
ಬೆಂಗಳೂರು.ಮಾ೮: ಜಕ್ಕೂರು ಗ್ರಾಮ, ಯಲಹಂಕ ಹೋಬಳಿ ವ್ಯಾಪ್ತಿಯ ಸರ್ವೆ ಸಂಖ್ಯೆ ೭೬/೧, ೭೬/೪, ೮೫/೪ ಮತ್ತು ೮೫/೧೦ರಲ್ಲಿ ಒಟ್ಟು ೬ ಎಕರೆ ೧೮ ಗುಂಟೆ ಭೂಮಿಯನ್ನು ಆರ್ಕಾವತಿ ಲೇಔಟ್ ನಿರ್ಮಾಣಕ್ಕಾಗಿ ಸ್ವಾಧೀನಪಡಿಸಿಕೊಂಡಿರುವ ಪ್ರಕರಣ ಮತ್ತೆ ಕರ್ನಾಟಕ ಹೈಕೋರ್ಟ್ ಮುಂದೆ ವಿಚಾರಣೆಗೆ ಬಂದಿದ್ದು ಮಾ೯ರಂದು ವಿಚಾರಣೆ ಆರಂಭವಾಗಲಿದೆ
ಬಿಡಿಎ ೨೦೦೩ರಲ್ಲಿ ಪ್ರಾಥಮಿಕ ಅಧಿಸೂಚನೆ ಹಾಗೂ ೨೦೦೪ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಿ ಭೂಸ್ವಾಧೀನ ಪ್ರಕ್ರಿಯೆ ಆರಂಭಿಸಿತ್ತು. ಈ ಅಧಿಸೂಚನೆಗಳನ್ನು ಕೆಲ ಭೂಮಾಲೀಕರು ಪ್ರಶ್ನಿಸಿದ ಹಿನ್ನೆಲೆಯಲ್ಲಿ ೨೦೦೫ರಲ್ಲಿ ಹೈಕೋರ್ಟ್‌ನ ಏಕಸದಸ್ಯ ಪೀಠವು ಅವುಗಳನ್ನು ರದ್ದುಪಡಿಸಿತ್ತು. ಬಳಿಕ ಬಿಡಿಎ ಸಲ್ಲಿಸಿದ್ದ ಮೇಲ್ಮನವಿಯನ್ನು ವಿಭಾಗೀಯ ಪೀಠ ಅಂಗೀಕರಿಸಿ, ಕೆಲವು ಮಾರ್ಗಸೂಚಿಗಳ ಆಧಾರದಲ್ಲಿ ಭೂಸ್ವಾಧೀನವನ್ನು ಮಾನ್ಯಗೊಳಿಸಿತ್ತು. ಈ ತೀರ್ಪನ್ನು ನಂತರ ಸುಪ್ರೀಂ ಕೋರ್ಟ್ ಕೂಡ ೨೦೧೦ರಲ್ಲಿ ಸಮರ್ಥಿಸಿತ್ತು.
ಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡ ನಂತರ ಭೂಮಾಲೀಕರಿಗೆ ೬೦:೪೦ ಯೋಜನೆಯಡಿ ಅಭಿವೃದ್ಧಿಪಡಿಸಿದ ನಿವೇಶನಗಳನ್ನು ಹಂಚಿಕೆ ಮಾಡಲಾಗಿದ್ದು, ಅವರ ಹೆಸರುಗಳಲ್ಲೇ ಕ್ರಯ ಪತ್ರಗಳನ್ನು ನೋಂದಾಯಿಸಲಾಗಿತ್ತು.
ಆದರೆ ಬಳಿಕ ಭೂಮಾಲೀಕರು ತಮ್ಮ ಭೂಮಿಯನ್ನು ಸ್ವಾಧೀನದಿಂದ ಹೊರಗಿಡುವಂತೆ ಮನವಿ ಸಲ್ಲಿಸಿದ್ದು, ಅದಕ್ಕೆ ಸಂಬಂಧಿಸಿದಂತೆ ನೀಡಲಾದ ವರದಿ ಹಾಗೂ ೨೦೧೪ರಲ್ಲಿ ಹೊರಡಿಸಿದ ಎರಡನೇ ಅಂತಿಮ ಅಧಿಸೂಚನೆಯನ್ನು ಪ್ರಶ್ನಿಸಿ ಹೊಸದಾಗಿ ನ್ಯಾಯಾಂಗ ಹೋರಾಟ ಆರಂಭವಾಗಿದೆ.
ಈ ನಡುವೆ ಕೆಲವು ನಿವೇಶನದ ಮಾಲೀಕರು ಹಿಂದಿನ ಆದೇಶಗಳು ವಾಸ್ತವಾಂಶಗಳನ್ನು ಮರೆಮಾಚಿ ಪಡೆದುಕೊಂಡಿದ್ದರು. ಎಂದು ಆರೋಪಿಸಿ ಅರ್ಜಿ ಸಲ್ಲಿಸಿದ್ದಾರೆ.
ಈ ಪ್ರಕರಣವನ್ನು ಸುಪ್ರೀಂ ಕೋರ್ಟ್ ಮರುಪರಿಶೀಲನೆಗೆ ಹೈಕೋರ್ಟ್‌ಗೆ ಹಿಂತಿರುಗಿಸಿರುವ ಹಿನ್ನೆಲೆಯಲ್ಲಿ, ಮಾರ್ಚ್ ೯, ೨೦೨೬ರಂದು ಕರ್ನಾಟಕ ಹೈಕೋರ್ಟ್‌ನ ಕೋರ್ಟ್ ಹಾಲ್ ನಂ.೪ರಲ್ಲಿ ವಿಚಾರಣೆ ನಡೆಯಲಿದೆ.ಭೂಸ್ವಾಧೀನ ಪ್ರಕ್ರಿಯೆ ಪೂರ್ಣಗೊಂಡು ಪರಿಹಾರ ಸ್ವೀಕರಿಸಿದ ನಂತರವೂ ಭೂಮಾಲೀಕರು ಸ್ವಾಧೀನವನ್ನು ಪ್ರಶ್ನಿಸಲು ಅವಕಾಶವಿದೆಯೇ ಎಂಬುದು ಈ ಪ್ರಕರಣದ ಪ್ರಮುಖ ಕಾನೂನು ಪ್ರಶ್ನೆಯಾಗಿದೆ.































