
ಔರಾದ್ : ಮಾ.10:ತಾಲೂಕಿನ ಮುಸ್ತಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನು ಅರ್ಥಪೂರ್ಣ ಹಾಗೂ ವಿನೂತನ ವಗಿ ಜರುಗಿತು.
ಸಮಾಜದಲ್ಲಿ ಮಹತ್ವದ ಸಾಧನೆ ಮಾಡಿದ ಹಾಗೂ ಇತಿಹಾಸದಲ್ಲಿ ತಮ್ಮದೇ ಆದ ಗುರುತು ಮೂಡಿಸಿದ ಮಹಾನ್ ಮಹಿಳೆಯರ ವೇಷಧಾರಿಗಳಾಗಿ ವಿದ್ಯಾರ್ಥಿನಿಯರು ಮಿಂಚಿ ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದರು. ವಿದ್ಯಾರ್ಥಿನಿಯರು ಧರಿಸಿದ ವೇಷಭೂಷಣ ಮತ್ತು ಅವರಿಂದ ನೀಡಲಾದ ಪರಿಚಯ ಕಾರ್ಯಕ್ರಮದ ಪ್ರಮುಖ ಆಕರ್ಷಣೆಯಾಗಿ ಎಲ್ಲರ ಗಮನ ಸೆಳೆಯಿತು.
ಕಾರ್ಯಕ್ರಮದ ಅಂಗವಾಗಿ ಶಾಲೆಯ 11 ವಿದ್ಯಾರ್ಥಿನಿಯರು ವಿವಿಧ ಮಹಾನ ಮಹಿಳೆಯರ ವೇಷಧಾರಿಗಳಾಗಿ ಅವರ ಜೀವನ ಸಾಧನೆಗಳ ಕುರಿತು ಸಂಕ್ಷಿಪ್ತವಾಗಿ ಪರಿಚಯ ನೀಡಿದರು.
ಅಕ್ಕಮಹಾದೇವಿ ವೇಷದಲ್ಲಿ ಕಿರಣ, ಹೇಮರೆಡ್ಡಿ ಮಲ್ಲಮ್ಮ ವೇಷದಲ್ಲಿ ವೈಷ್ಣವಿ, ಕಿತ್ತೂರು ರಾಣಿ ಚೆನ್ನಮ್ಮ ವೇಷದಲ್ಲಿ ಅಮೂಲ್ಯ, ಸಾವಿತ್ರಿಬಾಯಿ ಫುಲೆ ವೇಷದಲ್ಲಿ ಶಿವಾನಿ, ಝಾನ್ಸಿ ರಾಣಿ ಲಕ್ಷ್ಮೀಬಾಯಿ ವೇಷದಲ್ಲಿ ಅಮೂಲ್ಯ ಆರ್., ಇಂದಿರಾ ಗಾಂಧಿ ವೇಷದಲ್ಲಿ ಆರುತಿ, ಒನಕೆ ಓಬವ್ವ ವೇಷದಲ್ಲಿ ದಿವ್ಯ, ಮದರ್ ತೆರೆಸಾ ವೇಷದಲ್ಲಿ ರಾಧಿಕಾ, ರಾಣಿ ಅಬ್ಬಕ್ಕ ವೇಷದಲ್ಲಿ ರಾಣಿ, ರಜಿಯಾ ಸುಲ್ತಾನ್ ವೇಷದಲ್ಲಿ ಪ್ರೀತಿ ಹಾಗೂ ಉಳ್ಳಾಲದ ರಾಣಿ ಅಬ್ಬಕ್ಕ ವೇಷದಲ್ಲಿ ವರ್ಷಾ ಅವರು ತಮ್ಮ ಪಾತ್ರಗಳನ್ನು ಮನಮೋಹಕವಾಗಿ ಪ್ರದರ್ಶಿಸಿದರು. ಪ್ರತಿಯೊಬ್ಬ ವಿದ್ಯಾರ್ಥಿನಿಯೂ ತಾವು ಧರಿಸಿದ ವೇಷಕ್ಕೆ ತಕ್ಕಂತೆ ಆ ಮಹಾನ ಮಹಿಳೆಯರ ಸಾಧನೆ, ತ್ಯಾಗ ಮತ್ತು ಸಮಾಜ ಸೇವೆಯ ಕುರಿತು ಮಾತನಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ವಿದ್ಯಾರ್ಥಿನಿಯರ ಈ ವೇಷಧಾರಿಗಳ ಪ್ರದರ್ಶನವು ಕಾರ್ಯಕ್ರಮಕ್ಕೆ ಹೊಸ ಉತ್ಸಾಹ ತುಂಬಿದ್ದು, ಶಾಲೆಗೆ ಆಗಮಿಸಿದ್ದ ಪಾಲಕರು ಹಾಗೂ ಗ್ರಾಮಸ್ಥರು ಮಕ್ಕಳ ಪ್ರತಿಭೆಯನ್ನು ಮೆಚ್ಚಿಕೊಂಡರು. ವಿದ್ಯಾರ್ಥಿನಿಯರು ಆತ್ಮವಿಶ್ವಾಸದಿಂದ ವೇದಿಕೆಯ ಮೇಲೆ ನಿಂತು ತಮ್ಮ ಪಾತ್ರಗಳನ್ನು ನಿರ್ವಹಿಸಿದ ರೀತಿ ಎಲ್ಲರ ಗಮನ ಸೆಳೆಯಿತು.
ಈ ವೇಳೆ ಮಾತನಾಡಿದ ಶಿಕ್ಷಕಿ ನಂದಿನಿ ಮೊಕ್ತೆದಾರ್ ಅವರು, ತಾಳ್ಮೆ ಮತ್ತು ಸಹನೆಗೆ ಮತ್ತೊಂದು ಹೆಸರೇ ಹೆಣ್ಣು. ತ್ಯಾಗ, ಪ್ರೀತಿ ಮತ್ತು ಸಹನಶೀಲತೆಯ ಮೂಲಕ ಮಹಿಳೆ ಸಮಾಜದಲ್ಲಿ ಅಪಾರ ಗೌರವವನ್ನು ಗಳಿಸಿದ್ದಾಳೆ. ಭೂಮಿ ತಾಯಿಯಂತೆ ವಿಶಾಲ ಮನಸ್ಸು ಹೊಂದಿರುವ ಮಹಿಳೆ ಕುಟುಂಬದ ಏಳುಬೀಳುಗಳಲ್ಲಿ ಹೆಗಲಾಗಿ ನಿಂತು, ಮಮತೆಯ ತಾಯಿಯಾಗಿ, ಅಕ್ಕರೆಯ ಅಕ್ಕ-ತಂಗಿಯಾಗಿ ಜೀವನದ ಪ್ರತಿಯೊಂದು ಹಂತದಲ್ಲೂ ಶಕ್ತಿ ಮತ್ತು ಆದರ್ಶದ ಸಂಕೇತವಾಗಿರುತ್ತಾಳೆ. ಮಹಿಳೆಯ ಸಹನೆ ಮತ್ತು ಶಕ್ತಿ ಸಮಾಜದ ಪ್ರಗತಿಗೆ ಮೂಲವಾಗಿದೆ ಎಂದು ಹೇಳಿದರು.
ವಿದ್ಯಾರ್ಥಿಗಳಿಗೆ ಮಹಾನ್ ಮಹಿಳೆಯರ ಜೀವನವನ್ನು ಪರಿಚಯಿಸುವುದರ ಜೊತೆಗೆ, ಅವರ ಆದರ್ಶಗಳನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಪ್ರೇರಣೆಯಾಗಿ ಪರಿಣಮಿಸಿತು. ಮಹಿಳೆಯರ ಸಾಧನೆ ಮತ್ತು ಅವರ ಕೊಡುಗೆಗಳನ್ನು ಸ್ಮರಿಸುವ ಉದ್ದೇಶದಿಂದ ಆಯೋಜಿಸಿದ ಈ ಕಾರ್ಯಕ್ರಮವು ಅರ್ಥಪೂರ್ಣವಾಗಿ ನಡೆಯಿತು.
ಶಾಲೆಯ ಮುಖ್ಯಗುರು ಕಿರಣಕುಮಾರ, ಶಿಕ್ಷಕಿ ಸುನಿತಾ ಬಿರಾದಾರ್, ಅಡುಗೆ ಸಿಬ್ಬಂದಿಗಳಾದ ಸುನಿತಾ ಹಾಗೂ ಮೀನಾಕ್ಷಿ, ಪಾಲಕರ ಪ್ರತಿನಿಧಿಗಳಾದ ಉಮಾಕಾಂತ, ಮಲ್ಲಿಕಾರ್ಜುನ, ಸುನಿತಾ ಸೇರಿದಂತೆ ಅನೇಕರು ಉಪಸ್ಥಿತರಿದ್ದರು. ಶಿಕ್ಷಕ ಕಲ್ಲಪ್ಪ ಬೋರಾಳೆ ನಿರೂಪಿಸಿ ವಂದಿಸಿದರು.


























