Home Lead News ಪಂಚರಾಜ್ಯ ಚುನಾವಣೆಗೆ ಮುಹೂರ್ತ

ಪಂಚರಾಜ್ಯ ಚುನಾವಣೆಗೆ ಮುಹೂರ್ತ

( ಏಪ್ರಿಲ್,ಮೇನಲ್ಲಿ ಚುನಾವಣೆ ಸಾಧ್ಯತೆ )

ನವದೆಹಲಿ, ಮಾ. ೧೫- ದೇಶದ ರಾಜಕಾರಣದಲ್ಲಿ ಅತ್ಯಂತ ಮಹತ್ವ ಎನಿಸಿರುವ ಪಂಚ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇಂದು ಮುಹೂರ್ತ ನಿಗದಿ ಮಾಡಲಿದೆ. ಈ ಪಂಚ ರಾಜ್ಯಗಳ ವಿಧಾನಸಭೆಗೆ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಚುನಾವಣಾ ದಿನಾಂಕಗಳು ನಿಗದಿಯಾಗುವ ಸಾಧ್ಯತೆ ಇದೆ.


ಪಶ್ಚಿಮ ಬಂಗಾಳ, ಕೇರಳ, ತಮಿಳುನಾಡು, ಅಸ್ಸಾಂ ಮತ್ತು ಪುದುಚೇರಿ ರಾಜ್ಯಗಳ ವಿಧಾನಸಭಾ ಚುನಾವಣೆಗೆ ಸಂಬಂಧಿಸಿದಂತೆ ಕೇಂದ್ರ ಚುನಾವಣಾ ಆಯೋಗವು ಇಂದು ವೇಳಾಪಟ್ಟಿ ಪ್ರಕಟಿಸಲಿದೆ.


ಇಂದು ಸಂಜೆ ದೆಹಲಿಯಲ್ಲಿ ನಡೆಯಲಿರುವ ಸುದ್ದಿಗೋಷ್ಠಿಯಲ್ಲಿ ಮುಖ್ಯ ಚುನಾವಣಾ ಆಯುಕ್ತ ಜಾನೇಶ್‌ಕುಮಾರ್, ಚುನಾವಣಾ ಆಯುಕ್ತ ಡಾ. ಸುಖವೀರ್‌ಸಿಂಗ್ ಸಂದು ಮತ್ತು ಡಾ. ವಿವೇಕ್ ಜೋಶಿ ಇವರುಗಳು ಪಂಚ ರಾಜ್ಯಗಳ ವಿಧಾನಸಭೆಯ ವೇಳಾಪಟ್ಟಿಯನ್ನು ಪ್ರಕಟಿಸುವರು.


ಮತದಾರರ ಪಟ್ಟಿಯ ಸಮಗ್ರ ವಿಶೇಷ ಪರಿಷ್ಕರಣೆ (ಎಸ್‌ಐಆರ್) ನಂತರ ಈ ರಾಜ್ಯಗಳಲ್ಲಿ ನಡೆಯುತ್ತಿರುವ ಮೊದಲ ಚುನಾವಣೆ ಇದಾಗಿದೆ.


ಪಶ್ಚಿಮ ಬಂಗಾಳದಲ್ಲಿ ಮೇ ೭ಕ್ಕೆ, ತಮಿಳುನಾಡಿನಲ್ಲಿ ಮೇ ೧೦ಕ್ಕೆ, ಅಸ್ಸಾಂನಲ್ಲಿ ಮೇ ೨೦ಕ್ಕೆ, ಕೇರಳದಲ್ಲಿ ಮೇ ೨೩ಕ್ಕೆ ಹಾಗೂ ಪುದುಚೆರಿಯಲ್ಲಿ ಜೂನ್ ೧೫ ಕ್ಕೆ ವಿಧಾನಸಭೆ ಅವಧಿ ಕೊನೆಗೊಳ್ಳಲಿದೆ.


ಈ ಅವಧಿ ಕೊನೆಗೊಳ್ಳುವ ಮೊದಲೇ ವಿಧಾನಸಭಾ ಚುನಾವಣೆಗಳು ನಡೆದು ಹೊಸ ವಿಧಾನಸಭೆ ಅಸ್ತಿತ್ವಕ್ಕೆ ಬರಬೇಕಿದೆ.


೨೦೨೧ ರಲ್ಲಿ ಪಶ್ಚಿಮ ಬಂಗಾಳದಲ್ಲಿ ೮ ಹಂತದಲ್ಲಿ ಹಾಗೂ ಅಸ್ಸಾಂನಲ್ಲಿ ೩ ಹಂತದಲ್ಲಿ ಚುನಾವಣೆ ನಡೆದಿತ್ತು. ಕೇರಳ, ತಮಿಳುನಾಡು, ಪುದುಚೆರಿ ರಾಜ್ಯಗಳಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆದಿತ್ತು.


ಪಶ್ಚಿಮಬಂಗಾಳದಲ್ಲಿ ೮ ಹಂತದ ಚುನಾವಣೆಗೆ ಬಿಜೆಪಿ ಆಕ್ಷೇಪ ವ್ಯಕ್ತಪಡಿಸಿದ್ದು, ಒಂದು ಅಥವಾ ಎರಡು ಹಂತಗಳಲ್ಲಿ ಚುನಾವಣೆ ನಡೆಯುವ ಸಾಧ್ಯತೆ ಇದೆ. ಅಸ್ಸಾಂನಲ್ಲೂ ೨ ಹಂತಗಳಲ್ಲಿ ಚುನಾವಣೆ ಪೂರ್ಣಗೊಳ್ಳುವ ಸಾಧ್ಯತೆ ಇದ್ದು, ತಮಿಳುನಾಡು, ಕೇರಳ ಮತ್ತು ಪುದುಚೆರಿಯಲ್ಲಿ ಒಂದೇ ಹಂತದಲ್ಲಿ ಚುನಾವಣೆ ನಡೆಸುವ ಬಗ್ಗೆ ಚುನಾವಣಾ ಆಯೋಗ ತೀರ್ಮಾನ ಪ್ರಕಟಿಸುವ ನಿರೀಕ್ಷೆ ಇದೆ.


ಈ ಪಂಚ ರಾಜ್ಯಗಳ ವಿಧಾನಸಭೆಗೆ ಚುನಾವಣಾ ವೇಳಾಪಟ್ಟಿ ಪ್ರಕಟವಾಗುತ್ತಿದ್ದಂತೆಯೇ ಈ ಐದು ರಾಜ್ಯಗಳಲ್ಲಿ ಚುನಾವಣಾ ಮಾದರಿ ನೀತಿ ಸಂಹಿತೆ ಜಾರಿಗೆ ಬರಲಿದೆ.


ಈ ಐದು ರಾಜ್ಯಗಳಲ್ಲಿ ವಿಶೇಷ ಮತದಾರರ ಪಟ್ಟಿ ಪರಿಷ್ಕರಣೆ ಮಾಡಿ ಅಂತಿಮ ಮತದಾರರ ಪಟ್ಟಿಯನ್ನು ಚುನಾವಣಾ ಆಯೋಗ ಈಗಾಗಲೇ ಪ್ರಕಟಿಸಿದೆ.


ರಾಜಕೀಯವಾಗಿ ಮಹತ್ವ


ಈ ಪಂಚರಾಜ್ಯಗಳ ಚುನಾವಣಾ ಫಲಿತಾಂಶ ದೇಶದ ರಾಜಕೀಯದಲ್ಲಿ ಅತ್ಯಂತ ಮಹತ್ವ ಪಡೆದಿದ್ದು, ಈ ಪಂಚ ರಾಜ್ಯಗಳ ಚುನಾವಣಾ ಫಲಿತಾಂಶ ದೇಶದ ರಾಜಕೀಯದ ಹೊಸ ದಿಕ್ಕು ದೆಸೆಗಳನ್ನು ನಿರ್ಧರಿಸಲಿದೆ. ಹಾಗಾಗಿ ಈ ಚುನಾವಣೆಗಳತ್ತ ಎಲ್ಲರ ಚಿತ್ತ ನೆಟ್ಟಿದೆ.


ಕೇಂದ್ರದಲ್ಲಿ ಅಧಿಕಾರದಲ್ಲಿರುವ ಎನ್‌ಡಿಎಗೆ ಈ ಚುನಾವಣೆಗಳು ಅತ್ಯಂತ ಮಹತ್ವ ಎನಿಸಿವೆ.


ಅಸ್ಸಾಂ ಹೊರತುಪಡಿಸಿದರೆ ಉಳಿದ ನಾಲ್ಕು ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳೇ ಬಲಾಢ್ಯವಾಗಿದ್ದು, ಪ್ರಾದೇಶಿಕ ಪಕ್ಷಗಳ ಭದ್ರಕೋಟೆಯನ್ನು ಬಿಜೆಪಿ ಭೇದಿಸಿ ತಮಿಳುನಾಡು, ಪಶ್ಚಿಮ ಬಂಗಾಳದಲ್ಲಿ ಅಧಿಕಾರ ಹಿಡಿಯಲಿದೆಯೇ ಎಂಬುದು ಎಲ್ಲರಲ್ಲೂ ಕುತೂಹಲ ಮೂಡಿಸಿದೆ.
ಪಶ್ಚಿಮ ಬಂಗಾಳದಲ್ಲಿ ತೃಣಮೂಲ

ಕಾಂಗ್ರೆಸ್‌ನ್ನು ಮಣಿಸಿ ಶತಾಯ-ಗತಾಯ ಅಧಿಕಾರದ ಗದ್ದುಗೆ ಏರಬೇಕು ಎಂದು ಬಿಜೆಪಿ ಈಗಾಗಲೇ ಎಲ್ಲಾ ರೀತಿಯ ರಾಜಕೀಯ ತಂತ್ರವನ್ನು ಹೆಣೆದಿದೆ.
ಸತತ ಮೂರು ಅವಧಿಯಿಂದ ಪಶ್ಚಿಮ ಬಂಗಾಳದಲ್ಲಿ ಅಧಿಕಾರದ ಚುಕ್ಕಾಣಿ ಹಿಡಿದಿರುವ ತೃಣಮೂಲ ಕಾಂಗ್ರೆಸ್‌ನ ಅಧಿಪತ್ಯ ಅಂತ್ಯಗೊಳ್ಳಲಿದೆಯೇ, ಅಲ್ಲಿ ಕಮಲಕ್ಕೆ ಜನರ ಆಶೀರ್ವಾದ ಸಿಗಲಿದೆಯೇ ಎಂಬುದು ಕುತೂಹಲ ಮೂಡಿಸಿದೆ.


ಪಶ್ಚಿಮ ಬಂಗಾಳದಲ್ಲಿ ೨೦೧೧ ರಿಂದ ಮಮತಾ ಬ್ಯಾನರ್ಜಿ ಮುಖ್ಯಮಂತ್ರಿಯಾಗಿ ಅಧಿಕಾರಿದಲ್ಲಿದ್ದಾರೆ. ಅವರ ಅಧಿಕಾರವನ್ನು ಅಂತ್ಯಗೊಳಿಸಿ ಬಿಜೆಪಿ ಸರ್ಕಾರ ರಚನೆ ಸಾಧ್ಯವಾಗುತ್ತದೆಯೇ ಎಂಬುದು ದೇಶದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.


ತಮಿಳುನಾಡಿನಲ್ಲಿ ಮೊದಲಿನಿಂದಲೂ ಪ್ರಾದೇಶಿಕ ಪಕ್ಷಗಳದ್ದೇ ಅಧಿಪತ್ಯವಿದ್ದು, ಆಡಳಿತಾರೂಢ ಡಿಎಂಕೆ ಮತ್ತೆ ಅಧಿಕಾರ ಉಳಿಸಿಕೊಳ್ಳಲಿದೆಯೇ ಎಂಬುದು ಕುತೂಹಲಕ್ಕೆ ಕಾರಣವಾಗಿದೆ. ಇಲ್ಲಿ ಡಿಎಂಕೆಗೆ ಎಐಎಡಿಎಂಕೆ, ಬಿಜೆಪಿ ಮತ್ತು ನಟ ವಿಜಯ್ ರವರ ಟಿವಿಕೆ ಪಕ್ಷಗಳು ಪ್ರತಿಸ್ಪರ್ಧಿಗಳಾಗಿವೆ.


ನಟನೆಗೆ ನಿವೃತ್ತಿ ಘೋಷಿಸಿ ರಾಜಕಾರಣಕ್ಕೆ ಧುಮುಕಿ ಟಿವಿಕೆ ಪಕ್ಷ ಸ್ಥಾಪಿಸಿರುವ ನಟ ವಿಜಯ್‌ಗೆ ರಾಜಕಾರಣದಲ್ಲಿ ಯಶಸ್ಸು ಸಿಗುತ್ತದೆಯೇ ಎಂಬುದು ಕುತೂಹಲ ಮೂಡಿಸಿದೆ. ತಮಿಳುನಾಡಿನಲ್ಲಿ ಬಿಜೆಪಿ ಮತ್ತು ಎಐಡಿಎಂಕೆ ಮೈತ್ರಿ ಮಾಡಿಕೊಂಡಿವೆ ಅಸ್ಸಾಂ ನಲ್ಲಿ ಬಿಜೆಪಿ ಅಧಿಕಾರದಲ್ಲಿದ್ದು, ಇಲ್ಲಿ ಕಾಂಗ್ರೆಸ್ ಮತ್ತೆ ಅಧಿಕಾರ ಮರಳಿ ಪಡೆಯಲು ಪೈಪೋಟಿ ನಡೆಸಿದೆ.


ಕೇರಳದಲ್ಲಿ ಸಿಪಿಎಂ ನೇತೃತ್ವದಲ್ಲಿ ಎಲ್‌ಡಿಎಫ್ ಅಧಿಕಾರದಲ್ಲಿದ್ದು, ಕಾಂಗ್ರೆಸ್ ನೇತೃತ್ವದ ಯುಡಿಎಫ್ ಮತ್ತೆ ಅಧಿಕಾರ ಗದ್ದುಗೆಗೇರಲು ಪ್ರಯತ್ನ ನಡೆಸಿದೆ.
ಪುದುಚೆರಿಯಲ್ಲಿ ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ ಅಧಿಕಾರದಲ್ಲಿದ್ದು, ಮುಖ್ಯಮಂತ್ರಿ ಎನ್. ರಂಗಸ್ವಾಮಿ ಅಧಿಕಾರ ಉಳಿಸಿಕೊಳ್ಳುವರೇ ಎಂಬುದು ಕುತೂಹಲ ಮೂಡಿಸಿದೆ. ಇಲ್ಲಿ ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ ಪಕ್ಷ ಪ್ರಬಲ ಸ್ಪರ್ಧೆ ನೀಡಿದೆ.


ಈ ಚುನಾವಣೆಯಲ್ಲಿ ಆಲ್ ಇಂಡಿಯಾ ಎನ್.ಆರ್. ಕಾಂಗ್ರೆಸ್ ಮತ್ತು ಬಿಜೆಪಿ ಮೈತ್ರಿ ಮಾಡಿಕೊಂಡಿವೆ.

ರಾಜ್ಯದಲ್ಲೂ ಉಪಚುನಾವಣೆಗೆ ದಿನಾಂಕ ನಿಗದಿ ಸಾಧ್ಯತೆ


ರಾಜ್ಯದ ೨ ವಿಧಾನಸಭಾ ಕ್ಷೇತ್ರಗಳ ಉಪಚುನಾವಣೆಗೆ ಕೇಂದ್ರ ಚುನಾವಣಾ ಆಯೋಗ ಇಂದು ದಿನಾಂಕ ಘೋಷಣೆ ಮಾಡುವ ಸಾಧ್ಯತೆ ಇದೆ.


ರಾಜ್ಯದ ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದ್ದು, ಈ ಉಪಚುನಾಣೆಗೆ ಕೇಂದ್ರ ಚುನಾವಣಾ ಆಯೋಗ ದೆಹಲಿಯಲ್ಲಿ ಸಂಜೆ ನಡೆಸಲಿರುವ ಪಂಚರಾಜ್ಯಗಳ ಚುನಾವಣಾ ವೇಳಾಪಟ್ಟಿ ಸುದ್ದಿಗೋಷ್ಠಿಯಲ್ಲಿ ದಿನಾಂಕವನ್ನು ಘೋಷಿಸುವ ಸಾಧ್ಯತೆ ಇದೆ.


ರಾಜ್ಯದಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಶಾಸಕರಾಗಿದ್ದ ಹೆಚ್.ವೈ. ಮೇಟಿ ಮತ್ತು ದಾವಣಗೆರೆ ದಕ್ಷಿಣ ಕ್ಷೇತ್ರದ ಶಾಸಕರಾಗಿದ್ದ ಶಾಮನೂರು ಶಿವಶಂಕರಪ್ಪನವರ ನಿಧನದಿಂದ ಈ ಎರಡು ಕ್ಷೇತ್ರಗಳಿಗೆ ಉಪಚುನಾವಣೆ ನಡೆಯಬೇಕಿದೆ.


ಈ ಕ್ಷೇತ್ರಗಳಿಗೂ ಚುನಾವಣಾ ಆಯೋಗ ವೇಳಾಪಟ್ಟಿಯನ್ನು ಪ್ರಕಟಿಸಲಿದೆ ಎಂದು ಹೇಳಲಾಗಿದೆ.