Home Lead News ಮಮತಾ ಬ್ಯಾನರ್ಜಿ‌ ಸರ್ಕಾರ ವಜಾ

ಮಮತಾ ಬ್ಯಾನರ್ಜಿ‌ ಸರ್ಕಾರ ವಜಾ

ಕೋಲ್ಕತ್ತಾ: ರಾಜೀನಾಮೆ ನೀಡುವುದಿಲ್ಲ ಎಂದು ಹಠ ಮಾರಿ ಧೋರಣೆ ತಳೆದಿದ್ದ ಮಮತಾ ಬ್ಯಾನರ್ಜಿ ನೇತೃತ್ವದ ಸರ್ಕಾರವನ್ನೇ ಪಶ್ಚಿಮ ಬಂಗಾಳ ರಾಜ್ಯಪಾಲ ಆರ್‌ಎನ್‌ ರವಿ ಇಂದು ವಜಾಗೊಳಿಸಿದ್ದಾರೆ.

ವಿಧಾನಸಭಾ ಚುನಾವಣೆಯಲ್ಲಿ ತೃಣಮೂಲ ಕಾಂಗ್ರೆಸ್ ಸೋತಿದ್ದರೂ, ಮಮತಾ ಬ್ಯಾನರ್ಜಿ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವುದಿಲ್ಲ ಎಂದು ಹಠಕ್ಕೆ ಬಿದ್ದಿದ್ದರು.

ಟಿಎಂಸಿಗೆ ಸೋಲಾಗಿಲ್ಲ, ಚುನಾವಣಾ ಆಯೋಗದಿಂದಾಗಿ ಪಶ್ಚಿಮ ಬಂಗಾಳದಲ್ಲಿ ಬಿಜೆಪಿ ಜಯಗಳಿಸಿದೆ. ಬೇಕಿದ್ದರೆ ರಾಜ್ಯಪಾಲರೇ ನನ್ನನ್ನು ವಜಾ ಮಾಡಲಿ ಎಂದು ಸವಾಲು ಹಾಕಿದ್ದರು.

ಸಂವಿಧಾನದ 172ನೇ ವಿಧಿಯನುಸಾರ, ವಿಧಾನಸಭೆಯು ತನ್ನ ಮೊದಲ ಸಭೆಯಿಂದ ಐದು ವರ್ಷಗಳ ಅವಧಿಯನ್ನು ಪೂರೈಸಿದ ನಂತರ ಸ್ವಯಂಚಾಲಿತವಾಗಿ ವಿಸರ್ಜನೆಯಾಗುತ್ತದೆ. ಅದರಂತೆ 2021ರಲ್ಲಿ ಅಸ್ತಿತ್ವಕ್ಕೆ ಬಂದಿದ್ದ ಸಭೆಯ ಅವಧಿಯು ಇಂದು ಪೂರ್ಣಗೊಂಡಿದ್ದು 17ನೇ ವಿಧಾನಸಭೆ ಅವಧಿ ಅಧಿಕೃತವಾಗಿ ಅಂತ್ಯಗೊಂಡಿದೆ.

ಇದರ ಬೆನ್ನಲ್ಲೇ ಆರ್‌ಎನ್‌ ರವಿ ಅವರು ಸಂವಿಧಾನದ 164(1)ನೇ ವಿಧಿಯಡಿ ಮೇ 07 ರಿಂದ ಜಾರಿಗೆ ಬರುವಂತೆ ಮಮತಾ ಬ್ಯಾನರ್ಜಿ ನೇತೃತ್ವದ ಸಚಿವ ಸಂಪುಟವನ್ನು ವಜಾಗೊಳಿಸಿ ವಿಧಾನಸಭೆಯನ್ನು ವಿಸರ್ಜಿಸಿದ್ದಾರೆ.

ಈ ಅವಧಿ ಮುಕ್ತಾಯದೊಂದಿಗೆ ಮಮತಾ ಬ್ಯಾನರ್ಜಿ ಸೇರಿದಂತೆ ಎಲ್ಲಾ 294 ಶಾಸಕರ ಸದಸ್ಯತ್ವವು ಅಧಿಕೃತವಾಗಿ ರದ್ದಾಗಿದೆ. ಮಮತಾ ಬ್ಯಾನರ್ಜಿ ಅವರು ರಾಜೀನಾಮೆ ನೀಡಲು ನಿರಾಕರಿಸಿದ್ದರೂ ಸಹ ಸಂವಿಧಾನದ ನಿಯಮದಂತೆ ಅವರು ಈಗ ಮುಖ್ಯಮಂತ್ರಿ ಸ್ಥಾನದಲ್ಲಿ ಮುಂದುವರಿಯಲು ಸಾಧ್ಯವಿಲ್ಲ.

ಈ ಚುನಾವಣೆಯಲ್ಲಿ ಬಿಜೆಪಿ 207 ಸ್ಥಾನಗಳನ್ನು ಗೆಲ್ಲುವ ಮೂಲಕ ಸ್ಪಷ್ಟ ಬಹುಮತ ಪಡೆದಿದೆ. ಟಿಎಂಸಿ 80 ಸ್ಥಾನಗಳಿಗೆ ಕುಸಿದು ತೀವ್ರ ಮುಖಭಂಗ ಅನುಭವಿಸಿತ್ತು.