
ಅಹಮದಾಬಾದ್, ಅ. ೩- ಕನ್ನಡಿಗ ಕೆ.ಎಲ್. ರಾಹುಲ್ ಅವರು ತವರಿನಲ್ಲಿ ಗಳಿಸಿದ ಎರಡನೇ ಹಾಗೂ ಒಟ್ಟಾರೆ ೧೧ನೇ ಶತಕದ ಬಲದಿಂದ ಭಾರತ ತಂಡ ಇಲ್ಲಿ ನಡೆಯುತ್ತಿರುವ ವೆಸ್ಟ್ ಇಂಡೀಸ್ ವಿರುದ್ಧದ ಮೊದಲ ಟೆಸ್ಟ್ ಪಂದ್ಯದಲ್ಲಿ ಇನಿಂಗ್ಸ್ ಮುನ್ನಡೆ ಗಳಿಸಿ, ಬೃಹತ್ ಮೊತ್ತದತ್ತ ದಾಪುಗಾಲಿಟ್ಟಿದೆ.
ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ ನಡೆಯುತ್ತಿರುವ ಐಸಿಸಿ ಟೆಸ್ಟ್ ಚಾಂಪಿಯನ್ ಷಿಪ್ ನ ಭಾಗವಾದ ೨ ಪಂದ್ಯಗಳ ಸರಣಿಯ ಮೊದಲ ಪಂದ್ಯದಲ್ಲಿ ಶುಕ್ರವಾರ ೨ ವಿಕೆಟ್ ೧೨೧ ರನ್ ಗಳಿಂದ ಮೊದಲ ಇನಿಂಗ್ಸ್ ಮುಂದುವರಿಸಿದ ಭಾರತ, ಭೋಜನಾ ವಿರಾಮದ ವೇಳೆಗ ೩ ವಿಕೆಟ್ ನಷ್ಟಕ್ಕೆ ೨೧೮ ರನ್ ಗಳಿಸಿದೆ.
ಮೊದಲ ದಿನದಂತ್ಯದಲ್ಲಿ ೩ನೇ ವಿಕೆಟ್ ಗೆ ಜತೆಯಾದ ರಾಹುಲ್ ಮತ್ತು ನಾಯಕ ಗಿಲ್, ಇಂದು ತಂಡದ ಮೊತ್ತವನ್ನು ೧೮೮ಕ್ಕೆ ವಿಸ್ತರಿಸಿ ಬೇರ್ಪಟ್ಟರು. ೧೦೦ ಎಸೆತಗಳನ್ನುದುರಿಸಿದ ಗಿಲ್, ೫ ಫೋರ್ ಒಳಗೊಂಡ ೫೦ ರನ್ ಗಳಿಸಿ ರಾಸ್ಟನ್ ಚೇಸ್ ಗೆ ವಿಕೆಟ್ ಒಪ್ಪಿಸಿದರು. ನಂತರ ಜತೆಗೂಡಿದ ರಾಹುಲ್ ಮತ್ತು ಧ್ರುವ್ ಜುರೆಲ್ ಜೋಡಿ ಟೀಮ್ ಇಂಡಿಯಾವನ್ನು ಆಧರಿಸಿದೆ.
೩೨೧೧ ದಿನಗಳ ನಂತರ ತಾಯ್ನಾಡಲ್ಲಿ ರಾಹುಲ್ ಶತಕ
ಕೆ.ಎಲ್. ರಾಹುಲ್ ೩೨೧೧ ದಿನಗಳ ನಂತರ ಮನೆಯಂಗಳದಲ್ಲಿ ಮೊದಲ ಹಾಗೂ ಎರಡನೇ ಶತಕ ಗಳಿಸಿದರು. ಒಟ್ಟಾರೆ ಇದು ಅವರ ೧೧ನೇ ಟೆಸ್ಟ್ ಶತಕ ಗಳಿಸಿ ವಿಕೆಟ್ ಒಪ್ಪಿಸಿದರು. ರಾಸ್ಟನ್ ಚೇಸ್ ಎಸೆದ ೬೫ನೇ ಓವರ್ ನ ೫ನೇ ಎಸೆತದಲ್ಲಿ ಒಂಟಿ ರನ್ ಕಲೆಹಾಕುವುದರೊಂದಿಗೆ ಈ ಸಾಧನೆ ಮಾಡಿದರು. ೨೦೧೬ರಲ್ಲಿ ತವರಿನಲ್ಲಿ ಇಂಗ್ಲೆಂಡ್ ವಿರುದ್ಧ ಅವರು ಕೊನೆಯ ಶತಕ ಗಳಿಸಿದ್ದರು. ಶತಕ ಸಿಡಿಸುತ್ತಿದ್ದಂತೆಯೇ ಹೆಲ್ಮೆಟ್ ತೆಗೆದು ಎರಡು ಕೈಗಳನ್ನು ಅಗಲಿಸಿ ಸಂಭ್ರಮಿಸಿದರು.
ಕಳೆದ ವರ್ಷ ವಿದಾಯ ಹೇಳಿದ ಆರ್. ಅಶ್ವಿನ್ ಸಹ ೨೬೫೫ ದಿನಗಳ ನಂತರ (೨೦೧೩-೨೦೨೧) ತವರಿನಲ್ಲಿ ಎರಡನೇ ಶತಕ ಗಳಿಸಿದ್ದರು. ಭಾರತ ನಾಲ್ಕು ವಿಕೆಟ್ ನಷ್ಟಕ್ಕೆ ೨೮೧ ರನ್ ಗಳಿಸಿತ್ತು.