
ಯಾದಗಿರಿ: ಏ.26: ಆಸ್ತಿ ವಿಚಾರಕ್ಕೆ ಸಂಬಂಧಿಸಿದ ಕೌಟುಂಬಿಕ ಕಲಹವು ಭೀಕರ ತಿರುವು ಪಡೆದು, ತಂದೆ ಮತ್ತು ಸಹೋದರರೇ ಸೇರಿ ಪುತ್ರಿಯ ಮೇಲೆ ಹಲ್ಲೆ ನಡೆಸಿದ ಘಟನೆ ಯಾದಗಿರಿ ಜಿಲ್ಲೆಯ ಸುರಪುರ ತಾಲೂಕಿನ ದೇವತ್ಕಲ್ ಗ್ರಾಮದಲ್ಲಿ ನಡೆದಿದೆ.
ಹಲ್ಲೆಗೆ ಒಳಗಾದ ವಿಜಯಲಕ್ಷ್ಮಿ ಕಣ್ಣೀರಲ್ಲಿ ತತ್ತರಿಸುತ್ತಿದ್ದು, ಗಂಭೀರ ಗಾಯಗಳಿಂದ ಯಾದಗಿರಿಯ ಯೀಮ್ಸ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಹಿತಿಯ ಪ್ರಕಾರ, ವಿಜಯಲಕ್ಷ್ಮಿಯ ತಾಯಿ ಹುಲಗಮ್ಮಳ ತವರೂರು ಪೀರಾಪುರ ಗ್ರಾಮದಲ್ಲಿರುವ ಜಮೀನಿನ ಆಸ್ತಿ ವಿಚಾರವೇ ಈ ದುರಂತಕ್ಕೆ ಕಾರಣವಾಗಿದೆ. ಈ ಜಮೀನಿನ ಮೇಲಿನ ಹಕ್ಕು ವಿಚಾರವಾಗಿ ಕುಟುಂಬದಲ್ಲಿ ದೀರ್ಘಕಾಲದಿಂದ ಕಲಹ ನಡೆಯುತ್ತಿತ್ತು ಎನ್ನಲಾಗಿದೆ. ಈ ಹಿನ್ನೆಲೆಯಲ್ಲಿ ತಂದೆ ಹಣಮಂತ ಹಾಗೂ ಪುತ್ರರು ಗೋವಿಂದರಾಜ್ ಮತ್ತು ವೆಂಕಟೇಶ ಸೇರಿದಂತೆ ಕೆಲವರು ವಿಜಯಲಕ್ಷ್ಮಿಯ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ವಿಜಯಲಕ್ಷ್ಮಿ ಶಾರ್ಟ್ ಮೂವಿಗಳು ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ರೀಲ್ಸ್ ಮಾಡಿ ಅದರಿಂದ ಬಂದ ಆದಾಯದ ಮೂಲಕ ಜೀವನ ನಡೆಸುತ್ತಿದ್ದರು. ಆದರೆ ಈ ವಿಚಾರಕ್ಕೂ ಸಹೋದರರಿಂದ ವಿರೋಧ ವ್ಯಕ್ತವಾಗುತ್ತಿದ್ದು, ಅವಮಾನಕಾರಿ ಮಾತುಗಳೊಂದಿಗೆ ಪದೇ ಪದೇ ಕಿರುಕುಳ ನೀಡಲಾಗುತ್ತಿತ್ತು ಎಂದು ತಿಳಿದುಬಂದಿದೆ. ಅಲ್ಲದೆ, ಅಸಭ್ಯ ರೀತಿಯಲ್ಲಿ ಹಣ ತರಲು ಒತ್ತಾಯಿಸುತ್ತಿದ್ದರೆಂದು ಸಹೋದರರ ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ.
ಈ ಎಲ್ಲಾ ಕಾರಣಗಳಿಂದ ಬೇಸತ್ತಿದ್ದ ವಿಜಯಲಕ್ಷ್ಮಿ ಮನೆಗೆ ಬಂದ ಸಂದರ್ಭದಲ್ಲಿ ಮತ್ತೊಮ್ಮೆ ಜಗಳ ಉಂಟಾಗಿ, ತಂದೆ ಹಾಗೂ ಸಹೋದರರು ಸೇರಿ ಹಲ್ಲೆ ನಡೆಸಿದ್ದಾರೆ ಎಂದು ಹೇಳಲಾಗಿದೆ. ಹಲ್ಲೆಯಲ್ಲಿ ವಿಜಯಲಕ್ಷ್ಮಿಯ ಕಾಲು ಮುರಿದಿದ್ದು, ತೀವ್ರವಾಗಿ ಗಾಯಗೊಂಡಿದ್ದಾರೆ.
ಘಟನೆಯ ನಂತರ ವಿಜಯಲಕ್ಷ್ಮಿಯನ್ನು ಯಾದಗಿರಿಯ ಯೀಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದ್ದು, ತನ್ನ ಜೀವಕ್ಕೆ ಭಯವಿದೆ ಎಂದು ಹೇಳಿ ಪೆÇಲೀಸರಿಂದ ರಕ್ಷಣೆ ನೀಡುವಂತೆ ಮನವಿ ಮಾಡಿದ್ದಾರೆ.
ಈ ಸಂಬಂಧ ಸುರಪುರ ಪೆÇಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೆÇಲೀಸರು ತನಿಖೆ ಕೈಗೊಂಡಿದ್ದಾರೆ.






















