
ನಂಜನಗೂಡು : ಮಾ.26:- ದಕ್ಷಿಣ ಕಾಶಿ ನಂಜನಗೂಡಿನಲ್ಲಿ ಮಾರ್ಚ್ 30ರಂದು ನಡೆಯಲಿರುವ ಪುರಾಣ ಪ್ರಸಿದ್ಧ ಪಂಚ ಮಹಾ ರಥೋತ್ಸವದ ದೊಡ್ಡ ಜಾತ್ರೆಗೆ ಸಕಲ ಸಿದ್ಧತೆಗಳು ನಡೆದು ಅದರಲ್ಲೂ ಮುಖ್ಯವಾಗಿ ಪಂಚ ಮಹಾ ರಥಗಳನ್ನು ಕಟ್ಟುವ ಹಾಗೂ ಶೃಂಗರಿಸುವ ಕಾರ್ಯ ಬರದಿಂದ ಸಾಗುತ್ತಿದೆ.
ಸುಮಾರು 97 ಅಡಿ ಎತ್ತರದ 250 ಟನ್ ತೂಕ ವಿರುವ ಶ್ರೀ ನಂಜುಂಡೇಶ್ವರನ ದೊಡ್ಡ ರಥಕ್ಕೆ ಈಗಾಗಲೇ ಭಾಗಶಹ ಕೆಲಸ ಮುಗಿದಿದ್ದು ಉಳಿಕೆ ಕೆಲಸವನ್ನು ಸಾಂಪ್ರದಾಯಕವಾಗಿ ರಥ ಕಟ್ಟುವ ಕಾರ್ಮಿಕರಿಂದ ನಡೆಯುತ್ತಿದೆ.
ಉಳಿದಂತೆ ಶ್ರೀ ಅಮ್ಮನವರ ರಥ ಗಣೇಶ,ಸುಬ್ರಹ್ಮಣ್ಯ, ಚಂಡಿಕೇಶ್ವರ ಪಂಚ ರಥಗಳು ಜಾತ್ರೆಗೆ ಶೃಂಗಾರ ಗೊಳ್ಳುತ್ತಿವೆ.
ಅಲ್ಲದೆ ಪಂಚ ರಥಗಳು ಚಲಿಸುವಾಗ ಮುಖ್ಯವಾಗಿ ಬೇಕಾಗಿರುವ ಮರದ ಗೊದಮಗಳು, ಹೊಸ ಹೊಸ ಹಗ್ಗಗಳು ಸೇರಿದಂತೆ ಕಳಶಗಳು ಪೀಠಿಕೆಗಳು, ಛತ್ರಿಗಳನ್ನು ಶುದ್ಧಗೊಳಿಸಿ ಕುದುರೆ ವಾಹನಗಳಿಗೆ ಬಣ್ಣ ಹಚ್ಚುವ ಮೂಲಕ ರಥಗಳಿಗೆ ಬೇಕಾಗುವ ಪರಿಕರಗಳನ್ನು ಅಣಿಗೊಳಿಸಲಾಗುತ್ತಿದೆ.
ಮತ್ತು ದೇವಾಲಯದ ಸುತ್ತಮುತ್ತ ಬಣ್ಣ ಹೊಡೆಯುವುದು, ಶಾಮಿಯಾನ ವಿದ್ಯುತ್ ದೀಪ ಅಳವಡಿಸುವುದು ತಾತ್ಕಾಲಿಕ ಶೌಚಾಲಯಗಳ ನಿರ್ಮಾಣ ಸಿಸಿ ಕ್ಯಾಮರಾ ಗಳು, ಬ್ಯಾರೆಕೇಡ್ ಗಳು, ಕುಡಿಯುವ ನೀರಿನ ವ್ಯವಸ್ಥೆ, ರಥದ ಚಕ್ರಗಳು ಸರಾಗವಾಗಿ ಉರುಳಲು ರಸ್ತೆಗೆ ಮರಳು ಹಾಕಲು ಮರಳು ಸಂಗ್ರಹಣೆ ಸೇರಿದಂತೆ ಜಾತ್ರೆಗೆ ಬೇಕಾದ ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
ಇದೇ ಸಂದರ್ಭ ಇಂದು ಜಿಲ್ಲಾಧಿಕಾರಿ ಲಕ್ಷ್ಮಿಕಾಂತ ರೆಡ್ಡಿ ಅವರು ದೇವಾಲಯಕ್ಕೆ ಭೇಟಿ ನೀಡಿ ರಥಗಳು ಸೇರಿದಂತೆ ವಿವಿಧ ಸಿದ್ಧತಾ ಬಗ್ಗೆ ಪರಿಶೀಲನೆ ನಡೆಸಿದರು . ಸಿದ್ಧತೆಗಳ ಪರಿಶೀಲನೆ ನಡೆಸಿ ಅಧಿಕಾರಿಗಳಿಂದ ಮಾಹಿತಿ ಪಡೆದ ಜಿಲ್ಲಾಧಿಕಾರಿಗಳು ಜಾತ್ರೆಯಲ್ಲಿ ಭಕ್ತರಿಗೆ ಬೇಕಾದ ಮೂಲಭೂತ ಸೌಕರ್ಯಗಳು, ಬಿಗಿ ಭದ್ರತೆ, ಸ್ವಚ್ಛತೆ, ಹೆಚ್ಚು ಹೆಚ್ಚು ತಾತ್ಕಾಲಿಕ ಶೌಚಾಲಯಗಳ ನಿರ್ಮಾಣ, ಆಯಕಟ್ಟಿನ ಜಾಗಗಳಲ್ಲಿ ಸಿಸಿ ಕ್ಯಾಮರಗಳ ಅಳವಡಿಕೆ ಸೇರಿದಂತೆ ಯಾವುದಕ್ಕೂ ಕೊರತೆಯಾಗದಂತೆ ಹಾಗೂ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಾತ್ರೆಯನ್ನು ಯಶಸ್ವಿಗೊಳಿಸುವಂತೆ ತಾಕೀತು ಮಾಡಿದರು.
ಈ ವೇಳೆ ತಹಸಿಲ್ದಾರ್ ಸ್ಮಿತಾ, ದೇವಾಲಯದ ಕಾರ್ಯನಿರ್ವಾಹಕ ಅಧಿಕಾರಿ ಕೃಷ್ಣ, ಆಯುಕ್ತ ಬಸವರಾಜ್, ವೃತ್ತ ನಿರೀಕ್ಷಕ ರವೀಂದ್ರ, ಲೋಕೋಪಯೋಗಿ ಇಲಾಖೆ ಇಂಜಿನಿಯರ್ ಬಸವರಾಜ್, ತಾಲೂಕು ಪಂಚಾಯಿತಿ ಕಾರ್ಯನಿರ್ವಾಹಕ ಅಧಿಕಾರಿ ರಾಜೇಶ್ ಜರಾಲ್ಡ್, ತಾಲೂಕು ಆರೋಗ್ಯ ಅಧಿಕಾರಿ ಈಶ್ವರ್, ಸೇರಿದಂತೆ ತಾಲೂಕು ಮಟ್ಟದ ಇತರೆ ಅಧಿಕಾರಿಗಳು ಉಪಸ್ಥಿತರಿದ್ದರು.































