Home ಜಿಲ್ಲೆ ಹೊನಗೇರಾ ಗ್ರಾಮ ಪಂಚಾಯತ್‌ನಲ್ಲಿ ಜಾಗೃತಿ ಕಾರ್ಯಕ್ರಮ

ಹೊನಗೇರಾ ಗ್ರಾಮ ಪಂಚಾಯತ್‌ನಲ್ಲಿ ಜಾಗೃತಿ ಕಾರ್ಯಕ್ರಮ

ಯಾದಗಿರಿ:ಏ.೨೯: ಜಿಲ್ಲೆಯ ಯಾದಗಿರಿ ತಾಲೂಕಿನ ಹೊನಗೇರಾ ಗ್ರಾಮ ಪಂಚಾಯತ್‌ನಲ್ಲಿ ವಿವಿಧ ಇಲಾಖೆಗಳ ಸಹಯೋಗದಲ್ಲಿ ಸ್ವಸಹಾಯ ಸಂಘದ ಮಹಿಳೆಯರು ಹಾಗೂ ಪಂಚಾಯತ್ ಸಿಬ್ಬಂದಿಗಳಿಗೆ ಜಾಗೃತಿ ಕಾರ್ಯಕ್ರಮವನ್ನು ಆಯೋಜಿಸಲಾಯಿತು.

ಕಾರ್ಯಕ್ರಮಕ್ಕೆ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಯಾದಗಿರಿ ಅಧ್ಯಕ್ಷರು ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶರಾದ ಶ್ರೀ ಮರಿಯಪ್ಪ ಅವರು, ಮಾನವ-ವನ್ಯಜೀವಿ ಸಂಘರ್ಷ, ಲಿಂಗ ಸಮಾನತೆ, ಸರ್ಕಾರದ ವಿವಿಧ ಯೋಜನೆಗಳು, ಬಾಲ್ಯ ವಿವಾಹ ತಡೆ, ಪೋಷಕತ್ವ ಹಾಗೂ ದತ್ತು ಯೋಜನೆಗಳ ಮಹತ್ವದ ಕುರಿತು ಸಮಗ್ರ ಮಾಹಿತಿ ನೀಡಿದರು. ಸಮಾಜದಲ್ಲಿ ಅರಿವು ಹೆಚ್ಚಿದಷ್ಟೂ ಸಮಸ್ಯೆಗಳ ನಿವಾರಣೆ ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.

ಜಿಲ್ಲಾ ಸಂಯೋಜಕರಾದ ಕು. ನಾಗಪ್ಪ ಗಮಗ ಅವರು ಡಾನ್ ಬೋಸ್ಕೋ ಸಮಾಜ ಸೇವಾ ಕೇಂದ್ರದ ಪೋಷಕತ್ವ ಯೋಜನೆ ಕುರಿತು ಮಾತನಾಡಿ, ಮಕ್ಕಳ ಪಾಲನೆ-ಪೋಷಣೆ, ರಕ್ಷಣೆ, ಮಕ್ಕಳ ಹಕ್ಕುಗಳು ಹಾಗೂ ಮಕ್ಕಳ ಕಾವಲು ಸಮಿತಿಯ ಜವಾಬ್ದಾರಿಗಳ ಬಗ್ಗೆ ವಿವರಿಸಿದರು.

ಈ ಸಂದರ್ಭದಲ್ಲಿ ವಕೀಲರಾದ ಶ್ರೀ ಶಿವರಾಜ್ ಅವರು ಮಾತನಾಡಿ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದಿಂದ ಮನೆಮನೆಗೆ ಉಚಿತ ಕಾನೂನು ಸೇವೆಗಳನ್ನು ತಲುಪಿಸಲಾಗುತ್ತಿದ್ದು, ಸಾರ್ವಜನಿಕರು ತಮ್ಮ ಸಮಸ್ಯೆಗಳ ಪರಿಹಾರಕ್ಕಾಗಿ ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಪಂಚಾಯತ್ ಸದಸ್ಯರು, ಸಿಬ್ಬಂದಿ ಹಾಗೂ ಸ್ವಸಹಾಯ ಸಂಘದ ಮಹಿಳೆಯರು ಭಾಗವಹಿಸಿದ್ದರು.