
ಕಲಬುರಗಿ,ಜ.2: ಕೇಂದ್ರ ಸರ್ಕರವು ತನ್ನ 2026-27ನೇ ಸಾಲಿನ ಮುಂಗಡ ಪತ್ರ ಭಾನುವಾರ ಮಂಡಿಸಿದ್ದು, ರಾಜ್ಯಕ್ಕೆ ನ್ಯಾಯ ದೊರಕಿಸುವಂತಹ ಯಾವುದೇ ಘೋಷಣೆ ಮಾಡದೆ ಇರುವ ನಿರಾಶದಾಯಕ ಮತ್ತು ದೂರದೃಷ್ಠಿ ಇಲ್ಲದ ಬಜೆಟ್ ಇದಾಗಿದೆ. ಕರ್ನಾಟಕ ರಾಜ್ಯಕ್ಕೆ ಬಹುದೊಡ್ಡ ಅನ್ಯಾಯ ಮಾಡಲಾಗಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
ರವಿವಾರ ಕಲಬುರಗಿ ವಿಮಾನ ನಿಲ್ದಾಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಹಣಕಾಸು ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರು 13ನೇ ಬಾರಿಗೆ ಆಯವ್ಯಯ ಮಂಡಿಸಿದ್ದಾರೆ. ರಾಜ್ಯಕ್ಕೆ ಒಂದು ಯೋಜನೆಗಳಿಲ್ಲ. ಬರೀ ಹೇಳಿಕೆಗಳಿಂದ ಕೂಡಿದ ಬಜೆಟ್ ಇದಾಗಿದೆ. ರಾಜ್ಯಕ್ಕೆ ಏನೇನೂ ಕೊಟ್ಟಿಲ್ಲ. ಬೆಂಗಳೂರು-ಹೈದ್ರಾಬಾದ್, ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಕೊಟ್ಟಿದ್ದಾರೆ. ಆದರೆ ಇದರಿಂದ ನಮಗಿಂತ ಆಂದ್ರಪ್ರದೇಶ ಹಾಗೂ ತಮಿಳುನಾಡಿನವರಿಗೆ ಅನುಕೂಲ ಆಗುತ್ತದೆ. ಬೆಂಗಳೂರು-ಮುಂಬೈ, ಬೆಂಗಳೂರು-ಪುಣೆ, ಬೆಂಗಳೂರು-ಮಂಗಳೂರು ಹೈಸ್ಪೀಡ್ ರೈಲು ನೀಡಲು ಬೇಡಿಕೆ ಸಲ್ಲಿಸಲಾಗಿತ್ತು. ಅದಕ್ಕೆ ಕೇಂದ್ರ ಸರ್ಕಾರ ಸ್ಪಂದಿಸಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಕಳೆದ 2025-26ನೇ ಸಾಲಿನ ಕೇಂದ್ರದ ಆಯವ್ಯಯದಲ್ಲಿ 50,65,345 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದರು ಅದು ಪರಿಷ್ಕøತಗೊಂಡು 49,64,842 ಕೋಟಿ ರೂ. ಮೀಸಲಾಗಿದೆ. ಸುಮಾರು 1 ಲಕ್ಷ ಕೋಟಿಗೂ ಕಡಿಮೆ ಗಾತ್ರಕ್ಕೆ ಪರಿಷ್ಕರಿಸಿದ್ದಾರೆ. 2026-27ನೇ ಸಾಲಿನ ಆಯವ್ಯಯ ನೋಡುವುದಾದರೆ ಕಳೆದ ವರ್ಷಕ್ಕಿಂತ ಶೇ.5.56 ರಷ್ಟು ಹೆಚ್ಚಿನ ಗಾತ್ರದೊಂದಿಗೆ 53,47,315 ಕೋಟಿ ರೂ. ಮೊತ್ತದ ಬಜೆಟ್ ಮಂಡಿಸಿದ್ದರು, ರಾಜ್ಯಗಳಿಗೆ ನ್ಯಾಯ ದೊರಕಿಸಲು ಸಾಧ್ಯವಾಗಿಲ್ಲ ಎಂದು ಮುಖ್ಯಮಂತ್ರಿ ಬಜೆಟ್ ಕುರಿತು ಪ್ರತಿಕ್ರಿಯೆಸಿದರು.
ಕೇಂದ್ರ ಸರ್ಕಾರ ವಿಕಸಿತ ಭಾರತದ ಬಗ್ಗೆ ಬಹಳ ಮಾತಾನಾಡುತ್ತದೆ. ಇದೆಲ್ಲಾ ಮಾತಿನಲ್ಲಿ ಇದೆಯೇ ಹೊರತು ಕೃತಿಗೆ ಇಳಿದಿಲ್ಲ. ನಾವು ನಮ್ಮ ರಾಜ್ಯದ ನೀರಾವರಿ ಯೋಜನೆ ಬಗ್ಗೆ ಕೇಳಿದ್ದೇವು. ಪ್ರಮುಖವಾಗಿ ಕೃಷ್ಣಾ ಮೇಲ್ದಂಡೆ ಯೋಜನೆ ರಾಷ್ಟ್ರೀಯ ಯೋಜನೆ ಮಾಡಿ ಎಂದು ಕೇಳಲಾಗಿತ್ತು. 2023-24ನೇ ಸಾಲಿನ ಬಜೆಟ್ನಲ್ಲಿ 5,300 ಕೋಟಿ ರೂ. ನೀಡುವುದಾಗಿ ಘೋಷಣೆ ಮಾಡಿದ್ದೀರಿ, ಅದನ್ನಾದರು ಕೊಡಿ ಎಂದು ಕೇಳಿದ್ವಿ ಒಂದು ರೂಪಾಯಿ ಕೊಟ್ಟಿಲ್ಲ. ಗೆಜಟ್ ನೋಟಿಫಿಕೇಷನ್ ಸಹ ಮಾಡಿಲ್ಲ ಎಂದು ತಮ್ಮ ಅಸಮಾಧಾನ ವ್ಯಕ್ತಪಡಿಸಿದರು.
ಮಹಾದಾಯಿ ಯೋಜನೆಗೆ ಪರಿಸರ ಅನುಮತಿ ನೀಡಬಹುದು ಎಂದು ನಿರೀಕ್ಷಿಸಲಾಗಿತ್ತು, ಅದು ಹುಸಿಯಾಗಿದೆ. ಮೇಕೆದಾಟು ಯೋಜನೆಗೆ ತಮಿಳುನಾಡು ಸುಪ್ರೀಂ ಕೋರ್ಟನಲ್ಲಿ ಅರ್ಜಿ ಹಾಕಿದ್ರು. ಅರ್ಜಿ ವಜಾ ಆಗಿದೆ. ಆದ್ರೂ ಮೇಕೆ ದಾಟು ಯೋಜನೆಗೆ ಹಸಿರು ನಿಶಾನೆ ತೋರುತ್ತಿಲ್ಲ. ಮೇಕೆದಾಟು ತಮಿಳುನಾಡಿನಲ್ಲಿ ಅಲ್ಲ ಕರ್ನಾಟಕದಲ್ಲಿ ಕಟ್ಟೋದು. ಮಳೆಗಾಲ ಸರಿಯಾಗಿ ಆದ್ರೆ 177.25 ಟಿ.ಎಂ.ಸಿ ಕೊಡಬೇಕು ಅಂತ ತೀರ್ಪು ಇದೆ. ಈ ವರ್ಷ ಅದರ ಎರಡರಷ್ಟು ನೀರು ಬಿಟ್ಟಿದ್ದೀವಿ. ಇದರಿಂದ ತಮಿಳುನಾಡಿನವರಿಗೆ ಏನು ತೊಂದರೆ ಆಗಲ್ಲ. ಕ್ಲಿಯರ್ ಮಾಡಿಕೊಡಿ ಎಂದು ಒತ್ತಾಯ ಮಾಡಿದ್ವಿ. ಇದುವರೆಗೂ ಕ್ಲಿಯರೆನ್ಸ್ ಕೊಟ್ಟಿಲ್ಲ. ಇದರಿಂದ ಉತ್ತರ ಕರ್ನಾಟಕಕ್ಕೆ ಮತ್ತು ಕರ್ನಾಟಕಕ್ಕೆ ಅನ್ಯಾಯವಾಗಿದೆ ಎಂದು ಪುನರುಚ್ಚಿಸಿದರು.
ನಮ್ಮ ಮೆಟ್ರೋಗೆ ನೆರವು ಕೊಟ್ಟಿಲ್ಲ. ರಾಯಚೂರು ಏಮ್ಸ್ ಬಗ್ಗೆ ಯಾವುದೇ ಚಕಾರ ಎತ್ತಿಲ್ಲ. 371ಜೆ ಅನ್ವಯ ವಿಶೇಷ ಮೀಸಲಾತಿ ಸೌಲಭ್ಯ ಪಡೆದಿರುವ ಹಿಂದುಳಿದ ಕಲ್ಯಾಣ ಕರ್ನಾಟಕದ ಅಭಿವೃದ್ಧಿಗೆ ಕೆ.ಕೆ.ಆರ್.ಡಿ.ಬಿ ಮಂಡಳಿಗೆ ನಮ್ಮ ಸರ್ಕಾರ ಪ್ರತಿ ವರ್ಷ 5,000 ಕೋಟಿ ರೂ. ನೀಡುತ್ತಿದ್ದು, ಮ್ಯಾಚಿಂಗ್ ಗ್ರ್ಯಾಂಟ್ ನೀಡುವಂತೆ ಕೋರಲಾಗಿತ್ತು. ಅದು ಸಹ ಕೊಟ್ಟಿಲ್ಲ. ಇದರ ಬಗ್ಗೆ ಒಂದೇ ಒಂದು ಶಬ್ದ ಇಲ್ಲ. ನಾವು ಅಧಿಕಾರಕ್ಕೆ ಬಂದ ಮೇಲೆ ಕಳೆದ 2.5 ವರ್ಷದಲ್ಲಿ 13 ಸಾವಿರ ಕೋಟಿ ರೂ. ಕಲ್ಯಾಣ ಕರ್ನಾಟಕ ಅಭಿವೃದ್ಧಿಗೆ ಕೊಟ್ಟಿದ್ದೇವೆ ಎಂದರು.
16ನೇ ಹಣಕಾಸು ಅನುದಾನದ ನೀಡುವಲ್ಲಿಯೂ ತಾರತಮ್ಯ:
16ನೇ ಹಣಕಾಸು ಆಯೋಗವು ರಾಜ್ಯಕ್ಕೆ ಶೇ.4.131ರಷ್ಟು ಪಾಲು ಹಂಚಿಕೆ ಮಾಡಲು ಶಿಫಾರಸ್ಸು ಮಾಡಿರುವುದು ಸಹ ರಾಜ್ಯಕ್ಕೆ ಅನ್ಯಾಯವಾದಂತಾಗಿದೆ. 14ನೇ ಹಣಕಾಸಿನ ಆಯೋಗದ ವರದಿಯಲ್ಲಿ ಕರ್ನಾಟಕಕ್ಕೆ ಶೇ.4.71 ತೆರಿಗೆ ಪಾಲು ಸಿಕ್ಕಿತ್ತು. ಆದರೆ 15ನೇ ಹಣಕಾಸು ಆಯೋಗದಲ್ಲಿ ಅದು ಶೇ.3.64ಕ್ಕೆ ಇಳಿದಿದ್ದರಿಂದ ಶೇ.23ರಷ್ಟು ನಷ್ಟವಾಗಿತ್ತು. ಇದು ಪುನರಾವರ್ತನೆ ಆಗಬಾರದೆಂದು 16ನೇ ಹಣಕಾಸು ಶಿಫಾರಸ್ಸು ಮುನ್ನ ಪ್ರಬಲವಾಗಿ ವಾದ ಮಂಡಿಸಿ ಕನಿಷ್ಟ ಪಕ್ಷ 14ನೇ ಹಣಕಾಸಿನ ಆಯೋಗದಕ್ಕಿಂತ ಜಾಸ್ತಿ ಮಾಡಲು ಕೇಳಿದ್ವಿ. ಇಷ್ಟಾದರೂ 16ನೇ ಹಣಕಾಸು ಆಯೋಗದಲ್ಲಿ ಶೇ.4.131 ರಷ್ಟು ಮಾತ್ರ ಕೊಟ್ಟಿದ್ದಾರೆ ಎಂದರು.
ಇನ್ನು ನಗರ ಮತ್ತು ಗ್ರಾಮೀಣ ಸ್ಥಳೀಯ ಸಂಸ್ಥೆಗಳಿಗೆ ಮುಂದಿನ 5 ವರ್ಷಗಳಿಗೆ ಅನುದಾನ ಹಂಚಿಕೆ ಮಾಡಿದ್ದು, ಇದರಲ್ಲಿ ಉತ್ತರ ಪ್ರದೇಶಕ್ಕೆ 1,16,804 ಕೋಟಿ ರೂ., ಮಹಾರಾಷ್ಟ್ರ ರಾಜ್ಯಕ್ಕೆ 79,620 ಕೋಟಿ ರೂ., ಪಶ್ಚಿಮ ಬಂಗಾಲ ರಾಜ್ಯಕ್ಕೆ 50,226 ಕೋಟಿ ರೂ., ಮಧ್ಯಪ್ರದೇಶ ರಾಜ್ಯಕ್ಕೆ 48,049 ಕೋಟಿ ರೂ., ರಾಜಸ್ಥಾನ ರಾಜ್ಯಕ್ಕೆ 44,147 ಕೋಟಿ ರೂ., ಗುಜರಾತ್ ರಾಜ್ಯಕ್ಕೆ 42,566 ಕೋಟಿ ರೂ., ತಮಿಳುನಾಡು ರಾಜ್ಯಕ್ಕೆ 41,999 ಕೋಟಿ ರೂ. ನೀಡಿದರೆ ಕರ್ನಾಟಕಕ್ಕೆ ನೀಡಿರುವುದು 37,372 ಕೋಟಿ ರೂ. ಮಾತ್ರ. ಹೆಚ್ಚಿನ ಅನುದಾನ ಉತ್ತರದ ರಾಜ್ಯಗಳಿಗೆ ನೀಡಲಾಗಿದ್ದು, ದಕ್ಷಿಣದ ರಾಜ್ಯಗಳನ್ನು ಕಡೆಗಣಿಸಲಾಗಿದೆ. ಬೇರೆ ರಾಜ್ಯಗಳಿಗೆ ಅನುದಾನ ಕೊಡಬೇಡಿ ಅನ್ನೋದಿಲ್ಲ, ನಮಗೂ ನ್ಯಾಯ ಕೊಡಿ ಅನ್ನೋದು ನಮ್ಮ ವಾದ. ಬಜೆಟ್ ಮುನ್ನವೆ ಪ್ರಧಾನಮಂತ್ರಿ, ಹಣಕಾಸು ಸಚಿವರನ್ನು ಭೇಟಿಯಾಗಿ ರಾಜ್ಯಕ್ಕೆ ನ್ಯಾಯ ಒದಗಿಸುವಂತೆ ಮನವಿ ಮಾಡಿದ್ದೇ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು.
5 ಲಕ್ಷ ಕೋಟಿ ತೆರಿಗೆ ಕಟ್ತೀವಿ,ವಾಪಸ್ ಬರೋದು 1 ರೂ.ಗೆ 14 ಪೈಸೆ ಮಾತ್ರ:
ದೇಶದಲ್ಲಿ ತಲಾ ಆದಾಯದಲ್ಲಿ ರಾಜ್ಯ ನಂಬರ್-1 ಸ್ಥಾನದಲ್ಲಿದೆ. ಜಿ.ಎಸ್.ಟಿ. ಸಂಗ್ರಹಣೆಯಲ್ಲಿ ದೇಶದಲ್ಲಿಯೇ ನಾವು ದ್ವಿತೀಯ ಸ್ಥಾನದಲ್ಲಿದ್ದೇವೆ. ವಿದೇಶಿ ಬಂಡವಾಳ ಹೂಡಿಕೆಯಲ್ಲಿ ಕರ್ನಾಟಕ ಮೊದಲನೇ ಸ್ಥಾನದಲ್ಲಿದೆ. ವಾರ್ಷಿಕ ಸರಿ ಸುಮಾರು 4.50 ರಿಂದ 5 ಲಕ್ಷ ಕೋಟಿ ರೂ. ತೆರಿಗೆ ಕೇಂದ್ರ ಸರ್ಕಾರಕ್ಕೆ ನೀಡುತ್ತೇವೆ. ಆದರೆ ಇದರಲ್ಲಿ ನಮಗೆ ಬರೋದು ಒಂದು ರೂಪಾಯಿಗೆ ಕೇವಲ 14 ಪೈಸೆ ಮಾತ್ರ. ಉಳಿದಿದ್ದೆಲ್ಲ ಕೇಂದ್ರ ಸರಕಾರವೇ ಬಳಸಿಕೊಳ್ಳುತ್ತಿದೆ. ಇದು ಕೇಂದ್ರದಿಂದ ಮಾಡುತ್ತಿರುವ ಅನ್ಯಾಯ. ಇನ್ನು ಕೇಂದ್ರ ಪುರಸ್ಕೃತ ಯೋಜನೆಗಳಿಗೆ ಹಿಂದೆಲ್ಲ ಕೇಂದ್ರ ಸರ್ಕಾರ ಶೇ.75 ಅನುದಾನ ನೀಡಿದರೆ ರಾಜ್ಯಗಳು ಶೇ.25 ಭರಿಸುತ್ತಿದ್ದವು. ಇದೀಗ ಈ ಅನುಪಾತ ಶೇ.60-40ಗೆ ಇಳಿಸಲಾಗಿದೆ. ಜಲ ಜೀವನ್ ಮಿಷನ್ದಲ್ಲಂತೂ 50-50 ಅನುಪಾತ ನಿಗದಿಪಡಿಸಿದೆ. ನಿಷ್ಟಾಗಿಯೂಕಳೆದ ಮೂರು ಆರ್ಥಿಕ ವರ್ಷದಲ್ಲಿ ಜೆ.ಜೆ.ಎಂ. ಯೋಜನೆಯಡಿ ರಾಜ್ಯಕ್ಕೆ ನೀಡಬೇಕಾದ 13,004 ಕೋಟಿ ರೂ. ಕೇಂದ್ರ ಬಾಕಿ ಇರಿಸಿಕೊಂಡಿದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ತಿಳಿಸಿದರು.
ಅಸಮಾನತೆ ನಿವಾರಣೆಗೆ ಬಜೆಟ್ನಲ್ಲಿ ಹಣ ಮೀಸಲು:
ರಾಜ್ಯದಲ್ಲಿನ ಪ್ರಾದೇಶಿಕ ಅಸಮಾನತೆ ನಿವಾರಣೆ ನಿಟ್ಟಿನಲ್ಲಿ ರಚಿಸಲಾಗಿದ್ದ ಆರ್ಥಿಕ ತಜ್ಞ ಪೆÇ್ರ. ಗೋವಿಂರಾವ ನೇತೃತ್ವದ ಅಧ್ಯಯನ ಸಮಿತಿಯು ಈಗಾಗಲೆ ತನ್ನ ವರದಿ ನೀಡಿದ್ದು, ಸಮಿತಿಯ ಶಿಫಾರಸ್ಸಿನಂತೆ ಹಿಂದುಳಿದ ತಾಲೂಕುಗಳ ಅಭಿವೃದ್ಧಿಗೆ ವಿಶೇಷವಾಗಿ ಉತ್ತರ ಕರ್ನಾಟಕ ಭಾಗಕ್ಕೆ ಬರುವಂತಹ 2026-27ನೇ ಆಯವ್ಯಯದಲ್ಲಿ ಹೆಚ್ಚಿನ ಅನುದಾನ ಮೀಸಲಿಡಲು ಕ್ರಮ ವಹಿಸಲಾಗುವುದು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಪತ್ರಕರ್ತರ ಪ್ರಶ್ನೆಗೆ ಉತ್ತರಿಸಿದರು.
ಪತ್ರಿಕಾಗೋಷ್ಠಿಯಲ್ಲಿ ರಾಜ್ಯದ ವೈದ್ಯಕೀಯ ಶಿಕ್ಷಣ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಖಾತೆ ಸಚಿವ ಡಾ.ಶರಣಪ್ರಕಾಶ ಪಾಟೀಲ, ಸಣ್ಣ ನೀರಾವರಿ ಮತ್ತು ವಿಜ್ಞಾನ ಮತ್ತು ತಂತ್ರಜ್ಞಾನ ಸಚಿವ ಎನ್. ಭೋಸರಾಜು, ಹಿಂದುಳಿದ ವರ್ಗಗಳ ಕಲ್ಯಾಣ ಮತ್ತು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ ತಂಗಡಗಿ, ಕರ್ನಾಟಕ ರಾಜ್ಯ ರೇಷ್ಮೆ ಉದ್ಯಮಗಳ ನಿಗಮದ ಅಧ್ಯಕ್ಷೆ ಖನೀಜ್ ಫಾತಿಮಾ, ಶಾಸಕ ಎಂ.ವೈ.ಪಾಟೀಲ, ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಕಲಬುರಗಿ ಮಹಾನಗರ ಪಾಲಿಕೆಯ ಮಹಾಪೌರರಾದ ವರ್ಷಾ ರಾಜೀವ ಜಾನೇ ಇದ್ದರು.



























