
ಕಲಬುರಗಿ: ಮೇ.8:ಯಾವುದೇ ರಾಷ್ಟ್ರದಲ್ಲಿ ಕ್ರೀಡಾ ಕ್ಷೇತ್ರ ಬೆಳವಣಿಗೆಯಾಗಬೇಕಾದರೆ, ಅಲ್ಲಿನ ಕ್ರೀಡಾ ಪ್ರತಿಭೆಗಳನ್ನು ಗುರ್ತಿಸಿ ಅವರಿಗೆ ಸೂಕ್ತವಾದ ತರಬೇತಿ, ಪ್ರೋತ್ಸಾಹ ನೀಡಬೇಕು. ದೈಹಿಕ ಶಿಕ್ಷಕರು, ತರಬೇತಿದಾರರಿಗೆ ನಿರಂತರವಾಗಿ ಸೂಕ್ತ ತರಬೇತಿ ನೀಡುವ ಮೂಲಕ ಹೊಸ ವಿಷಯಗಳು, ನಿಯಮಗಳು, ಕ್ರೀಡೆಗಳ ಬಗ್ಗೆ ತಿಳಿಸಿಕೊಡಬೇಕು. ನಮ್ಮ ಭಾಗದಲ್ಲಿ ಕೂಡಾ ಪ್ರತಿಭಾವಂತ ಕ್ರೀಡಾಪಟುಗಳಿದ್ದು, ಅವರನ್ನು ಗುರ್ತಿಸಿ, ಪ್ರೋತ್ಸಾಹಿಸಿದರೆ ಸಾಧನೆ ಮಾಡಲು ಸಾಧ್ಯವಿದೆ ಎಂದು ದೈಹಿಕ ಶಿಕ್ಷಣ ಶಿಕ್ಷಕ ಶರಣು ಮಲಶೆಟ್ಟಿ ಅಭಿಮತಪಟ್ಟರು.
ನಗರದ ಆಳಂದ ರಸ್ತೆಯ ಸಂತೋಷ ಕಾಲನಿ ಕ್ರಾಸ್ ಸಮೀಪವಿರುವ ‘ರಿಪಬ್ಲಿಕ್ ಸ್ಪೋಕನ್ ಇಂಗ್ಲೀಷ್ ಅಕಾಡೆಮಿ’ಯಲ್ಲಿ ‘ಬಸವೇಶ್ವರ ಸಮಾಜ ಸೇವಾ ಬಳಗ’ದ ವತಿಯಿಂದ ಜರುಗಿದ ‘ವಿಶ್ವ ಅಥ್ಲೆಟಿಕ್ಸ್ ದಿನಾಚರಣೆ’ಯಲ್ಲಿ ಅವರು ಮಾತನಾಡುತ್ತಿದ್ದರು.
ಉಪನ್ಯಾಸಕ ಎಚ್.ಬಿ.ಪಾಟೀಲ ಮಾತನಾಡಿ, ಕ್ರೀಡೆಗಳು ವ್ಯಕ್ತಿಯ ದೈಹಿಕ ಮತ್ತು ಮಾನಸಿಕ ಬೆಳವಣಿಗೆಗೆ ಪೂರಕವಾಗಿವೆ. ಪ್ರತಿಯೊಬ್ಬರಲ್ಲಿಯೂ ಕ್ರೀಡಾ ಮನೋಭಾವ ಬೆಳೆಯಬೇಕು. ಅಥ್ಲೆಟಿಕ್ಸ್ ಕ್ರೀಡೆಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಪ್ರತಿವರ್ಷ ‘ಮೇ-7’ರಂದು ಈ ದಿನಾಚರಣೆಯನ್ನು ಆಚರಿಸಲಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ಸಂಸ್ಥೆಯ ಅಧ್ಯಕ್ಷ ದತ್ತು ಹಡಪದ, ಪ್ರಮುಖರಾದ ಶಿವಯೋಗೆಪ್ಪಾ ಎಸ್.ಬಿರಾದಾರ, ಡಾ.ರಾಜಶೇಖರ ಪಾಟೀಲ್ ಹಾಗೂ ವಿದ್ಯಾರ್ಥಿಗಳು ಇದ್ದರು.






















