾನದಂಡದ ಅಡಿಯಲ್ಲಿ ಬಾರದ ೭ ಲಕ್ಷ ಕಾರ್ಡ್‌ಗಳನ್ನು ರದ್ದುಪಡಿಸಿದ್ದೇವೆ.
ಸರ್ಕಾರಿ ನೌಕರರು, ಹೆಚ್ಚಿನ ಆದಾಯ ಹೊಂದಿರುವವರು, ೭ ಎಕರೆಗೂ ಹೆಚ್ಚಿನ ಜಮೀನು ಹೊಂದಿರುವವರು ಹಾಗೂ ೧.೨೦ ಲಕ್ಷಕ್ಕೂ ಹೆಚ್ಚು ವಾರ್ಷಿಕ ಆದಾಯ ಹೊಂದಿರುವವರ ಕಾರ್ಡ್‌ಗಳನ್ನು ರದ್ದುಪಡಿಸಲಾಗಿದೆ. ಬಿಪಿಎಲ್‌ಗೆ ನಿಗದಿ ಮಾಡಿರುವ ವಾರ್ಷಿಕ ಆದಾಯದ ಮಿತಿಯನ್ನು ಹೆಚ್ಚಿಸುವ ಬಗ್ಗೆ ಪರಿಶೀಲನೆ ನಡೆದಿದೆ. ಈಗಿರುವ ಆದಾಯ ಮಿತಿಯಿಂದ ಅರ್ಹರಿದ್ದರೂ ಕೆಲವರಿಗೆ ಬಿಪಿಎಲ್ ಕಾರ್ಡ್ ಸಿಗುತ್ತಿಲ್ಲ. ಹಾಗಾಗಿ ಈ ಆದಾಯ ಮಿತಿಯಲ್ಲಿ ಬದಲಾವಣೆ ತರುವ ಬಗ್ಗೆ ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಿ ಒಂದು ತೀರ್ಮಾನ ಮಾಡುತ್ತೇವೆ ಎಂದು ಹೇಳಿದರು.
ಆರೋಗ್ಯಕ್ಕೆ ಸಂಬಂಧಿಸಿದಂತೆ ಬಿಪಿಎಲ್ ಕಾರ್ಡ್‌ಗಳನ್ನು ೧೫ ದಿನಗಳ ಒಳಗೆ ಪರಿಶೀಲಿಸಿ ತೀರ್ಮಾನ ಕೈಗೊಳ್ಳುವಂತೆಯೂ ತಹಶೀಲ್ದಾರ್‌ಗಳಿಗೆ ಸೂಚನೆ ನೀಡಲಾಗಿದೆ ಎಂದು ಅವರು ಹೇಳಿದರು.
ಅರ್ಹರಿಗೆ ಬಿಪಿಎಲ್ ಕಾರ್ಡ್‌ಗಳು ತಪ್ಪದಂತೆ ಸರ್ಕಾರ ಕ್ರಮ ವಹಿಸಿದೆ ಎಂದು ಅವರು ತಿಳಿಸಿದರು.



























