
ಬೀದರ್: ಮೇ.13:ಈ ತಿಂಗಳ 15ರಂದು ಯಾದಗಿರಿ ಜಿಲ್ಲೆಯ ಶಹಾಪುರ ಪಟ್ಟಣದಲ್ಲಿ ಸಾಯಂಕಾಲ 5 ಗಂಟೆಗೆ ಬಸವಾದಿ ಶರಣರ ಜಾಗೃತಿ ಸಮಾವೇಶ ಹಮ್ಮಿಕೊಳ್ಳಲಾಗಿದೆ ಎಂದು ಕಲಬುರಗಿಯ ಜಾಗತಿಕ ಲಿಂಗಾಯತ ಮಹಾಸಭಾದ ಅಧ್ಯಕ್ಷರಾದ ಆರ್.ಜಿ ಶಟಕಾರ ಹೇಳಿದರು.
ಮಂಗಳವಾರ ಜಿಲ್ಲಾ ಪತ್ರಿಕಾ ಭವನದಲ್ಲಿ ಪತ್ರಿಕಾಗೋಷ್ಟಿ ಉದ್ದೇಶಿಸಿ ಮಾತನಾಡಿರುವ ಅವರು, ಅಂದು ಅಲ್ಲಿಯ ಸಿ ಪಿ ಎಸ್ ಮೈದಾನದಿಂದ ವಚನ ಗಾಯನದೊಂದಿಗೆ ಮೆರವಣಿಗೆ ಹೊರಟು, 5 ಗಂಟೆಗೆ ಹಳೆ ಬಸ್ ನಿಲ್ದಾಣದ ಎದುರಿರುವ ಶಾಲಾ ಮೈದಾನದಲ್ಲಿ ಸಮಾವೇಶ ಜರುಗಲಿದೆ. ಜಾಗತಿಕ ಲಿಂಗಾಯತ ಮಹಾಸಭಾ, ಸೌಹಾರ್ದ ಕರ್ನಾಟಕ, ಬಸವಪರ ಸಂಘಟನೆಗಳ ಒಕ್ಕೂಟ, ದಲಿತಪರ ಸಂಘಟನೆಗಳು, ಕಾಯಕ ಜೀವಿಗಳ ಒಕ್ಕೂಟ, ರೈತ, ಮಹಿಳಾ, ವಿದ್ಯಾರ್ಥಿ, ಕಾರ್ಮಿಕ ಸಂಘಟನೆಗಳು ಸೇರಿ ಈ ಕಾರ್ಯಕ್ರಮ ಆಯೋಜಿಸುತ್ತಿದ್ದು, ಕಲ್ಯಾಣ ಕರ್ನಾಟಕದ ಬೀದರ, ಯಡ್ರಾಮಿ, ಶಾಬಾದ, ಜೇವರ್ಗಿ, ಭಾಲ್ಕಿ, ಕಮಲಾಪೂರ ಮುಂತಾದೆಡೆಯಿಂದ ಬಸವಾಭಿಮಾನಿಗಳು ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ. ಸಮಾರಂಭವನ್ನು ಉದ್ದೇಶಿಸಿ ನಾಡಿನ ಬಸವಪರ ಮಠಾಧೀಶರು, ವಿಚಾರವಾದಿಗಳು ಮಾತನಾಡಲಿದ್ದಾರೆ. ಶರಣ ತತ್ವಗಳ ಕುರಿತು ಜಾಗೃತಿ ಮೂಡಿಸುವುದು ಹಾಗೂ ವೈದಿಕರ ಮುಖವಾಡ ಕಳಚುವುದೇ ಸಮಾರಂಭದ ಉದ್ದೇಶವಾಗಿದೆ ಎಂದರು.
ಶಹಾಪುರದಲ್ಲಿ ಬಸವಾದಿ ಶರಣರ ಹಿಂದೂ ಸಮಾವೇಶ ಎಂಬ ಕೋಮುವಾದಿ ಕಾರ್ಯಕ್ರಮ ನಡೆಸುತ್ತಿರುವುದು ಖಂಡನೀಯವಾಗಿದೆ. ಯಾಕೆಂದರೆ ಅದು ಬಸವಾದಿ ಶರಣರ ದ್ರೋಹಿ ಕಾರ್ಯಕ್ರಮವಾಗಿದೆ. ಶರಣರನ್ನು ಕೋಮುವಾದಿ ವೃತ್ತದೊಳಗೆ ತೆಗೆದುಕೊಳ್ಳಲು ಹವಣಿಸುತ್ತಿರುವ ದುಷ್ಟ ಯೋಜನೆಯಾಗಿದೆ. 900 ವರ್ಷಗಳ ಹಿಂದೆಯೇ ವೈದಿಕ ಪ್ರಣಿತ ಮೂಲಗಳಾಗಿದ್ದ ವೇದ ಆಗಮ ಪುರಾಣ ಇತ್ಯಾದಿಗಳನ್ನು ಖಂಡಿಸಿ ಬಹುದೊಡ್ಡ ತಾತ್ವಿಕ ಆಂದೋಲನವನ್ನು ಕೈಗೊಂಡಿದ್ದ ಶರಣರಿಗೆ ಈಗ ಮತ್ತೆ ವೈದಿಕರ ಉರುಳನ್ನು ಅವರ ಕೊರಳಿಗೆ ಹಾಕಲು ಹೆಣಗುತ್ತಿರುವದು ಅತ್ಯಂತ ಹೇಯ ಕಾರ್ಯವಾಗಿದೆ ಎಂದರು.
ಸೌಹಾರ್ದ ಕರ್ನಾಟಕದ ಡಾ.ಮೀನಾಕ್ಷಿ ಬಾಳಿ ಮಾತನಾಡಿ, ಯಾರಾದರೂ ಹಿಂದೂ ಸಮಾವೇಶ ಮಾಡಲು ಅವರಿಗೆ ಅವರದೇ ಆದ ಹಕ್ಕುಗಳಿವೆ. ಅದಕ್ಕೆ ನಮ್ಮದೇನು ಅಭ್ಯಂತರವಿಲ್ಲ. ಬಸವಾದಿ ಶರಣರ ಆಶಯಗಳನ್ನು ಎತ್ತಿ ಹಿಡಿಯುತ್ತ ಯಾರಾದರೂ ಬಸವಾದಿ ಶರಣರ ಸಮಾವೇಶವೂ ಮಾಡಬಹುದು. ಆದರೆ ವೈದಿಕ ವಿರೋಧಿ ಬಸವಾದಿ ಶರಣರ ಮುಖಕ್ಕೆ ಹಿಂದುತ್ವದ ಕೆಸರು, ಮಸಿ ಬಳಿಯುವ ಕಾರ್ಯಕ್ರಮ ಮಾಡುವುದು ಸಲ್ಲದು. ಹಿಂದೂತ್ವ ಅಂದರೆ ಮನುವಾದಿ ವಿಚಾರಧಾರೆ. ಈ ಕಕ್ಷೆಯೊಳಗೆ ಶರಣರನ್ನು ಸೇರಿಸುವುದು ಅವರಿಗೆ ಮಾಡುವ ಅಪಚಾರವಾಗುತ್ತದೆ ಎಂದು ಹೇಳಿದರು.
ಸಕಲ ಜೀವಾತ್ಮರಿಗೆ ಲೇಸು ಬಯಸಿದ ಶರಣರಿಗೂ ದಲಿತರನ್ನು, ಶೂದ್ರರನ್ನು, ಮಹಿಳೆಯರನ್ನು ಹೊರಗಿಟ್ಟು ಅವರಿಗೆ ದೇವರನ್ನು ಪೂಜಿಸುವ ಹಕ್ಕಿಲ್ಲ ಎಂದು ಹೇಳುವ ಚಾತುರ್ವರ್ಣ ವ್ಯವಸ್ಥೆಗೂ ಎತ್ತಣ ಸಂಬಂಧ. ಬಸವ ತತ್ವವನ್ನು ಅಪವ್ಯಾಖ್ಯಾನಕ್ಕೆ ಒಳಪಡಿಸಿ ದಿಕ್ಕು ತಪ್ಪಿಸಲು ಹೊರಟರೆ ನಾವು ಜೀವದ ಹಂಗು ತೊರೆದು ವಿರೋಧಿಸುತ್ತೇವೆ. ನಮ್ಮ ನಾಡಿನ ಹೆಮ್ಮೆಯ ಸಾಂಸ್ಕøತಿಕ ನಾಯಕನಾಗಿರುವ ಬಸವಣ್ಣನವರನ್ನು ಉಳಿಸಿಕೊಳ್ಳಲು ಬೃಹತ್ ಆಂದೋಲನ ಕಟ್ಟಲಿದ್ದೇವೆ. ಈವರೆಗೆ ತಪ್ಪಿಯೂ ಬಸವಾದಿ ಶರಣರ ಕುರಿತು ಚಕಾರವೆತ್ತದ ಸನಾತನಿಗಳಿಗೆ ಈಗ ಇದ್ದಕ್ಕಿದ್ದಂತೆ ಶರಣರ ಮೇಲೆ ಪ್ರೀತಿ ಉಕ್ಕುತ್ತಿರುವುದೇಕೆ ಎಂಬ ಕಪಟತೆಯನ್ನು ಅರಿಯದಷ್ಟು ಬಸವ ಚಿಂತಕರು ಅಮಾಯಕರಲ್ಲ. ವೈದಿಕ ಕೋಮುವಾದಿಗಳ ಕಪಟ ಕುತಂತ್ರವನ್ನು ತಿಳಿಸಿ ಹೇಳಲು ನಾವು 15ರಂದು ಬಸವಾದಿ ಶರಣರ ಜಾಗೃತಿ ಸಮಾವೇಶ ಹಮ್ಮಿಕೊಂಡಿದ್ದೇವೆ ಎಂದರು.
ಜಾಗತಿಕ ಲಿಂಗಾಯತ ಮಹಾಸಭಾದ ಪದಾಧಿಕಾರಿಗಳಾದ ರವೀಂದ್ರ ಶಾಬಾದಿ, ವಚನ ಸಮೂಹ ಸಂಸ್ಥೆಯ ಅಧ್ಯಕ್ಷ ಅಲ್ಲಮಪ್ರಭು ನಾವದಗೇರಿ ಹಾಗೂ ಜನವಾದಿ ಮಹಿಳಾ ಸಂಘಟನೆ ಜಿಲ್ಲಾಧ್ಯಕ್ಷೆ ರೇಷ್ಮಾ ಕುಂದನ್ ಮಾತನಾಡಿದರು.
ಮಹಾಸಭಾದ ಪದಾಧಿಕಾರಿಗಳಾದ ಶಾಂತಪ್ಪ ಪಾಟೀಲ, ಹಣಮಂತರಾಯ ಪಾಟೀಲ, ಹೋರಾಟಗಾರರಾದ ಆರ್.ಪಿ.ರಾಜಾ, ಗೌಸೊದ್ದಿನ್, ಡಿ.ವಾಯ್.ಎಫ್.ವಾಯ್ ಸತೀಶ ಹಾಗೂ ಇತರರು ಪತ್ರಿಕಾಗೋಷ್ಟಿಯಲ್ಲಿದ್ದರು.























