(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ, ಮೇ.26: ರಸ್ತೆಗಳಲ್ಲಿನ ಕುಣಿಗಳು, ತೆರೆದ ಒಳ ಚರಂಡಿ ಚೇಂಬರ್ ಗಳು, ಎಲ್ಲಂದರಲ್ಲಿ ಓಡಾಡುವ ಬಿಡಾಡಿ ದನಗಳು, ಹೆಚ್ಚಿರುವ ಬೀದಿ ನಾಯಿಗಳ ಹಾವಳಿ, ಕಲುಷಿತ ನೀರಿನ ಸರಬರಾಜು ಹೀಗೆ ಹಲವು ಮೂಲಭೂತ ಸಮಸ್ಯೆಗಳಿಂದ ಹದಗೆಟ್ಟಿರುವ ನಗರವನ್ನು ಸರಿಪಡಿಸಲು ಮುಂದಾಗಬೇಕೆಂದು ಆಗ್ರಹಿಸಿ ನಗರ ಪಾಲಿಕೆ ಮುಂದೆ ಇಂದು ಬಳ್ಳಾರಿ ನಾಗರೀಕ ಹೋರಾಟ ಸಮಿತಿ ನೇತೃತ್ವದಲ್ಲಿ ಜನತೆ ಪ್ರತಿಭಟನೆ ನಡೆಸಿದರು.
ನಗರದ ಹಲವಡೆ ನಡೆಯುತ್ತಿರುವ ಕಾಮಗಾರಿಗಳು ಮಂದಗತಿಯಲ್ಲಿ ನಡೆಯುತ್ತಿವೆ, ಅವುಗಳಿಗೆ ನಿಗಧಿತ ಸಮಯ ಇಲ್ಲದಂತಾಗಿದೆ. ಮಾಡಿದ ಕಾಮಗಾರಿಗಳ ನಿರ್ವಹಣೆ ಇಲ್ಲದಾಗಿದೆ. ಇವುಗಳಿಗಾಗಿ ವೆಚ್ಚ ಮಾಡಿದ ಕೋಟ್ಯಾಂತರ ರೂ ಹಣ ಅಪವ್ಯಯವಾದಂತಾಗುತ್ತಿದೆ ಎಂದು ಪಾಲಿಕೆಯ ವಿರುದ್ದ ಘೋಷಣೆ ಕೂಗಲಾಯ್ತು.
ಅಪಘಾತಕ್ಕೆ ಕಾರಣವಾಗುತ್ತಿರುವ ಬೀದಿ ನಾಯಿ, ಬೀಡಾಡಿ ದನಗಳನ್ನು ನಿಯಂತ್ರಿಸಬೇಕು ರಿಂಗ್ ರೋಡನ್ನು ತುರ್ತಾಗಿ ಪೂರ್ಣಗೊಳಿಸಬೇಕು. ಮಳೆ ಬಂದರೆ ಚರಂಡಿ ವ್ಯವಸ್ಥೆ ಹಾಳಾಗಿರುವುದರ ದರ್ಶನ ಆಗುತ್ತಿದೆ. ಜೊತೆಗೆ ಕುಡಿಯುವ ನೀರಲ್ಲಿ ಮಿಶ್ರವಾಗಿ ಅಶುದ್ದ ನೀರು ಸರಬರಾಜಾಗುತ್ತಿದೆ. ಇನ್ನು ರಸ್ತೆಗಳಲ್ಲಿನ ಕುಣಿಗಳನ್ನು ಮುಚ್ಚುವುದೇ ಇಲ್ಲ. 50 ಲಕ್ಷ ರೂ ವೆಚ್ಚದಲ್ಲಿ ಮುಚ್ಚಲು ಯೋಜನೆ ರೂಪಿಸಿದ್ದರೂ ಜಾರಿಯಾಗಿಲ್ಲ.
ನಗರದಲ್ಲಿ ಕುಡಿಯುವ ನೀರಿನಲ್ಲಿ ಚರಂಡಿ ನೀರು ಬೆರೆಯದಂತೆ ಮಾಡಬೇಕು. ಹೊರ ಚರಂಡಿಗಳಲ್ಲಿ ತುಂಬಿದ ಹೂಳನ್ನು ತೆಗೆಯಬೇಕು
ನಗರದಲ್ಲಿ ಅನಾವಶ್ಯಕ ಯಾರೂ ಬೇಡದ, ದುಂದು ವೆಚ್ಚ ಮಾಡಿ ಅವೈಜ್ಞಾನಿಕ ಸರ್ಕಲ್ಗಳ ನಿರ್ಮಾಣ ಬೇಡ, ಬದಲಾಗಿ ಆದ್ಯತೆ ಮೇರೆಗೆ ಅವಶ್ಯಕವಾದ ಮೋತಿ ಬ್ರಿಡ್ಜ್ ಅಗಲೀಕರಣ, ಕೆಟ್ಟು ಹಾಳಾಗಿರುವ ಒಳ ರಸ್ತೆಗಳ ನಿರ್ಮಾಣ, ರಸ್ತೆ ಬದಿಗಳಲ್ಲಿ ಮಳೆ ನೀರು ಸುಗಮವಾಗಿ ಹರಿಯಲು ಹೊರ ಚರಂಡಿ ನಿರ್ಮಾಣ ಸೇರಿದಂತೆ ಜನ ಬಯಸುವ ಕೆಲಸಗಳನ್ನು ಕೈಗೊಳ್ಳಬೇಕು.
ನಗರಾದ್ಯಂತ ಸ್ವಚ್ಛತೆ ಕಾಪಾಡಲು, ದೂಳಿನ ಪ್ರಮಾಣ ತಡೆಯಬೇಕು. ಈಗಾಗಲೇ ಕೈಗೊಂಡಿರುವ ಕಾಮಗಾರಿಗಳ ಸ್ಥಳದಲ್ಲಿ ಕಾಮಗಾರಿ ಬಗ್ಗೆ ಎಲ್ಲಾ ವಿವರಗಳನ್ನು ನೀಡುವ ಫಲಕಗಳನ್ನು ಸಾರ್ವಜನಿಕರಿಗೆ ಸುಲಭವಾಗಿ ಗೋಚರಿಸುವ ಸ್ಥಳಗಳಲ್ಲಿ ಪ್ರದರ್ಶಿಸಬೇಕು. ನಿಗಧಿತ ಅವಧಿಯಲ್ಲಿ ಪೂರ್ಣಗೊಳಿಸಬೇಕು ಎಂಬ ಬೇಡಿಕೆಯ ಮನವಿ ಪತ್ರವನ್ನು ಸಲ್ಲಿಸಲಾಯ್ತು.
ಪ್ರತಿಭಟನೆಯಲ್ಲಿ ಆರ್. ಸೋಮಶೇಖರ್ ಗೌಡ. ಶಾಂತ, ಗೋವಿಂದ, ವಿದ್ಯಾ, ಸುರೇಶ್, ಪ್ರಮೋದ್, ನಾಗರತ್ನ ಮೊದಲಾದವರು ಇದ್ದರು.
