
ಢಾಕಾ, ಫೆ. ೧೩-ನಿನ್ನೆ ನಡೆದ ಬಾಂಗ್ಲಾದೇಶ ಸಾರ್ವತ್ರಿಕ ಚುನಾವಣೆಯಲ್ಲಿ ಬಾಂಗ್ಲಾದೇಶದ ನ್ಯಾಷನಲ್ ಪಾರ್ಟಿ (ಬಿಎನ್‌ಪಿ) ಜಯಭೇರಿ ಬಾರಿಸಿದೆ. ಸಂಸತ್ತಿನ ಒಟ್ಟು ಸ್ಥಾನಗಳ ಪೈಕಿ ೨೯೯ ಕ್ಷೇತ್ರಗಳಿಗೆ ನಡೆದ ಚುನಾವಣೆ ಬಿಎನ್‌ಪಿ ೨೧೨ ಸ್ಥಾನಗಳಲ್ಲಿ ಗೆಲುವು ಸಾಧಿಸಿದೆ.
ಈ ಅಭೂತಪೂರ್ವ ಗೆಲುವಿನೊಂದಿಗೆ ಇತ್ತೀಚೆಗೆ ನಿಧನರಾದ ಖಲೀದಾಜಿಯಾ ಅವರ ಪುತ್ರ ತಾರಿಕ್ ರೆಹಮಾನ್ ಪ್ರಧಾನಿ ಪಟ್ಟ ಅಲಂಕರಿಸಲಿದ್ದಾರೆ.
೨೦ ವರ್ಷಗಳ ಕಾಲ ಬಾಂಗ್ಲಾವನ್ನು ತೊರೆದು ಲಂಡನ್‌ನಲ್ಲಿದ್ದ ತಾರಿಕ್ ರೆಹಮಾನ್ ೨ ತಿಂಗಳ ಹಿಂದೆಯಷ್ಟೆ ಸ್ವದೇಶಕ್ಕೆ ಮರಳಿದ್ದರು. ಪ್ರಮುಖ ರಾಜಕೀಯ ಪಕ್ಷವಾಗಿರುವ ಬಿಎನ್‌ಪಿ ನೇತೃತ್ವ ವಹಿಸಿಕೊಂಡಿದ್ದರು. ಈಗ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎನ್‌ಪಿ ಸ್ಪಷ್ಟ ಬಹುಮತ ಪಡೆದು ಅಧಿಕಾರದ ಚುಕ್ಕಾಣಿ ಹಿಡಿಯಲಿದೆ ಎಂದು ಮಾಧ್ಯಮಗಳು ವರದಿ ಮಾಡಿವೆ.
ಬಿಎನ್‌ಪಿ ಈಗಾಗಲೇ ಘೋಷಣೆ ಮಾಡಿರುವಂತೆ ತಾರಿಕ್ ರೆಹಮಾನ್ ಅವರು ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಅಧಿಕಾರಿ ವಹಿಸಿಕೊಳ್ಳಲಿದ್ದಾರೆ.
ನಿನ್ನೆ ನಡೆದ ಸಾರ್ವತ್ರಿಕ ಚುನಾವಣೆಯ ಮತ ಎಣಿಕೆ ಕಾರ್ಯ ಬಹುತೇಕ ಅಂತಿಮ ಹಂತಕ್ಕೆ ಬಂದಿದ್ದು, ಬಿಎನ್‌ಪಿ ನೇತೃತ್ವದ ಒಕ್ಕೂಟವು ಇನ್ನು ಅನೇಕ ಕ್ಷೇತ್ರಗಳ ಮತ ಎಣಿಕೆ ಬಾಕಿಯಿರುವಾಗಲೇ ಬಹುಮತ ಸಾಧಿಸಿದೆ ಎಂದು ವರದಿಗಳು ತಿಳಿಸಿವೆ.
ರೆಹಮಾನ್‌ಗೆ ಮೋದಿ, ಖರ್ಗೆ ಅಭಿನಂದನೆ
ಬಾಂಗ್ಲಾ ಸಾರ್ವತ್ರಿಕ ಚುನಾವಣೆಯಲ್ಲಿ ಬಿಎನ್‌ಪಿ ಭರ್ಜರಿ ಗೆಲುವು ಸಾಧಿಸಿರುವ ಹಿನ್ನೆಲೆಯಲ್ಲಿ ಪಕ್ಷದ ಅಧ್ಯಕ್ಷ ತಾರಿಕ್ ರೆಹಮಾನ್ ಅವರಿಗೆ ಪ್ರಧಾನಿ ನರೇಂದ್ರ ಮೋದಿ ಹಾಗೂ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಎಕ್ಸ್ ನಲ್ಲಿ ಮಾಹಿತಿ ಹಂಚಿಕೊಂಡಿರುವ ಮೋದಿಯವರು ಸಂಸತ್ ಚುನಾವಣೆಯಲ್ಲಿ ಬಹುಮತದತ್ತ ತಾರಿಕ್ ರೆಹಮಾನ್ ಅವರಿಗೆ ನನ್ನ ಹೃದಯಪೂರ್ವಕ ಅಭಿನಂದನೆಗಳು. ಈ ಗೆಲುವು ಬಾಂಗ್ಲಾದೇಶದ ಜನರು ನಮ್ಮ ನಾಯಕತ್ವದ ಮೇಲೆ ಇಟ್ಟಿರುವ ನಂಬಿಕೆ ತೋರಿಸುತ್ತದೆ ಎಂದು ಹೇಳಿದ್ದಾರೆ.
ಬಾಂಗ್ಲಾದೇಶಕ್ಕೆ ಬೆಂಬಲ ನೀಡುವುದನ್ನು ಭಾರತ ಮುಂದುವರಿಸುತ್ತದೆ. ಎರಡು ದೇಶಗಳ ಬಹುಮುಖ ಸಂಬಂಧಗಳನ್ನು ಬಲಪಡಿಸಿ ಮತ್ತು ಸಾಮಾನ್ಯ ಅಭಿವೃದ್ಧಿ ಗುರಿಗಳನ್ನು ತಲುಪವ ಉದ್ದೇಶದಿಂದ ನಿಮ್ಮೊಂದಿಗೆ ಕೆಲಸ ಮಾಡಲು ನಾನು ಎದುರು ನೋಡುತ್ತಿದ್ದೇನೆ ಎಂದಿದ್ದಾರೆ.


























