
ಸಂಜೆವಾಣಿ ವಾರ್ತೆ,
ವಿಜಯಪುರ, ಮಾ. ೧೬: ಬಸವಣ್ಣನವರ ಜನ್ಮಭೂಮಿ, ಸೂಫಿ ಸಂತರು ನಡೆದಾಡಿದ ವಿಜಯಪುರ ಜಿಲ್ಲೆ ಭಾವೈಕ್ಯತೆಗೆ ಹೆಸರಾಗಿದೆ ಎಂದು ಕೈಗಾರಿಕೆ, ಮೂಲಸೌಲಭ್ಯ ಅಭಿವೃದ್ಧಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಎಂ. ಬಿ. ಪಾಟೀಲ ಹೇಳಿದ್ದಾರೆ.
ರವಿವಾರ ನಗರದಲ್ಲಿ ಕೆ. ಸಿ. ಮಾರುಕಟ್ಟೆ ವ್ಯಾಪಾರಸ್ಥರ ಸಂಘ ಪವಿತ್ರ ರಂಜಾನ್ ಅಂಗವಾಗಿ ಆಯೋಜಿಸಿದ್ದ ಇಫ್ತಿಯಾರ್ ಕೂಟದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ಜಿಲ್ಲೆಯಲ್ಲಿ ಬಸವಾದಿ ಶರಣರು ಸಮಸಮಾಜಕ್ಕಾಗಿ ಶ್ರಮಿಸಿದ್ದಾರೆ. ಆದಿಲ್ ಶಾಹಿ ಬಾದಷರು ಅಭಿವೃದ್ಧಿ ಮಾಡಿದ್ದಾರೆ. ಸೌಹಾರ್ದತೆ ಮತ್ತು ಭಾವೈಕ್ಯತೆಗೆ ಜಿಲ್ಲೆ ಹೆಸರಾಗಿದೆ. ಈ ಬಾರಿ ಯುಗಾದಿ ಮತ್ತು ರಂಜಾನ್ ಜೊತೆಗೆ ಬಂದಿವೆ. ಎಲ್ಲರಿಗೂ ದೇವರು ಒಳಿತನ್ನು ಮಾಡಲಿ ಎಂದು ಸಚಿವರು ಹೇಳಿದರು.
ಧರ್ಮಗುರು ತನ್ವೀರ್ ಪೀರಾ ಹಾಶ್ಮಿ ಮಾತನಾಡಿ, ಕರ್ನಾಟಕ ಮತ್ತು ವಿಜಯಪುರ ಜಿಲ್ಲೆ ಶರಣರು, ಸೂಫಿ ಸಂತರ ನಾಡಾಗಿವೆ. ಯುಗಾದಿ ಮತ್ತು ರಂಜಾನ್ ಒಟ್ಟಿಗೆ ಬಂದಿರುವುದರಿAದ ಎಲ್ಲರೂ ಸೇರಿ ಆಚರಿಸೋಣ ಎಂದು ಹೇಳಿದರು.
ಕಾಂಗ್ರೆಸ್ ಮುಖಂಡ ಅಬ್ದುಲ್ ಹಮೀದ್ ಮುಶ್ರಿಫ್ ಮಾತನಾಡಿ, ಪ್ರತಿವರ್ಷ ಕೆ. ಸಿ. ಮಾರುಕಟ್ಟೆಯಲ್ಲಿ ಇಫ್ತಿಯಾರ ಕೂಟ ಆಯೋಜಿಸುತ್ತಿದೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ವಿಜಯಪುರ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಡಾ. ಗಂಗಾಧರ ಎಸ್. ಸಂಬಣ್ಣಿ, ಮಾಜಿ ಅಧ್ಯಕ್ಷ ಕನ್ನಾನ್ ಮುಶ್ರೀಫ್, ಮಾಜಿ ಮೇಯರ್ ಸಜ್ಜಾದೆ ಪೀರಾ ಮುಶ್ರೀಫ್, ಮುಖಂಡರಾದ ಆಜಾದ್ ಪಟೇಲ್, ಎಸ್. ಎಂ. ಪಾಟೀಲ ಗಣಿಹಾರ, ಮಹಾದೇವ ಪವಾರ, ಅಶ್ಪಾಕ್ ಮನಗೂಳಿ, ಚಾಂದಸಾಬ ಗಡಗಲಾವ, ಅಬ್ದುಲ್ ರಜಾಕ್ ಹೊರ್ತಿ, ರಫೀಕ್ ಟಪಾಲ್, ಮೈನುದ್ದೀನ್ ಬೀಳಗಿ, ಶಕೀಲ ಸುತಾರ, ಜಮೀರ ಉಸ್ತಾದ, ಶಕೀಲ ಬಾಗಮಾರೆ, ಜಮೀರ್ ಭಕ್ಷಿ, ಶಬ್ಬೀರ ಜಹಾಗೀರದಾರ, ದಿನೇಶ ಹಳ್ಳಿ ಮುಂತಾದವರು ಉಪಸ್ಥಿತರಿದ್ದರು.



























