Home ಜಿಲ್ಲೆ ಇದು ನಮ್ಮ “ಸುನ್ನಿ ಮುಸ್ಲಿಂ ಸ್ಮಶಾನ”

ಇದು ನಮ್ಮ “ಸುನ್ನಿ ಮುಸ್ಲಿಂ ಸ್ಮಶಾನ”

(ಸಂಜೆವಾಣಿ ಪ್ರತಿನಿಧಿಯಿಂದ)

ಬಳ್ಳಾರಿ, ಫೆ.20:  ನಗರದ ಸರ್ವೇ ನಂಬರ್ 564ಎ ಮತ್ತು ಸರ್ವೇ ನಂಬರ್ 564ಬಿ ಈಗಿನ ಟಿ.ಎಸ್.ನಂಬರ್ 650 ರ  11 ಎಕರೆ 94 ಸೆಂಟ್ಸ್ ಜಮೀನು ವಕ್ಫ ಬೋರ್ಡಿಗೆ ಸೇರಿದ್ದು. ಇದನ್ನು ಅಕ್ರಮವಾಗಿ ನಕಲಿ ದಾಖಲೆಗಳ ಮೂಲಕ ಫಾರಂ 2 ಪಡೆಯಲು ಮುಂದಾದ ಎ.ಪ್ರಭಾವತಿ ಮತ್ತಿತರರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕೆಂದು  ವಕ್ಫ ಬೋರ್ಡ್ ನ ಬಳ್ಳಾರಿಯ ಅಧಿಕಾರಿ  ನೂರ್ ಪಾಷ ಅವರು ಕೌಲ್ ಬಜಾರ್ ಠಾಣೆಯಲ್ಲಿ ನಾಲ್ವರ ವಿರುದ್ದ ಪ್ರಕರಣ ದಾಖಲಿಸಿದ್ದಾರೆ.

ಅವರು ನೀಡಿರುವ  ದೂರಿನ ಸಾರಾಂಶ  ಹೀಗಿದೆ ಬಳ್ಳಾರಿ ನಗರದ ಸರ್ವೇ ನಂಬರ್ 564ಎ ಮತ್ತು ಸರ್ವೇ ನಂಬರ್ 564ಬಿ ಈಗಿನ ಟಿ.ಎಸ್.ನಂಬರ್-650 ನೇದ್ದರ 11 ಎಕರೆ 94 ಸೆಂಟ್ಸ್ ಜಮೀನನ್ನು 1941 ರಲ್ಲಿ ಸದರಿ ಜಮೀನಿನ ಮೂಲ ಮಾಲೀಕ ಗುರಪ್ಪ ಅವರು ಅಬ್ದುಲ್ ಖಾನ್ ಸಾಹೇಬ್ ಅವರಿಗೆ ಮಾರಾಟ ಮಾಡಿದ್ದರು.

ಈ ಜಮೀನನ್ನು 1944 ರಲ್ಲಿ ಅಬ್ದುಲ್ ಖಾನ್ ಸಾಹೇಬ್ ಅವರು ಆಗಿನ ಮುಸ್ಲಿಂ ಸಮುದಾಯದ ಮುಖಂಡ ಖಾಜಿಗುಲಾಂಮೊಹಮ್ಮದ್ ಹಾಗೂ ಇತರರ ಹೆಸರಿಗೆ ಮುಸ್ಲಿಂ ಸ್ಮಶಾನದ ಉದ್ದೇಶಕ್ಕಾಗಿ ದಾನಕ್ರಯ ಮಾಡಿದ್ದರು. ಈ ಜಮೀನನ್ನು 1964ರಲ್ಲಿ ರಾಜ್ಯ ಸರ್ಕಾರ ಅಧಿಸೂಚನೆ ಸಂಖ್ಯೆ:19(5) 1964  17/10/1964 ರಂದು  ವಕ್ಸ್ ಆಸ್ತಿ ಎಂದು ಆದೇಶ ಹೊರಡಿಸಿದ್ದರು. ದಾಖಲಾತಿಗಳಲ್ಲಿ “ಸುನ್ನಿ ಮುಸ್ಲಿಂ ಸ್ಮಶಾನ” ಎಂದು ನಮೂದಾಗಿದೆ. ಇದೇ  ಜಮೀನನ್ನು 2022 ರಲ್ಲಿ ಗುರಪ್ಪ ಅವರ ಕುಟುಂಬದ ರಂಗಮ್ಮ ಕಾಂಡ್ರಾ, ಶಕುಂತಲ, ಕೆ.ಪಾರ್ವತಿ ಇವರುಗಳು ಸದರಿ ಜಮೀನಿಗೆ ಸಂಬಂಧಿಸಿದಂತೆ ನಕಲಿ ದಾಖಲೆಗಳನ್ನು ಸೃಷ್ಟಿಸಿ ತಮ್ಮ ಹೆಸರಿಗೆ ನೊಂದಣಿ ಮಾಡಿಸಿಕೊಂಡು.  ನಂತರ ರಂಗಮ್ಮ ಮತ್ತು ಶಕುಂತಲ ಅವರು ಹದಿನೈದು ಲಕ್ಷ ರೂಪಾಯಿಗಳಿಗೆ ತಮ್ಮ ಭಾಗದ ಆಸ್ತಿ ಪಾರ್ವತಿ ಅವರಿಗೆ ಮಾರಾಟ ಮಾಡಿರುತ್ತಾರೆ. ಆ ಬಳಿಕ ಪಾರ್ವತಿ ಅವರು ತಮ್ಮ ಮಗಳು ಎ.ಪ್ರಭಾವತಿ ಅವರಿಗೆ 28/11/2022 ರಲ್ಲಿ ದಾನಕ್ರಯ ಮಾಡಿಸಿ ಕೊಟ್ಟಿದ್ದು ಪ್ರಭಾವತಿ ಅವರು ಈ  ಜಮೀನಿನನ್ನು ಬಳ್ಳಾರಿ ಮಹಾನಗರ ಪಾಲಿಕೆಯಿಂದ ಫಾರಂ ನಂ-2 ನ್ನು ಪಡೆದುಕೊಂಡಿರುವುದಾಗಿ ತಿಳಿದು ಬಂದಿದೆ.

ಬಳ್ಳಾರಿ ನಗರದ ಸರ್ವೇ ನಂಬರ್ 564ಎ ಮತ್ತು ಸರ್ವೇ ನಂಬರ್ 564ಬಿ ಈಗಿನ ಟಿ.ಎಸ್. ನಂಬರ್-650 ನೇದ್ದರ 11 ಎಕರೆ 94 ಸೆಂಟ್ಸ್ ಜಮೀನು ”ಮುಸ್ಲಿಂ ಸಮುದಾಯದ ಸ್ಮಶಾನದ ಉದ್ದೇಶಕ್ಕಾಗಿ” ಇರುವುದನ್ನು  ನಾಲ್ಕು ಜನರು ನಕಲಿ ದಾಖಲೆಗಳನ್ನು ಸೃಷ್ಟಿಸಿ, ವಂಚನೆ ಮಾಡಿ ನೊಂದಾಯಿಸಿಕೊಂಡಿರುವುದರಿಂದ ಇವರ ವಿರುದ್ದ ಕಾನೂನು ಕ್ರಮ ಜರುಗಿಸ ಬೇಕೆಂದು ಕೌಕ್ ಬಜಾರ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.