ಮ್ಯೂನಿಚ್‌ನಲ್ಲಿ ಡ್ರೋಣ್, ವಿಮಾನ ಹಾರಾಟ ಬಂದ್

ಮ್ಯೂನಿಚ್, ಅ.೩- ಜರ್ಮನಿಯ ಮ್ಯೂನಿಚ್ ವಿಮಾನ ನಿಲ್ದಾಣದಲ್ಲಿ ಡ್ರೋಣ್ ಹಾರಾಟ ಕಂಡುಬಂದ ಹಿನ್ನೆಲೆಯಲ್ಲಿ ಮುನ್ನೆಚ್ಚರಿಕೆ ಕ್ರಮವಾಗಿ ತಾತ್ಕಾಲಿಕವಾಗಿ ವಿಮಾನ ನಿಲ್ದಾಣದ ಕಾರ್ಯಾಚರಣೆ ಸ್ಥಗಿತಗೊಳಿಸಲಾಗಿದೆ.ಅಡಚಣೆಯಿಂದಾಗಿ ೧೭ ವಿಮಾನಗಳ ಹಾರಾಟ ಸ್ಥಗಿತಗೊಂಡಿದ್ದು, ಸುಮಾರು ೩,೦೦೦ ಪ್ರಯಾಣಿಕರ ಮೇಲೆ ಪರಿಣಾಮ ಬೀರಿದೆ ಎಂದು ವಿಮಾನ ನಿಲ್ದಾಣ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.


ಇದಲ್ಲದೆ, ೧೫ ಒಳಬರುವ ವಿಮಾನಗಳನ್ನು ಸ್ಟಟ್‌ಗಾರ್ಟ್, ನ್ಯೂರೆಂಬರ್ಗ್ ಮತ್ತು ಫ್ರಾಂಕ್‌ಫರ್ಟ್ ಸೇರಿದಂತೆ ಇತರ ಜರ್ಮನ್ ನಗರಗಳಿಗೆ ಹಾಗೂ ಆಸ್ಟ್ರಿಯಾದ ವಿಯೆನ್ನಾ ವಿಮಾನ ನಿಲ್ದಾಣದಲ್ಲಿ ಲ್ಯಾಂಡ್ ಆಗಲು ಸೂಚಿಸಲಾಗಿದೆ ಎಂದು ವಿಮಾನ ನಿಲ್ದಾಣ ಪ್ರಾಧಿಕಾರ ತಿಳಿಸಿದೆ.ಡ್ರೋನ್ ವೀಕ್ಷಣೆಗಳು ವಿಮಾನ ನಿಲ್ದಾಣದ ಕಾರ್ಯಾಚರಣೆಗಳಿಗೆ ಗಮನಾರ್ಹ ಬೆದರಿಕೆಯನ್ನುಂಟುಮಾಡುತ್ತಿದ್ದು ಈ ಹಿನ್ನೆಲೆಯಲ್ಲಿ ವಿಮಾನ ಸಂಚಾರ ಸ್ಥಗಿತಗೊಳಿಸಲಾಗಿದೆ. ಡ್ರೋಣ್ ಮೂಲಪತ್ತೆ ಹಚ್ಚುವ ಕೆಲಸ ನಡೆದಿದೆ ಎಂದು ವಿಮಾನ ನಿಲ್ದಾಣದ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.


ದಕ್ಷಿಣ ಜರ್ಮನಿಯ ಬವೇರಿಯಾದಲ್ಲಿರುವ ಮ್ಯೂನಿಚ್ ವಿಮಾನ ನಿಲ್ದಾಣ ೨೦೨೫ ರ ಮೊದಲಾರ್ಧದಲ್ಲಿ ಸುಮಾರು ೨೦ ಮಿಲಿಯನ್ ಪ್ರಯಾಣಿಕರನ್ನು ನಿರ್ವಹಿಸಿದೆ. ವಿಮಾನ ನಿಲ್ದಾಣ ಸ್ಥಗಿತದಿಂದ ಡ್ರೋನ್ ವೀಕ್ಷಣೆಯಿಂದ ಅಡ್ಡಿಪಡಿಸಲ್ಪಟ್ಟ ಯುರೋಪಿಯನ್ ವಿಮಾನ ನಿಲ್ದಾಣಗಳ ಪಟ್ಟಿಗೆ ಮ್ಯೂನಿಚ್ ಕೂಡ ಸೇರ್ಪಡೆಯಾಗಿದೆ.
ಮ್ಯೂನಿಚ್ ವಿಮಾನ ನಿಲ್ದಾಣದ ಪ್ರಯಾಣಿಕರ ವಿಚಾರಣೆಯನ್ನು ನಡೆಸುತ್ತಿರುವ ಕರೆ ನಿರ್ವಾಹಕರು ಪ್ರತಿಕ್ರಿಯಿಸಿ “ಕೆಲವು ವಿಮಾನಗಳು ಇನ್ನೂ ಹಾರಾಟಕ್ಕೆ ಕಾಯುತ್ತಿವೆ, ಇತರೆ ವಿಮಾನಗಳನ್ನು ರದ್ದುಗೊಳಿಸಲಾಗಿದೆ. ಇನ್ನೂ ಕೆಲವು ವಿಮಾನಗಳನ್ನು ಬೇರೆಡೆ ಸ್ಥಳಾಂತರ ಮಾಡಲಾಗಿದೆ ಎಂದು ಹೇಳಿದ್ದಾರೆ.


ಕಳೆದ ವಾರ, ಡೆನ್ಮಾರ್ಕ್‌ನ ಹಲವಾರು ವಿಮಾನ ನಿಲ್ದಾಣಗಳಲ್ಲಿ ಸರಣಿ ಡ್ರೋನ್ ದೃಶ್ಯಗಳು ಹತ್ತಾರು ಸಾವಿರ ಪ್ರಯಾಣಿಕರ ಮೇಲೆ ಪರಿಣಾಮ ಬೀರಿತ್ತು.ರಷ್ಯಾ ವಿರುದ್ಧದ ಹೋರಾಟದಲ್ಲಿ ಉಕ್ರೇನ್‌ಗೆ ಬೆಂಬಲ ಮತ್ತು ಯುರೋಪಿಯನ್ ಭದ್ರತೆಯನ್ನು ಬಲಪಡಿಸುವ ಬಗ್ಗೆ ಚರ್ಚಿಸಲು ಕೋಪನ್‌ಹೇಗನ್‌ನಲ್ಲಿ ಯುರೋಪಿಯನ್ ನಾಯಕರ ಶೃಂಗಸಭೆಯನ್ನು ಆಯೋಜಿಸಲು ಡೆನ್ಮಾರ್ಕ್ ಸಿದ್ಧತೆ ನಡೆಸುತ್ತಿದ್ದಂತೆ, ಡೆನ್ಮಾರ್ಕ್ ತನ್ನ ವಾಯುಪ್ರದೇಶದಲ್ಲಿ ಎಲ್ಲಾ ನಾಗರಿಕ ಡ್ರೋನ್ ಹಾರಾಟಗಳನ್ನು ನಿಷೇಧಿಸಲಾಗಿದೆ.