Home ಜಿಲ್ಲೆ ಯನಗುಂದಾ ಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕರುಗುಣಮಟ್ಟದಲ್ಲಿ ಲೋಪವಾದರೆ ಸಹಿಸುವುದಿಲ್ಲ : ಶಾಸಕ ಪ್ರಭು ಚವ್ಹಾಣ

ಯನಗುಂದಾ ಸೇತುವೆ ಕಾಮಗಾರಿ ಪರಿಶೀಲಿಸಿದ ಶಾಸಕರುಗುಣಮಟ್ಟದಲ್ಲಿ ಲೋಪವಾದರೆ ಸಹಿಸುವುದಿಲ್ಲ : ಶಾಸಕ ಪ್ರಭು ಚವ್ಹಾಣ

ಔರಾದ್ :ಮಾ.೧೬: ತಾಲ್ಲೂಕಿನ ಯನಗುಂದಾ ಗ್ರಾಮದ ಬಳಿ ೩ ಕೋಟಿ ವೆಚ್ಚದಲ್ಲಿ ನಡೆಯುತ್ತಿರುವ ಸೇತುವೆ ನಿರ್ಮಾಣ ಕಾಮಗಾರಿ ಸ್ಥಳಕ್ಕೆ ಶಾಸಕ ಪ್ರಭು ಬಿ.ಚವ್ಹಾಣ ಅವರು ಭಾನುವಾರ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಈ ಸಂದರ್ಭದಲ್ಲಿ ಕಾಮಗಾರಿಯ ಪ್ರಗತಿಯ ಕುರಿತಂತೆ ಗ್ರಾಮಸ್ಥರೊಂದಿಗೆ ಚರ್ಚಿಸಿದರು. ಮಹಾರಾಷ್ಟ್ರ ಗಡಿಯಿಂದ ಚಿಂತಾಕಿ, ಖಾಶೆಂಪೂರ, ಯನಗುಂದಾ, ತೇಗಂಪೂರ, ಮಮದಾಪೂರ, ಔರಾದ ಜನರಿಗೆ ಸಂಪರ್ಕ ಕಲ್ಪಿಸುವ ಪ್ರಮುಖ ರಸ್ತೆ ಇದಾಗಿದ್ದು, ಕಾಮಗಾರಿ ಅಂದಾಜು ಪತ್ರಿಕೆಯಲ್ಲಿರುವಂತೆ ಸೇತುವೆ ನಿರ್ಮಾಣವಾಗಬೇಕು. ಕಬ್ಬಿಣದ ಬಳಕೆ, ಸಿಮೆಂಟ್ ಹಾಗೂ ಮತ್ತಿತರೆ ಸಲಕರಣೆಗಳನ್ನು ಸರಿಯಾದ ಪ್ರಮಾಣದಲ್ಲಿ ಬಳಕೆ ಮಾಡಬೇಕು. ಗುಣಮಟ್ಟದ ವಿಷಯದಲ್ಲಿ ಲೋಪಗಳು ಕಾಣಿಸಿದರೆ ಯಾವುದೇ ಕಾರಣಕ್ಕೂ ಸಹಿಸುವುದಿಲ್ಲವೆಂದು ಗುತ್ತಿಗೆದಾರರಿಗೆ ಎಚ್ಚರಿಕೆ ನೀಡಿದರು.

ಕಳೆದ ಮಳೆಗಾಲದ ಸಂದರ್ಭದಲ್ಲಿ ಭೀಕರ ಮಳೆಯಿಂದಾಗಿ ಸೇತುವೆ ಸಂಪೂರ್ಣ ಕೊಚ್ಚಿಕೊಂಡು ಹೋಗಿ ತಾಲ್ಲೂಕು ಕೇಂದ್ರಕ್ಕೆ ಸಂಪರ್ಕ ಕಲ್ಪಿಸುವ ಏಕೈಕ ಪ್ರಮುಖ ಮಾರ್ಗವು ಅನೇಕ ದಿನಗಳ ವರೆಗೆ ಸ್ಥಗಿತಗೊಂಡಿತ್ತು. ಸ್ಥಳಕ್ಕೆ ಭೇಟಿ ನೀಡಿದಾಗ ಗ್ರಾಮಸ್ಥರು ಹೊಸ ಸೇತುವೆ ಮಾಡಿಕೊಡಬೇಕೆಂದು ಒತ್ತಾಯಿಸಿದ್ದರು. ಗ್ರಾಮ ಸಂಚಾರದ ವೇಳೆಯೂ ಈ ಬಗ್ಗೆ ಬೇಡಿಕೆ ಸಲ್ಲಿಸಿದ್ದರು. ಆದ್ದರಿಂದ ೩ ಕೋಟಿ ಅನುದಾನ ಒದಗಿಸಿ ಸೇತುವೆ ಕಾಮಗಾರಿ ನಿರ್ಮಿಸಲಾಗುತ್ತಿದೆ. ಇನ್ನು ಮುಂದೆ ಮಳೆಯಿಂದಾಗಿ ರಸ್ತೆ ಸಂಚಾರಕ್ಕೆ ಅಡ್ಡಿಯಾಗುವುದಿಲ್ಲ. ಈ ಭಾಗದ ಗ್ರಾಮಗಳ ದೀರ್ಘಕಾಲದ ಸಮಸ್ಯೆಗೆ ಶಾಶ್ವತ ಪರಿಹಾರ ದೊರೆಯಲಿದೆ ಎಂದು ಶಾಸಕರು ಹೇಳಿದರು.

ಬಹುಬೇಡಿಕೆಯಾಗಿದ್ದ ಸೇತುವೆ ಕಾಮಗಾರಿ ನಿರ್ಮಿಸುತ್ತಿರುವುದರಿಂದ ಬಹುದಿನಗಳ ಸಮಸ್ಯೆಗೆ ಪರಿಹಾರ ಸಿಕ್ಕಿದೆ. ಪ್ರತಿ ಮಳೆಗಾಲದ ಸಂದರ್ಭದಲ್ಲಿ ರಸ್ತೆ ಮುಚ್ಚುವ ಭೀತಿ ಎದುರಾಗುತ್ತಿತ್ತು. ನೀರು ಬತ್ತಿ ಹೋಗುವ ವರೆಗೆ ವಿದ್ಯಾರ್ಥಿಗಳು ಶಾಲಾ-ಕಾಲೇಜುಗಳಿಗೆ ಹೋಗಲು ಸಾಧ್ಯವಾಗುತ್ತಿರಲಿಲ್ಲ. ರೈತರು ತಮ್ಮ ಬೇಳೆ ಕಾಳುಗಳನ್ನು ಮಾರಾಟ ಮಾಡಲು ಮತ್ತು ಸಾರ್ವಜನಿಕರು ನಿತ್ಯ ವ್ಯವಹಾರಗಳಿಗೆ ಓಡಾಡಲು ಸಾಕಷ್ಟು ಅನಾನುಕೂಲ ಎದುರಿಸುತ್ತಿದ್ದರು. ನಮ್ಮ ಮನವಿಗೆ ಸ್ಪಂದಿಸಿ ಹೊಸ ಸೇತುವೆ ನಿರ್ಮಿಸುತ್ತಿರುವುದಕ್ಕೆ ಇದೇ ವೇಳೆ ಗ್ರಾಮಸ್ಥರು ಶಾಸಕರಿಗೆ ಧನ್ಯವಾದ ಸಲ್ಲಿಸಿದರು.

ಈ ಸಂದರ್ಭದಲ್ಲಿ ಶಿವರಾಜ ಅಲ್ಮಾಜೆ, ರಾಮಶೆಟ್ಟಿ ಪನ್ನಾಳೆ, ಪ್ರತೀಕ ಚವ್ಹಾಣ, ಸುಜಿತ ರಾಠೋಡ, ವಿಲಾಸ ಚವ್ಹಾಣ, ಶಿವಕಾಂತ ಮಜಗೆ, ಸಂಗಮೇಶ ಪಾಟೀಲ, ಜಗದೀಶ ಪಾಟೀಲ, ಗೋಪಾಲರೆಡ್ಡಿ, ರಾಜಕುಮಾರ, ಶಂಕರ ರೆಡ್ಡಿ, ಅಶೋಕ ಹಂಗರಗೆ, ಗಣಪತಿ, ಸಂತೋಷ ಪಾಟೀಲ, ಬಸವರಾಜ ಶೇಟಕಾರ್, ಬಸಗೊಂಡ, ಚಂದ್ರಪ್ಪಾ, ಜಗನಾಥ, ಅಶೋಕ, ಗಣಪತಿ, ಶೇಷಾರಾವ್ ಹಾಗೂ ಯನಗುಂದಾ ಗ್ರಾಮದ ಮುಖಂಡರು ಹಾಗೂ ಅನೇಕ ಗ್ರಾಮಸ್ಥರು ಉಪಸ್ಥಿತರಿದ್ದರು.