
ಶಿಕ್ಷಕರ ಭರ್ತಿ ಜೊತೆಗೆ ಗುಣಮಟ್ಟದ ಶಿಕ್ಷಣಕ್ಕೆ ಹೆಚ್ಚಿನ ಒತ್ತು; ಎಸ್.ಮಧು ಬಂಗಾರಪ್ಪ
ಕಲಬುರಗಿ,ಜ.7: ಹಳ್ಳಿ ಮಕ್ಕಳಿಗೆ ಖಾಸಗಿ ಕಾನ್ವೆಂಟ್ ಶಾಲೆ ಮೀರಿಸುವ ಗುಣಮಟ್ಟದ ಶಿಕ್ಷಣ ಒದಗಿಸಲು ಸರ್ಕಾರ ಬದ್ದವಾಗಿದ್ದು, ಆಯವ್ಯಯದಲ್ಲಿ ಘೋಷಿಸಿದಂತೆ ಮುಂದಿನ ದಿನದಲ್ಲಿ ರಾಜ್ಯದಾದ್ಯಂತ 900 ಹೊಸ ಕರ್ನಾಟಕ ಪಬ್ಲಿಕ್ ಶಾಲೆ ನಿರ್ಮಿಸಲಾಗುತ್ತದೆ ಎಂದು ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಸಚಿವ ಎಸ್.ಮಧು ಬಂಗಾರಪ್ಪ ಹೇಳಿದರು.
ಬುಧವಾರ ಇಲ್ಲಿನ ಜಿಲ್ಲಾ ಪಂಚಾಯತ್ ಕಚೇರಿ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಶಾಲಾ ಶಿಕ್ಷಣ ಇಲಾಖೆಯಿಂದ 600, ಹಿಂದುಳಿದ, ಅಲ್ಪಸಂಖಾತ ಕಲ್ಯಾಣ ಇಲಾಖೆ ಹಾಗೂ ಸಿ.ಎಸ್.ಆರ್. ನಿಧಿಯಡಿ ತಲಾ 100 ಸೇರಿ 900 ಶಾಲೆ ನಿರ್ಮಿಸಲಾಗುತ್ತದೆ. ಇದರಲ್ಲಿ ಕಲ್ಯಾಣ ಕರ್ನಾಟಕ ಭಾಗದಲ್ಲಿ ಇಲಾಖೆಯಿಂದ 100 ಸಂಖ್ಯೆ ಜೊತೆಗೆ ಕೆ.ಕೆ.ಆರ್.ಡಿ.ಬಿ. ಮಂಡಳಿಯಿಂದ ಹೆಚ್ಚುವರಿಯಾಗಿ 200 ಶಾಲೆ ಅಸ್ತಿತ್ವಕ್ಕೆ ಬರಲಿವೆ ಎಂದರು.
ಹೊಸದಾಗಿ 900 ಕೆ.ಪಿ.ಎಸ್. ಶಾಲೆ ಜೊತೆಗೆ ಪ್ರಸ್ತುತ ಅಸ್ತಿತ್ವದಲ್ಲಿರುವ 309 ಮಾದರಿ ಶಾಲೆಗೆ ಹೆಚ್ಚಿನ ಅನುದಾನ ನೀಡಿ ಮೂಲಸೌಕರ್ಯ ಬಲವರ್ಧನೆ ಮಾಡಲಾಗುವುದು. ಕೆ.ಪಿ.ಎಸ್. ಶಾಲೆಯಲ್ಲಿನ ಶಿಕ್ಷಕರಿಗೆ ಅಗತ್ಯಕ್ಕನುಗುಣವಾಗಿ ತರಬೇತಿ ಸಹ ನೀಡುವ ಕಾರ್ಯ ನಡೆದಿದೆ ಎಂದರು.
ಎಲ್.ಕೆ.ಜಿ ಯಿಂದ ದ್ವಿತೀಯ ಪಿ.ಯು.ಸಿ. ವರೆಗೆ ಒಂದೆ ಕಡೆ ಶಿಕ್ಷಣ ಈ ಶಾಲೆಗಳಲ್ಲಿ ಸಿಗಲಿದೆ. ಆಯಾ ತರಗತಿಗೆ ಅನುಗುಣವಾಗಿ ಕಂಪ್ಯೂಟರ್, ಸಂಗೀತ, ಧ್ವಿಭಾಷಾ ಕಲಿಕೆ, ಕೌಶಲ್ಯ ತರಬೇತಿ ಇಲ್ಲಿ ನೀಡಲಾಗುತ್ತದೆ. ಮುಂದಿನ 3-4 ವರ್ಷದಲ್ಲಿ ಗುಣಾತ್ಮಕ ಬದಲಡವಣೆ ಆಶಾಭಾವನೆ ಹೊಂದಲಾಗಿದೆ ಎಂದ ಅವರು, ಎಸ್.ಎಸ್.ಎಲ್.ಸಿ, ದ್ವಿತೀಯ ಪಿ.ಯು.ಸಿ ಪರೀಕ್ಷೆಯನ್ನು ವರ್ಷದಲ್ಲಿ ಮೂರು ಬಾರಿ ಬರೆಯಲು ಅವಕಾಶ ಕಲ್ಪಿಸಿದ ಕಾರಣ ಕಳೆದ 2025 ವರ್ಷದಲ್ಲಿ 1.16 ಲಕ್ಷ ಎಸ್.ಎಸ್.ಎಲ್.ಸಿ., 56 ಸಾವಿರ ದ್ವಿತೀಯ ಪಿ.ಯು.ಸಿ ಮಕ್ಕಳು ತೇರ್ಗಡೆಯಾಗಿದ್ದಾರೆ ಎಂದರು.
ಕಳೆದ ಎರಡ್ಮೂರು ವರ್ಷದಲ್ಲಿ ಇಲಾಖೆಯಲ್ಲಿ ಹಲವಾರು ಬದಲಾವಣೆಗಳನ್ನು ತರಲಾಗಿದೆ. ಮುಂದಿನ 2026-27 ಶೈಕ್ಷಣಿಕ ಸಾಲಿನಿಂದ ಶಿಕ್ಷಕರು-ಮಕ್ಕಳಿಗೆ ಮುಖ ಹಾಜರಾತಿ ವ್ಯವಸ್ಥೆ ಮತ್ತು ದ್ವಿತೀಯ ಪಿ.ಯು.ಸಿ. ಮಕ್ಕಳಿಗೆ ಉಚಿತ ನೋಟ್ ಬುಕ್ ನೀಡುವ ವ್ಯವಸ್ಥೆ ಜಾರಿಗೆ ತರಲಾಗುತ್ತಿದೆ. ಇದಲ್ಲದೆ ಶಿಕ್ಷಕರ ಮೇಲೆ ಕೆಲಸದ ಹೊರೆ ತಗ್ಗಿಸಲು ಈಗಾಗಲೆ ಮುಖ್ಯ ಕಾರ್ಯದರ್ಶಿ ಜೊತೆಗೆ ಚರ್ಚಿಸಲಾಗಿದೆ. ಎಂದರು.
11 ಸಾವಿರ ಶಿಕ್ಷಕರ ಭರ್ತಿ:
ಕಲ್ಯಾಣ ಕರ್ನಾಟಕ ಭಾಗದಲ್ಲಿ 5,800 ಸೇರಿ ರಾಜ್ಯದಾದ್ಯಂತ 11 ಸಾವಿರ ಶಿಕ್ಷಕರ ಭರ್ತಿ ಕಾರ್ಯ ಪ್ರಗತಿಯಲ್ಲಿದ್ದು, ಬರುವ ಮೇ-ಜೂನ್ ನಲ್ಲಿ ನೂತನ ಶಿಕ್ಷಕರ ನೇಮಕಾತಿಯಾಗಿ ಪಾಠ ಮಾಡಲು ಹಾಜರಾಗಲಿದ್ದಾರೆ. ರಾಜ್ಯದಲ್ಲಿ 51 ಸಾವಿರ ಶಿಕ್ಷಕರ ಕೊರತೆ ನಡುವೆಯೂ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗದಂತೆ ಕಳೆದ ಶೈಕ್ಷಣಿಕ ವರ್ಷದ ಆರಂಭದಲ್ಲಿಯೇ ಅತಿಥಿ ಶಿಕ್ಷಕರ ನೇಮಕಗೊಳಿಸಲಾಗಿದೆ. ಶಿಕ್ಷಕರ ಭರ್ತಿ ಜೊತೆಗೆ ಗುಣಮಟ್ಟದ ಶಿಕ್ಷಣ ನಮ್ಮ ಮೊದಲ ಆದ್ಯತೆಯಾಗಿರಲಿದೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ವಿಧಾನ ಪರಿಷತ್ ಶಾಸಕ ಜಗದೇವ ಗುತ್ತೇದಾರ, ಶಾಲಾ ಶಿಕ್ಷಣ ಇಲಾಖೆಯ ಅಪರ ಆಯುಕ್ತ ರಾಹುಲ ಪಾಂಡ್ವೆ, ಜಿಲ್ಲಾ ಪಂಚಾಯತ್ ಸಿ.ಇ.ಓ ಭಂವರ್ ಸಿಂಗ್ ಮೀನಾ ಇದ್ದರು.

























