
‘ಆಕ್ಷನ್ ಕಿಂಗ್’ ಅರ್ಜುನ್ ಸರ್ಜಾ ನಿರ್ದೇಶನದ ಬಹುನಿರೀಕ್ಷಿತ ಚಿತ್ರ ‘ಸೀತಾ ಪಯಣ’ ಚಿತ್ರದ ‘ಅಸಲಿ ಸಿನಿಮಾ’ ಗೀತೆ ಇತ್ತೀಚೆಗೆ ಬಿಡುಗಡೆಯಾಗಿದೆ. ಶ್ರೀ ರಾಮ್ ಫಿಲ್ಮ್ಸ್ ಇಂಟರ್ನ್ಯಾಷನಲ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವು ಫೆಬ್ರವರಿ 14ರಂದು ವಿಶ್ವದಾದ್ಯಂತ ತೆರೆಕಾಣಲಿದೆ.
“ಆಹಾ ಓಹೋ ಅಂತಾರೋ… ಚೆಲುವಿ ನೀನೇ ಅಂತಾರೋ…” ಎಂಬ ಮನಮೋಹಕ ಸಾಲುಗಳೊಂದಿಗೆ ಆರಂಭವಾಗುವ ಈ ಗೀತೆ ಸಾಮಾಜಿಕ ಜಾಲತಾಣಗಳಲ್ಲಿ ಉತ್ತಮ ಸ್ಪಂದನೆ ಪಡೆದುಕೊಳ್ಳುತ್ತಿದೆ. ಖ್ಯಾತ ಸಾಹಿತಿ ಭರತ್ ಜನನಿ ಸಾಹಿತ್ಯ ರಚಿಸಿದ್ದು, ಗಾಯಕಿ ಅನುರಾಧಾ ಭಟ್ ಅವರ ಮಧುರ ಧ್ವನಿಯಲ್ಲಿ ಹಾಡು ಮೂಡಿಬಂದಿದೆ. ಸಂಗೀತ ನಿರ್ದೇಶಕ ಅನೂಪ್ ರೂಬೆನ್ಸ್ ಅವರ ಚುರುಕು ತಾಳಮೇಳಗಳು ಗೀತೆಗೆ ವಿಶೇಷ ಮೆರುಗು ನೀಡಿವೆ.
ಚಿತ್ರದಲ್ಲಿ ಅರ್ಜುನ್ ಸರ್ಜಾ ಪುತ್ರಿ ಐಶ್ವರ್ಯ ಅರ್ಜುನ್ ನಾಯಕಿಯಾಗಿ ಅಭಿನಯಿಸಿದ್ದು, ನಾಯಕನಾಗಿ ನಿರಂಜನ್ ನಟಿಸಿದ್ದಾರೆ. ಪೋಷಕ ಪಾತ್ರಗಳಲ್ಲಿ ಸತ್ಯರಾಜ್, ಪ್ರಕಾಶ್ ರೈ ಹಾಗೂ ಕೋವೈ ಸರಳಾ ಕಾಣಿಸಿಕೊಂಡಿದ್ದಾರೆ. ಅರ್ಜುನ್ ಸರ್ಜಾ ಅವರು ವಿಭಿನ್ನ ಪಾತ್ರದಲ್ಲಿ ನಟಿಸಿರುವುದರ ಜೊತೆಗೆ, ಅವರ ಸೋದರಳಿಯ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಕೂಡ ಪ್ರಮುಖ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಾರೆ.
ಕಥೆ, ಚಿತ್ರಕಥೆ, ನಿರ್ದೇಶನ ಹಾಗೂ ನಿರ್ಮಾಣವನ್ನು ಅರ್ಜುನ್ ಸರ್ಜಾ ಅವರೇ ವಹಿಸಿಕೊಂಡಿರುವ ಈ ಚಿತ್ರಕ್ಕೆ ಸಂಗೀತ – ಅನೂಪ್ ರೂಬೆನ್ಸ್, ಛಾಯಾಗ್ರಹಣ – ಜಿ. ಬಾಲಮುರುಗನ್, ಸಂಕಲನ – ಅಯೂಬ್ ಖಾನ್ ಅವರದ್ದಾಗಿದೆ.

























