3 ವರ್ಷಗಳಲ್ಲಿ 5 ಟ್ರಿಲಿಯನ್ ಆರ್ಥಿಕ ಗುರಿ ನಿರೀಕ್ಷೆ

ನವದೆಹಲಿ,ಜೂ.25- ಮುಂದಿನ ಎರಡು ವರ್ಷಗಳಲ್ಲಿ ಭಾರತ, ಜಗತ್ತಿನ ಮೂರನೇ ಅತಿದೊಡ್ಡ ಆರ್ಥಿಕ ದೇಶವಾಗುವ ಜೊತೆಗೆ ಮುಂದಿನ ಮೂರು ವರ್ಷಗಳಲ್ಲಿ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಗುರಿ ಸಾಧಿಸುವ ನಿರೀಕ್ಷೆ ಇದೆ ಎಂದು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ ಸಚಿವ ಪಿಯೂಷ್ ಗೋಯಲ್ ಹೇಳಿದ್ದಾರೆ.
“2027 ರ ಹೊತ್ತಿಗೆ, ವಿಶ್ವದ ಮೂರನೇ ಅತಿದೊಡ್ಡ ಆರ್ಥಿಕತೆಯ ದೇಶವಾಗುವತ್ತ ಭಾರತ ಹೆಜ್ಜೆ ಇಟ್ಟಿದೆ. ಜೊತೆಗೆ 2028ರ ವೇಳೆಗೆ 5 ಟ್ರಿಲಿಯನ್ ಡಾಲರ್ ಆರ್ಥಿಕತೆ ಸಾಧನೆ ನಮ್ಮ ಉದ್ದೇಶ” ಎಂದು ಮಾಹಿತಿ ನೀಡಿದ್ದಾರೆ.

ವಾಣಿಜ್ಯ ಮತ್ತು ಕೈಗಾರಿಕಾ ಮಂಡಳಿ ವೆಬಿನಾರ್ನಲ್ಲಿ ಪಾಲ್ಗೊಂಡು ಮಾತನಾಡಿದ ಅವರು 2047ರ ವೇಳೆಗೆ ವಿಕಸಿತ ಗುರಿ ಸಾಧನೆ ಉದ್ದೇಶ ನಮ್ಮದು ಈ ನಿಟ್ಟಿನಲ್ಲಿ ಪ್ರಯತ್ನ ಸಾಗಿದೆ ಎಂದು ಹೇಳಿದ್ದಾರೆ.
ಅಂತಾರಾಷ್ಟ್ರೀಯ ಮಟ್ಟದಲ್ಲಿ ಭಾರತದ ಸ್ಥಾನಮಾನ ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಭಾರತೀಯ ಪಾಸ್‍ಪೋರ್ಟ್ ಸುರಕ್ಷತೆ ಮತ್ತು ಭದ್ರತೆ ಖಾತರಿ ಪಡಿಸಲಾಗಿದೆ. ವಿದೇಶದಲ್ಲಿರುವ ಭಾರತೀಯ ನಾಗರಿಕರ ಸುರಕ್ಷತೆಗೆ ಕೇಂದ್ರ ಸರ್ಕಾರದ ಬದ್ಧತೆಯಾಗಿದ್ದು ಅದರ ಪರಿಣಾಮವಾಗಿ ಆಪರೇಷನ್ ಸಿಂಧು ಮೂಲಕ ಸುರಕ್ಷಿತವಾಗಿ ಭಾರತಿಯರನ್ನು ತಾಯ್ನಾಡಿಗೆ ಕರೆತರುವ ಕೆಲಸ ಮಾಡಲಾಗುತ್ತಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಪ್ರಗತಿಯ ಕಡೆಗೆ ಹೆಚ್ಚು ಆದ್ಯತೆ ನೀಡಿದೆ. ಜೊತೆಗೆ ಅಭಿವೃದ್ಧಿಯ ಜೊತೆ ಜೊತೆಗೆ ಸಮಗ್ರ, ಸುಸ್ಥಿರ, ಪ್ರಾಮಾಣಿಕ ಬೆಳವಣಿಗೆಯ ಮೇಲೆಯೂ ಗಮನಹರಿಸಿದೆ ಎಂದು ತಿಳಿಸಿದ್ದಾರೆ.

ಕಳೆದ ದಶಕದಲ್ಲಿ ಭಾರತ ದುರ್ಬಲವಾದ ಐದು ಆರ್ಥಿಕತೆ ದೇಶದಿಂದ ವಿಶ್ವದ ಅಗ್ರ ಐದು ಆರ್ಥಿಕತೆಗಳಲ್ಲಿ ಒಂದಾಗುವತ್ತ ಸಾಗಿದೆ, ಶೀಘ್ರದಲ್ಲಿಯೇ ಮೂರನೇ ಅತಿದೊಡ್ಡ ಆರ್ಥಿಕ ದೇಶವಾಗಲಿದೆ. ಈ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಎಲ್ಲಾ ಪ್ರಯತ್ನ ಸಾಗಿದೆ ಎಂದಿದ್ದಾರೆ

ಬ್ಯಾಂಕಿಂಗ್ ವ್ಯವಸ್ಥೆ ಬಲಿಷ್ಠವಾಗಿದೆ. ಸಾಲ ನೀಡುವ ಸಾಮಥ್ರ್ಯ ಹೆಚ್ಚಾಗಿದೆ. ಹಣದುಬ್ಬರ ಭಾರತ ಇದುವರೆಗೆ ಕಂಡ ಅತ್ಯಂತ ಕಡಿಮೆ ಮಟ್ಟಗಳಲ್ಲಿ ಒಂದಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರು ಸಮರ್ಥ ನಾಯಕತ್ವದಲ್ಲಿ ಭಾರತ ಅಭಿವೃದ್ಧಿಯತ್ತ ಮುನ್ನೆಡೆಯುತ್ತಿದೆ ಎಂದು ತಿಳಿಸಿದ್ದಾರೆ

ಕೇಂದ್ರ ಸರ್ಕಾರ ಉತ್ತಮ ಸೇವೆ, ಸುಶಾಸನ ಮತ್ತು ಉತ್ತಮ ಆಡಳಿತ ಮತ್ತು ನಾವೀನ್ಯತೆಯಲ್ಲಿ ನಂಬಿಕೆ ಇಟ್ಟಿದೆ. ಅಮೃತ ಕಾಲದಲ್ಲಿ ನವ ಭಾರತ ನಿರ್ಮಾಣ ಮಾಡುವ ದೊಡ್ಡ ಗುರಿ ಹೊಂದಿದೆ ಎಂದು ಹೇಳಿದ್ದಾರೆ.