ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಾರಂಭ

ಮಂಗಳೂರು-ಕರ್ನಾಟಕ ಪಶುವೈದ್ಯಕೀಯ, ಪಶು ಮತ್ತು ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಮಹಾವಿದ್ಯಾಲಯ ಕಾಲೇಜಿನ ಹೊಯ್ಗೆಬಜಾರ್ ಆವರಣದಲ್ಲಿರುವ ’ಮೀನುಗಾರಿಕೆಯಲ್ಲಿ ಕೌಶಲ್ಯಾಬಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇದ್ರದ ವತಿಯಿಂದ ’ಮಂಗಳೂರು ಸ್ಮಾರ್ಟ್ ಸಿಟಿ ಲಿಮಿಟೆಡ್ನ ಪ್ರಾಯೋಜಿತ ಯೋಜನೆಯಡಿ ’ಅಕ್ವೇರಿಯಂ ತಯಾರಿಕೆ, ನಿರ್ವಹಣೆ, ಅಲಂಕಾರಿಕ ಮೀನುಗಳ ಉತ್ಪಾದನೆ ಮತ್ತು ಸಾಕಣೆ’ ಎಂಬ ಶಿರ್ಷಿಕೆಯಲ್ಲಿ ೬ ದಿನಗಳ ವರೆಗೆ ನಡೆಸಲಾಗುವ ಕೌಶಲ್ಯ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು.
ಮೇ ೧೯ ರಿಂದ ಕ್ರಮವಾಗಿ ಪ್ರತೀ ೬ ದಿವಸಗಳವರೆಗೆ ಸೀಮಿತವಾಗಿರುವಂತೆ ಪ್ರತಿಯೊಂದು ಬ್ಯಾಚ್ (ತಂಡ) ನಲ್ಲಿ ಒಟ್ಟು ೩೦ ಜನರಂತೆ ವಿವಿಧ ಬ್ಯಾಚ್ (ತಂಡ) ಗಳಿಗೆ ಉಚಿತವಾಗಿ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮವನ್ನು ಪ್ರಾರಂಭಿಸಲಾಯಿತು. ಈ ಸಂದರ್ಭದಲ್ಲಿ ’ಅಕ್ವೇರಿಯಂ ತಯಾರಿಕೆ, ನಿರ್ವಹಣೆ ಮತ್ತು ಅಲಂಕಾರಿಕ ಮೀನುಗಳ ಉತ್ಪಾದನೆ’ ಗೆ ಸಂಭಂದಪಟ್ಟ ಪ್ರಾಯೋಗಿಕೆ ಕೈಪಿಡಿಯನ್ನು ಬಿಡುಗೊಡೆ ಮಾಡಲಾಯಿತು. ಸಾಂಕೇತಿಕವಾಗಿ ಅಲಂಕಾರಿಕ ಮೀನುಗಳನ್ನು ಗ್ಲಾಸ್ ಜಾರ್ (ಬೌಲ್) ಗಳಿಗೆ ಬಿಡುವ ಮೂಲಕ ತರಬೇತಿಗೆ ಚಾಲನೆ ನೀಡಲಾಯಿತು.
ನಗರದ ಹೊಯ್ಗೆಬಜಾರ್‌ನಲ್ಲಿ ಸೋಮವಾರ ಪ್ರಾರಂಭವಾದ ಈ ತರಬೇತಿ ಕಾರ್ಯಕ್ರಮವನ್ನು ಮೀನುಗಾರಿಕೆ ಅಪಾರ ನಿರ್ದೇಶಕ ಹಾಗೂ ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ವ್ಯವಸ್ಥಾಪಕ ನಿರ್ದೇಶಕ ಗಣೇಶ್ ಕೆ. ಉದ್ಘಾಟಿಸಿ ಇಂದಿನ ಯುವಕ-ಯುವತಿಯರು ಉಚಿತವಾಗಿ ನೀಡುವ ಇಂತಹ ತರಬೇತಿ ಕಾರ್ಯಕ್ರಮದ ಸೌಲತ್ತನ್ನು ಸದುಪಯೋಗಪಡೆದು ಉದ್ಯಮಶೀಲರಾಗಬೇಕೆಂದು ಕರೆ ನೀಡಿದರು. ಮುಂದಿನ ದಿನಗಳಲ್ಲಿ ಇಂತಹ ಕೌಶಲ್ಯಾಧಾರಿತ ತರಬೇತಿ ಕಾರ್ಯಕ್ರಮಗಳಿಗೆ ನಿಗಮದ ಸಹಕಾರ ಇರುತ್ತದೆ ಎಂದು ಹೇಳಿದರು.
ದ.ಕ. ಜಿಲ್ಲಾ ಪಂಚಾಯತ್‌ನ ಯೋಜನಾ ನಿರ್ದೇಶಕ ಕೆ.ಇ. ಜಯರಾಂ ಮಾತನಾಡಿ, ಅಕ್ವೇರಿಯಂಗಳನ್ನು ಮನೆಗಳಲ್ಲಿ ಇಟ್ಟರೆ ಮಾನವನಿಗೆ ಬರುವ ಸಹಜವಾದ ಮಾನಸಿಕ ರೋಗಗಳನ್ನು ನಿವಾರಿಸಲು ಸಹಕಾರಿಯಾಗುತದೆ ಎಂದು ಹೇಳಿದರು. ಬಣ್ಣಬಣ್ಣದ ಮೀನುಗಳ ಚಲನವಲನಗಳನ್ನು ಅಕ್ವೇರಿಯಂಗಳಲ್ಲಿ ವೀಕ್ಷಿಸಿದರೆ ದಣಿದು ಬಂದ ಜೀವಕ್ಕೆ ಮರುಜೀವ ಬರುವುದರಲ್ಲಿ ಯಾವುದೇ ಸಂಶಯವಿಲ್ಲ ಮತ್ತು ಮನಸ್ಸಿಗೆ ಆನಂದವನ್ನೂ ಸಹಾ ಕೊಡುತ್ತದೆ ಎಂದು ತಿಳಿಸಿದರು. ಈ ರೀತಿಯ ತರಬೇತಿ ಕಾರ್ಯಕ್ರಮಗಳಿಂದ ಇಂದಿನ ಯುವಪೀಳಿಗೆಗಳು ದೇಶದ ಏಳಿಗೆಗೆ ಸಹಕಾರಿಯಾಗಲು ಸುಯೋಗಎಂದು ಎಂದು ಅಭಿಪ್ರಾಯಪಟ್ಟರು.
ಕರ್ನಾಟಕ ಮೀನುಗಾರಿಕೆ ಅಭಿವೃದ್ಧಿ ನಿಗಮದ ಪ್ರಧಾನ ವ್ಯವಸ್ಥಾಪಕ ಮಹೇಶ್ ಕುಮಾರ ಮಾತನಾಡಿ ಇಂತಹ ಕೌಶಲ್ಯ ಕಾರ್ಯಕ್ರಮಗಳು ಸ್ವಂತ ಉದ್ದಿಮೆ ಮಾಡುವವರಿಗೆ ಸಹಕಾರಿ ಯಾಗಲಿದೆ ಎಂದು ಹೇಳಿದರು. ಮೀನುಗಾರರು ತಮ್ಮ ದಿನನಿತ್ಯದ ಕಾರ್ಯಚಟುವಟಿಕೆಗಳೊಂದಿಗೆ ಕೌಶಲ್ಯಾಧರಿತ ಜ್ಞಾನವನ್ನು ಪಡೆದರೆ ತಮ್ಮ ಜೀವನೋಪಾಯ ನಡೆಸಲು ಸಹಕಾರಿಯಾಗಲಿದೆ ಎಂದು ತಿಳಿಸಿದರು.
ಅಧ್ಯಕ್ಷತೆ ವಹಿಸಿದ್ದ ಮೀನುಗಾರಿಕಾ ಮಹಾವಿದ್ಯಾಲಯದ ಡೀನ್ ಡಾ. ಹೆಚ್.ಎನ್. ಅಂಜನೇಯಪ್ಪ ಮಾತನಾಡಿ, ಈ ಕೇಂದ್ರವು ನಿರುದ್ಯೋಗಿ ಯುವಕ-ಯುವತಿಯರು, ಯುವ ಉದ್ಯಮಿಗಳು, ವಿಸ್ತರಣಾ ಕಾರ್ಯಕರ್ತರು, ಸ್ವ-ಉದ್ಯೋಗಾಂಕ್ಷಿ ಯುವಕರು ಹಾಗೂ ಮೀನುಗಾರರು ಮತ್ತು ಕೃಷಿಕರಿಗೆ ಸಹಕಾರಿಯಾಗಿದೆ ಎಂದು ಹೇಳಿದರು. ಈ ಕೇಂದ್ರದಲ್ಲಿ ಭಾಗವಹಿಸುವವರಿಗೆ ಸ್ವ-ಉದ್ಯೋಗ ಮತ್ತು ಆದಾಯ ಉತ್ಪಾದನಾ ಚಟುವಟಿಕೆಗಳನ್ನು ತಿಳಿಸಿಕೊಡಲಾಗುತ್ತದೆ ಎಂದು ತಿಳಿಸಿದರು. ಆರ್ಥಿಕ ಸಂಪಾದನೆ ಮಾಡುವವರು ಇಂತಹ ತರಬೇತಿಗಳಿಂದ ಪರಿಪೂರ್ಣ ವ್ಯಕ್ತಿಯಾಗಲು ಮತ್ತು ತಮ್ಮ ಸ್ವಂತ ಕಾಲಿನಮೇಲೆ ನಿಲ್ಲುವಂತೆ ಸ್ವಉದ್ಯಮಿಗಳಾಗಲು ಸಹಕಾರಿಯಾಗಲಿವೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.ತಾಂತ್ರಿಕ ಕೌಶಲ್ಯಗಳ ಜೊತೆಗೆ, ತಮ್ಮದೇ ಆದ ವ್ಯವಹಾರಗಳನ್ನು ಮಾಡಲು ಅಥವಾ ವಿಸ್ಥರಿಸಲು ಸಹಾಯವಾಗುವಂತೆ ಮತ್ತು ವಿವಿಧ ಯೋಜನೆಗಳಿಗೆ ಪ್ರವೇಶಿಸುವ ಬಗ್ಗೆ ಮಾರ್ಗದರ್ಶನವನ್ನು ಈ ಕೇಂದ್ರದಿಂದ ಒದಗಿಸಲಾಗುತ್ತದೆ ಎಂದು ಹೇಳಿದರು. ಉದ್ಯಮಶೀಲತೆಯನ್ನು ಉತ್ತೇಜಿಸಲು, ಸುಸ್ಥಿರ ಅಭ್ಯಾಸಗಳನ್ನು ಬೆಂಬಲಿಸಲು ಮತ್ತು ಮೀನುಗಾರಿಕೆ ವಲಯದಲ್ಲಿ ಜೀವನೋಪಾಯವನ್ನು ಸುಧಾರಿಸಲು ಹಾಗೂ ಯಶಸ್ವಿಯಾಗಲು ಅಗತ್ಯವಾದ ತಾಂತ್ರಿಕ ಪರಿಣಿತಿ ಮತ್ತು ಜ್ಞಾನವುಳ್ಳ ಸಂಪನ್ಮೂಲಗಳೊಂದಿಗೆ ಸಬಲೀಕರಣಗೊಳಿಸಲು ವಿನ್ಯಾಸಗೊಳಿಸಲಾಗುವುದು ಎಂದು ಈ ಸಂದರ್ಭದಲ್ಲಿ ಹೇಳಿದರು.
ಮೀನುಗಾರಿಕೆಯಲ್ಲಿ ಕೌಶಲ್ಯಾಬಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇದ್ರದ ಸಂಯೋಜಕರು ಹಾಗೂ ಪ್ರಧಾನ ಸಂಶೋಧಕರು ಮತ್ತು ಮೀನುಗಾರಿಕಾ ಕಾಲೇಜಿನ ಪ್ರೊಫೆಸರ್ ಡಾ. ಎ.ಟಿ. ರಾಮಚಂದ್ರ ನಾಯ್ಕ ಅವರು ಈ ಯೋಜನೆಯ ಹಿನ್ನೆಲೆ ತಿಳಿಸಿದರು. ವಿವಿಧ ಕೌಶಲ್ಯಾಭಿವೃದ್ಧಿ ತರಬೇತಿ ಕಾರ್ಯಕ್ರಮಗಳನ್ನು ಗುರುತಿಸಲಾದ ಪ್ರಮುಖ ಕ್ಷೇತ್ರಗಳನ್ನು ಈ ಸಂದರ್ಭದಲ್ಲಿ ತಿಳಿಸಿದರು. ಅವುಗಳೆಂದರೆ: ೧)ಅಕ್ವೇರಿಯಂ ತಯಾರಿಕೆ, ಅಲಂಕಾರಿಕ ಮೀನುಗಳ ನಿರ್ವಹಣೆ ಮತ್ತು ಸಾಕಣೆ, ಅಕ್ವಾಪೋನಿಕ್ಸ್ ಮತ್ತು ಹೈಡ್ರೋಪೋನಿಕ್ಸ್ ಗಳನ್ನು ತೋಟಗಾರಿಕೆಯೊಂದಿಗೆ ಸಂಯೋಜಿಸುವುದು, ೩)ಮೌಲ್ಯವರ್ಧಿತ ಮೀನು ಉತ್ಪನ್ನಗಳ ಉತ್ಪಾದನೆ ಮತ್ತು ಪ್ರಚಾರ, ೪)ಮೀನು ಸಂರಕ್ಷಣೆಯ ಸುಧಾರಿತ ತಂತ್ರಜ್ಞಾನ ಮತ್ತು ಅದರ ಪ್ರತಿಫಲ, ೫)ಗೊಬ್ಬರಕ್ಕಾಗಿ ಮೀನಿನ ತ್ಯಾಜ್ಯಗಳ ಬಳಕೆ, ಸ್ಕ್ಯೂಬಾ ಡೈವಿಂಗ್ ಮತ್ತು ಸ್ನಾರ್ಕ್ಲಿಂಗ್, ೬)ಮೀನುಗಾರಿಕೆ ದೋಣಿಗಳ ಆಧುನೀಕರಣ ಮತ್ತು ಸುರಕ್ಷತೆ, ೭)ಹಸ್ತಚಾಲಿತ ಮೀನು ಬಲೆ ಹೆಣೆಯುವುದು ಮತ್ತು ದುರಸ್ತಿ.
ಡಾ. ಎ.ಟಿ. ರಾಮಚಂದ್ರ ನಾಯ್ಕ ಅವರು ದೀರ್ಘಾವಧಿಯ ತರಬೇತಿಗಳ ಜೊತೆಗೆ, ಅಲ್ಪಾವಧಿಯ ಮತ್ತು ವೃತ್ತಿಪರ ತರಬೇತಿಗಳನ್ನು ಅಪೇಕ್ಷಣೀಯ ಫಲಾನುಭವಿಗಳಿಗೆ ನೀಡಲಾಗುತ್ತದೆ. ಕೌಶಲ್ಯಾಭಿವೃದ್ಧಿ ಕಾರ್ಯಕ್ರಮಗಳ ಸ್ಪಷ್ಟೀಕರಣದ ಕರೆಯನ್ನು ಗಮನದಲ್ಲಿಟ್ಟುಕೊಂಡು ಈ ಕೇಂದ್ರವು ತನ್ನ ಆಕಾಂಕ್ಷಿಗಳಿಗೆ ನಿರ್ದಿಷ್ಟ ಕೌಶಲ್ಯಗಳನ್ನು ನೀಡುತ್ತದೆ. ಜ್ಞಾನ ಮತ್ತು ಪ್ರಾಯೋಗಿಕ ಸಾಮಥ್ರ್ಯಗಳೊಂದಿಗೆ ಮೀನುಗಾರಿಕೆಯಲ್ಲಿ ಕೌಶಲ್ಯಪೂರ್ಣ ಕಾರ್ಯಕ್ರಮಗಳು ಜೀವನದಲ್ಲಿ ಯಶಸ್ವಿಯಾಗಲು ಅವಶ್ಯಕ, ವಿಶೇಷವಾಗಿ ಸ್ವಂತ ಉದ್ದಿಮೆ ಸ್ಥಾಪಿಸುವವರಿಗೆ ಸಹಾಯವಾಗಲಿದೆ. ಕಾರ್ಯಕ್ರಮದಲ್ಲಿ ಭಾಗವಹಿಸುವವರು ಈ ಸ್ಪರ್ಧಾತ್ಮಕ ಯುಗದಲ್ಲಿ ತಮ್ಮ ಸಾಮಥ್ರ್ಯವನ್ನು ಸುಧಾರಿಸಲು ಸರಿಯಾದ ವಿಧಾನಗಳು ಮತ್ತು ಸಾಧನಗಳನ್ನು ಬಳಸುವುದನ್ನು ಒಳಗೊಂಡಿರುವ ವಿವಿಧ ತಂತ್ರಗಳನ್ನು ಕಲಿಯಬಹುದಾಗಿದೆ. ಇದಲ್ಲದೆ, ವಿಶೇಷ ಕೌಶಲ್ಯ ತರಬೇತಿಗಳನ್ನು ಪಡೆಯುತ್ತಿರುವವರು ಸುಸ್ಥಿರತೆ ಮತ್ತು ಜವಾಬ್ದಾರಿಯುತ ಅಭ್ಯಾಸಗಳನ್ನು ಉತ್ತೇಜಿಸುವ ವಲಯಗಳಲ್ಲಿ ಪರಿಣಾಮಕಾರಿಯಾಗಿ ಕೆಲಸ ಮಾಡಲು ಸಿದ್ಧರಾಗಬಹುದಾಗಿದೆ ಎಂದು ಹೇಳಿದರು.
ಮೀನುಗಾರಿಕಾ ಕಾಲೇಜಿನ ವಿಭಾಗ ಮುಖ್ಯಸ್ಥ ಡಾ. ಎಸ್. ವರದರಾಜು, ಅಕ್ವಾಟಿಕ್ ಬಯೋಸಿಸ್ಟಂನ ವ್ಯವಸ್ಥಾಪಕ ನಿರ್ದೇಶಕ ಡಾ. ಅಶ್ವಿನ್ ರೈ, ಪ್ರಾಧ್ಯಾಪಕ ಡಾ. ಲಕ್ಷ್ಮೀಪತಿ ಎಂಟಿ., ಕಾಲೇಜಿನ ನಿವೃತ್ತ ಸಿಬ್ಬಂದಿ ನಾರಾಯಣ ಅಮುಂಜೆ, ಗ್ರಂಥಾಲಯದ ಸಬ್ಬಂದಿ ವೇಣುಗೋಪಾಲ್ ಪಿ.ಪಿ., ಇತರೆ ಸಿಬ್ಬಂದಿಗಳಾದ ಪ್ರಕಾಶ್, ರಾಖೇಶ್, ದಿನೇಶ್ ಆಯ್ತಪ್ಪ, ಕಾಲೇಜಿನ ಸ್ನಾತಕೋತ್ತರ ಮತ್ತು ಡಾಕ್ಟರೇಟ್ ಪದವಿಯ ವಿದ್ಯಾರ್ಥಿ-ವಿದ್ಯಾರ್ಥಿನಿಯರು, ತರಬೇತಿಗೆ ಆಗಮಿಸಿದ ಮೂಡಬಿದಿರೆ, ಬಂಟ್ವಾಳ ಮತ್ತು ಮಂಗಳೂರಿನ ಒಟ್ಟು ೩೦ ಶಿಭಿರಾರ್ಥಿಗಳು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಮೀನುಗಾರಿಕೆಯಲ್ಲಿ ಕೌಶಲ್ಯಾಬಿವೃದ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರದ ಇನ್ನೋರ್ವ ಸಂಯೋಜಕರು ಹಾಗೂ ಪ್ರಧಾನ ಸಂಶೋಧಕರು ಮತ್ತು ಮೀನುಗಾರಿಕಾ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಕುಮಾರನಾಯ್ಕ ಎ.ಎಸ್. ವಂದಿಸಿ, ಸಹಾಯಕ ಪ್ರಾಧಾಪಕಿ ಡಾ. ಶೀತಲ್ ಕೆ.ಯು. ನಿರೂಪಿಸಿದರು.