ಬೆಂಬಲ ಬೆಲೆ ಯೋಜನೆಯಡಿ ಸೂರ್ಯಕಾಂತಿ, ಶೇಂಗಾ ಉತ್ಪನ್ನಗಳ ಖರೀದಿ:ಜಿಲ್ಲಾಧಿಕಾರಿ


ಸಂಜೆವಾಣಿ ವಾರ್ತೆ
ಬಳ್ಳಾರಿ, ಅ.01:
ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ 2025-26ನೇ ಸಾಲಿಗೆ ಎಫ್.ಎ.ಕ್ಯೂ ಗುಣಮಟ್ಟದ ಮುಂಗಾರು ಹಂಗಾಮಿನ ಸೂರ್ಯಕಾಂತಿ ಮತ್ತು ಶೇಂಗಾ ಉತ್ಪನ್ನವನ್ನು ಖರೀದಿಸಲಾಗುವುದು ಎಂದು ಜಿಲ್ಲಾಧಿಕಾರಿ ನಾಗೇಂದ್ರ ಪ್ರಸಾದ್.ಕೆ ಅವರು ಹೇಳಿದರು.
ಪ್ರಸ್ತಕ ಸಾಲಿಗೆ ಮುಂಗಾರು ಹಂಗಾಮಿನಲ್ಲಿ ಕೇಂದ್ರ ಸರ್ಕಾರದ ಬೆಂಬಲ ಬೆಲೆ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಹಾಗೂ ಶೇಂಗಾ ಉತ್ಪನ್ನಗಳನ್ನು ಖರೀದಿಸುವ ಕುರಿತು ನಗರದ ಜಿಲ್ಲಾಧಿಕಾರಿಗಳ ಕಚೇರಿ ಸಭಾಂಗಣದಲ್ಲಿ ಸೋಮವಾರ ಏರ್ಪಡಿಸಿದ್ದ ಜಿಲ್ಲಾ ಟಾಸ್ಕ್ ಫೋರ್ಸ್ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಬೆಂಬಲ ಯೋಜನೆಯಡಿ ಎಫ್.ಎ.ಕ್ಯೂ ಗುಣಮಟ್ಟದ ಸೂರ್ಯಕಾಂತಿ ಹಾಗೂ ಶೇಂಗಾ ಉತ್ಪನ್ನಗಳನ್ನು ಖರೀದಿಸಲು ಜಿಲ್ಲೆಯಲ್ಲಿ ಮೂಲಭೂತ ಸೌಕರ್ಯವುಳ್ಳ ಖರೀದಿ ಕೇಂದ್ರಗಳ ಸ್ಥಾಪನೆಗೆ ಅಗತ್ಯ ಸಿದ್ಧತೆ ಕೈಗೊಳ್ಳುವಂತೆ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಸೂರ್ಯಕಾಂತಿ ಮತ್ತು ಶೇಂಗಾ ಉತ್ಪನ್ನ ಖರೀದಿಗಾಗಿ ಬಳ್ಳಾರಿಯ ಎಪಿಎಂಸಿ ಮಾರುಕಟ್ಟೆ ಇದ್ದು, ರೈತರಿಗೆ ಅನುಕೂಲವಾಗುವಂತೆ ಬೇಡಿಕೆ ಇದ್ದಲ್ಲಿ ಸಂಡೂರು ಪಟ್ಟಣದ  ಎಪಿಎಂಸಿ ಯಲ್ಲಿ ಖರೀದಿ ಕೇಂದ್ರ ಆರಂಭಿಸಲು ಸಿದ್ಧತೆ ಕೈಗೊಳ್ಳಬೇಕು ಎಂದು ಎಣ್ಣೆ ಬೀಜ ಬೆಳೆಗಾರರ ಸಹಕಾರ ಸಂಘದ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ಅದೇರೀತಿಯಾಗಿ ರೈತರು ಫ್ರೂಟ್ಸ್ ಐ.ಡಿ ಯೊಂದಿಗೆ ತಮ್ಮ ಹತ್ತಿರದ ಖರೀದಿ ಕೇಂದ್ರಗಳಲ್ಲಿ ನೋಂದಾಯಿಸಿಕೊಳ್ಳುವ ಕುರಿತು ಸಹ ಅಗತ್ಯ ಮಾಹಿತಿ ರೈತರಿಗೆ ಒದಗಿಸುವಂತೆಯೂ ಸೂಚಿಸಿದರು.
ರೈತರ ಹೆಸರಿನ ಆಧಾರ ಸಂಖ್ಯೆ ಜೋಡಣೆಗೊಂಡ ಬ್ಯಾಂಕ್ ಖಾತೆಗೆ ಮಾತ್ರ ಡಿಬಿಟಿ ಮೂಲಕ ಹಣ ಜಮೆ ಆಗಲಿದ್ದು, ರೈತರು ಕಡ್ಡಾಯವಾಗಿ ಎಫ್‌ಐಡಿ ಮತ್ತು ಬ್ಯಾಂಕ್ ಖಾತೆಗೆ ಆಧಾರ್ ಜೋಡಣೆ ಮಾಡಿಕೊಳ್ಳುವಂತೆ ತಿಳಿಸಬೇಕು ಎಂದರು.
ಸಭೆsೆಯಲ್ಲಿ ಕೃಷಿ ಮಾರಾಟ ಇಲಾಖೆಯ ಉಪನಿರ್ದೇಶಕ ಓಂಕಾರಯ್ಯ, ಕೃಷಿ ಜಂಟಿ ನಿರ್ದೇಶಕ ಸೋಮಸುಂದರ್, ಸಹಕಾರ ಇಲಾಖೆಯ ಉಪನಿಬಂಧಕ ವೀರಭದ್ರಯ್ಯ, ಕಾನೂನು ಮಾಪನ ಶಾಸ್ತç ಇಲಾಖೆಯ ನಿರೀಕ್ಷಕ ಮನೋಜ್ ಕುಮಾರ್, ಕರ್ನಾಟಕ ಸಹಕಾರ ಎಣ್ಣೆ ಬೀಜ ಬೆಳೆಗಾರರ ಮಾರಾಟ ಮಹಾ ಮಂಡಳಿ ನಿಯಮಿತದ ಜಿಲ್ಲಾ ವ್ಯವಸ್ಥಾಪಕ ಅಯ್ಯಪ್ಪ ಸೇರಿದಂತೆ ವಿವಿಧ ಅಧಿಕಾರಿಗಳು ಉಪಸ್ಥಿತರಿದ್ದರು.