ಮನೆಗಳಿಗೆ ಸಿಸಿ ಕ್ಯಾಮೆರಾ ಅಳವಡಿಸಲು ಸಲಹೆ

ತುಮಕೂರು, ಜೂ. ೧೪- ನಾಗರಿಕರು ಪೊಲೀಸರೊಂದಿಗೆ ಸದಾ ಸಹಕರಿಸಬೇಕು, ಪೋಲೀಸರು ಇರುವುದೇ ನಾಗರಿಕ ಸಮಾಜದ ರಕ್ಷಣೆಗಾಗಿ. ಕೋಟ್ಯಂತರ ರೂಪಾಯಿ ವ್ಯಯಿಸಿ ಸ್ವಂತ ಮನೆ ಕಟ್ಟಿಸುತ್ತೀರಿ, ಆದರೆ ಅದಕ್ಕೆ ಸಿಸಿ ಕ್ಯಾಮೆರಾ ಹಾಕಿಸಲು ಮೀನಮೇಷ ಎಣಿಸುತ್ತೀರಿ. ನಿಮ್ಮ ರಕ್ಷಣೆಗಾಗಿ ಸಿಸಿ ಕ್ಯಾಮೆರಾಗಳನ್ನು ಅಳವಡಿಸಿ ಎಂದು ಜಯನಗರ ಪೊಲೀಸ್ ಠಾಣೆ ಪಿಎಸ್‌ಐ ಪ್ರಸನ್ನಕುಮಾರ್ ಕೆ. ಸಲಹೆ ಮಾಡಿದರು.


ಇಲ್ಲಿನ ಜಯನಗರ ಮಾರುಕಟ್ಟೆ ಪ್ರಾಂಗಣದ ಅಶ್ವತ್ಥಕಟ್ಟೆಯಲ್ಲಿ ಜಯನಗರ ಪೊಲೀಸ್ ಠಾಣೆ ವತಿಯಿಂದ ನಡೆದ ಜನ ಸಂಪರ್ಕ ಸಭೆಯಲ್ಲಿ ಅವರು ಮಾತನಾಡಿದರು.
ಮನೆಯಿಂದ ಹೆಚ್ಚು ದಿನ ಹೊರ ಹೋಗಬೇಕೆಂದರೆ ನಿಮ್ಮ ಬಡಾವಣೆಯ ಬೀಟ್ ಪೊಲೀಸರಿಗೆ ತಿಳಿಸಿ, ಬೆಲೆ ಬಾಳುವ ಒಡವೆ ವಸ್ತುಗಳನ್ನು ಪೊಲೀಸರಿಗೆ ಒಪ್ಪಿಸಿ ಹೊರ ಹೋಗಿ, ಬಂದ ನಂತರ ನಿಮ್ಮ ಒಡವೆ, ವಸ್ತುಗಳನ್ನು ಪೊಲೀಸ್ ಠಾಣೆಯಿಂದ ವಾಪಸ್ ಪಡೆಯಿರಿ. ನಿಮ್ಮ ರಕ್ಷಣೆಯೇ ನಮ್ಮ ಜವಾಬ್ದಾರಿ. ಉತ್ತಮ ನಾಗರಿಕ ಸಮಾಜಕ್ಕಾಗಿ ಪೊಲೀಸರು ಹೆಜ್ಜೆ ಇಡುತ್ತಿದ್ದೇವೆ. ಪ್ರತಿ ನಾಗರಿಕರ ನೆಮ್ಮದಿಯೇ ನಮ್ಮ ಗುರಿ ಎಂದು ಹೇಳಿದರು.


ಎಎಸ್‌ಐ ದೇವರಾಜು ಮಾತನಾಡಿ, ಅಪರಿಚಿತ ವ್ಯಕ್ತಿಗಳು ಕಂಡು ಬಂದರೆ ತಕ್ಷಣವೇ ಪೋಲೀಸ್ ಠಾಣೆಗೆ ಮಾಹಿತಿ ನೀಡಿ, ಸೈಬರ್ ಕ್ರೈಂ ಹೆಚ್ಚಾಗುತ್ತಿದ್ದು, ಆನ್‌ಲೈನ್ ಮೂಲಕ ಹಣ ಕದಿಯುವವರ ಬಗ್ಗೆ ಸದಾ ಎಚ್ಚರದಿಂದ ಇರಬೇಕು. ಏನೇ ಸಮಸ್ಯೆ ಇದ್ದರೆ ತಕ್ಷಣವೇ ೧೧೨ ಗೆ ಉಚಿತ ಕರೆ ಮಾಡಿ ತಿಳಿಸಬೇಕು. ಅಪರಿಚತರು, ಪರಿಚಯ ಇಲ್ಲದವರ ಬಳಿ ಸ್ನೇಹ ಮಾಡಬೇಡಿ, ಸದಾ ಜಾಗೃತಿ ವಹಿಸಿ ಎಂದು ತಿಳಿಸಿದರು.


ಜಯನಗರ ಕ್ಷೇಮಾಭಿವೃದ್ಧಿ ಸಂಘದ ಪ್ರಧಾನ ಕಾರ್ಯದರ್ಶಿ ಆರ್.ಎಸ್.ವೀರಪ್ಪದೇವರು ಮಾತನಾಡಿ, ಶೆಟ್ಟಿಹಳ್ಳಿ ಮುಖ್ಯರಸ್ತೆಯಲ್ಲಿ ಅಪಘಾತಗಳು ಹೆಚ್ಚಾಗುತ್ತಿದ್ದು ಹಂಪ್ಸ್‌ಗಳನ್ನು ಹಾಕಬೇಕು. ಮುಖ್ಯ ಸ್ಥಳಗಳಲ್ಲಿ ಸಿಸಿ ಕ್ಯಾಮೆರಾ ಹಾಕಬೇಕು. ರಿಂಗ್ ರಸ್ತೆಯಲ್ಲಿ ವ್ಹೀಲಿಂಗ್ ಮಾಡುವವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು. ಯುವಕ-ಯುವತಿಯರು ಕಾಲೇಜು ಬಿಟ್ಟು ಉದ್ಯಾನವನಗಳಲ್ಲಿ ಅನಧಿಕೃತವಾಗಿ ಓಡಾಡುತ್ತಿದ್ದು, ಅವರ ಬಗ್ಗೆ ಪೊಲೀಸರು ನಿರ್ಧಾಕ್ಷಿಣ್ಯ ಕ್ರಮ ತೆಗೆದುಕೊಳ್ಳಬೇಕು ಎಂದು ಮನವಿ ಮಾಡಿದರು.


ಅಧ್ಯಕ್ಷತೆ ವಹಿಸಿದ್ದ ಎಸ್.ಪುಟ್ಟೀರಪ್ಪ ಮಾತನಾಡಿ, ಪೋಲೀಸರು ಊಟ, ತಿಂಡಿ, ಮನೆ ಬಿಟ್ಟು ನಮಗಾಗಿ ತಮ್ಮ ಜೀವವನ್ನು ಮುಡುಪಾಗಿಟ್ಟಿದ್ದಾರೆ. ಅವರ ಶ್ರಮದಿಂದ ಇಂದು ಸಮಾಜದಲ್ಲಿ ನೆಮ್ಮದಿ ಇದೆ. ಅವರಿಗೆ ನಮ್ಮ ನಾಗರೀಕ ಸಮಿತಿಯಿಂದ ಧನ್ಯವಾದಗಳು ಎಂದರು.


ಜನರು ಮುಂದಾಲೋಚನೆ ವಹಿಸಬೇಕು. ಎಲ್ಲರೂ ತಮ್ಮ ಮನೆ ಮುಂದೆ ಸಿಸಿ ಕ್ಯಾಮೆರಾ ಹಾಕಿಸಬೇಕು. ರಸ್ತೆಗಳನ್ನು ಓಡಾಡುವ ಅನುಮಾನಾಸ್ಪದ ವ್ಯಕ್ತಿಗಳ ಬಗ್ಗೆ ಪೊಲೀಸರಿಗೆ ತಕ್ಷಣವೇ ತಿಳಿಸಬೇಕು ಎಂದು ಮನವಿ ಮಾಡಿದರು.


ಸಭೆಯಲ್ಲಿ ಜಯನಗರ ಕ್ಷೇಮಾಭಿವೃದ್ಧಿ ಸಂಘದ ಉಪಾಧ್ಯಕ್ಷರಾದ ಬಿ.ವಿ.ದ್ವಾರಕನಾಥ್, ಮಹದೇವಯ್ಯ, ಗೋವಿಂದರಾಜು, ಪಿಎಸ್.ಐ. ಹನುಮಂತರಾಯಪ್ಪ.ಬಿ.ಕೆ., ಸಹಾಯಕ ಪೋಲೀಸ್ ಸಬ್‌ಇನ್ಸ್‌ಪೆಕ್ಟರ್‌ಗಳಾದ ತಿಪ್ಪೇಸ್ವಾಮಿ, ದೇವರಾಜು, ತಿರುಮಲೇಶ್, ಸಿಬ್ಬಂದಿಗಳಾದ ರಾಮಕೃಷ್ಣ, ಎಲ್. ಚಿಕ್ಕಮಣಿ, ಕರೀಂಪಾಷಾ, ಹೇಮಲತಾ ಮತ್ತಿತರರು ಪಾಲ್ಗೊಂಡಿದ್ದರು.