ಪೋರ್ಟ್ ಲ್ಯಾಂಡ್‌ಗೆ ೨ ತಿಂಗಳು ನ್ಯಾಷನಲ್ ಗಾರ್ಡ್ ನಿಯೋಜನೆ

ವಾಷಿಂಗ್ಟನ್,ಅ.೩- ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಆದೇಶದ ಮೇರೆಗೆ, ಮುಂದಿನ ಎರಡು ತಿಂಗಳ ಕಾಲ ಒರೆಗಾನ್‌ನ ಪೋರ್ಟ್ ಲ್ಯಾಂಡ್‌ಗೆ ನ್ಯಾಷನಲ್ ಗಾರ್ಡ್ ನಿಯೋಜನೆ ಮಾಡಲಾಗಿದೆ.ವಲಸೆ ಬಂಧನ ಕೇಂದ್ರ ವಿರೋಧಿಸಿ ನಡೆಸುತ್ತಿರುವ ಪ್ರತಿಭಟನೆಯನ್ನು ಹತ್ತಿಕ್ಕುವ ಸಲುವಾಗಿ ರಾಷ್ಟ್ರೀಯ ಗಾರ್ಡ್ ಪಡೆಯನ್ನು ನಿಯೋಜಿಸಲು ನಿರ್ಧರಿಸಲಾಗಿದೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಪೀಟ್ ಹೆಗ್ಸೆತ್ ತಿಳಿಸಿದ್ದಾರೆ.


ಈ ಕುರಿತು ಮಾಹಿತಿ ಹಂಚಿಕೊಂಡಿರುವ ಅವರು ಪ್ರತಿಭಟನೆ ನಿಯಂತ್ರಿಸಲು ಅಗತ್ಯ ಕ್ರಮ ಕೈಗೊಳ್ಳಲಾಗಿದೆ. ಜೊತೆಗೆ ಸರ್ಕಾರದ ಆಸ್ತಿಯನ್ನು ರಕ್ಷಿಸಲು” ಕನಿಷ್ಠ ೨೦೦ ನ್ಯಾಷನಲ್ ಗಾರ್ಡ್ ಸದಸ್ಯರನ್ನು ನಗರಕ್ಕೆ ನಿಯೋಜಿಸಲಾಗುವುದು ಎಂದು ಹೇಳಿದ್ದಾರೆ.

ವಲಸೆ ಬಂಧನ ಕೇಂದ್ರಗಳನ್ನು ಗುರಿಯಾಗಿಸಿಕೊಂಡು ಪ್ರತಿಭಟನೆ ದೊಡ್ಡ ಮಟ್ಟದಲ್ಲಿ ನಡೆಯುತ್ತಿವೆ.ಅವುಗಳನ್ನು ನಿಯಂತ್ರಿಸಲು ರಾಷ್ಟ್ರೀಯ ಗಾರ್ಡ್ ಸೇವೆ ಅಗತ್ಯವಿದೆ ಎನ್ನುವುದನ್ನು ಮನಗಂಡ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ.
ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸೂಚನೆ ಮೇರೆಗೆ ಈ ಕ್ರಮ ಕೈಗೊಳ್ಳಲಾಗುತ್ತಿದೆ ಎಂದಿದ್ದಾರೆ. ಡೊನಾಲ್ಡ್ ಟ್ರಂಪ್ ಆಡಳಿತದ ವಿರುದ್ಧ ಮೊಕದ್ದಮೆ ಹೂಡುವ ಮೂಲಕ ಒರೆಗಾನ್ ಪ್ರತಿಕ್ರಿಯಿಸಿದ್ದು, ಪೊರ್ಟ್‌ಲ್ಯಾಂಡ್‌ಗೆ ನ್ಯಾಷನಲ್ ಗಾರ್ಡ್ ಅನ್ನು ನಿಯೋಜಿಸುವುದು “ಕಾನೂನುಬಾಹಿರ” ಎಂದು ಹೇಳಿದೆ.


ಒರೆಗಾನ್ ಅಟಾರ್ನಿ ಜನರಲ್ ಡ್ಯಾನ್ ರೇಫೀಲ್ಡ್ ಸಲ್ಲಿಸಿದ ಮೊಕದ್ದಮೆಯದಲ್ಲಿ ಅಮೆರಿಕಾ ಅಧ್ಯಕ್ಷರ ಕ್ರಮ “ಪ್ರಚೋದನಕಾರಿ ಮತ್ತು ಅನಿಯಂತ್ರಿತ” ಎಂದು ಕರೆದಿದೆ.ಇದರಿಂದ ಮುಂದಿನ ದಿನಗಳಲ್ಲಿ “ಸಾರ್ವಜನಿಕ ಆಕ್ರೋಶ ಪ್ರಚೋದಿಸುವ ಮೂಲಕ ಸಾರ್ವಜನಿಕ ಸುರಕ್ಷತೆ ದುರ್ಬಲಗೊಳಿಸುವ ಜೊತೆಗೆ ಬೆದರಿಕೆ ಉಂಟು ಮಾಡುವ ಪ್ರಯತ್ನ ಎಂದಿದ್ದಾರೆ.


ಅಕ್ರಮ ವಲಸಿಗರ ಮೇಲೆ ಡೊನಾಲ್ಡ್ ಟ್ರಂಪ್ ಆಡಳಿತ ಕಠಿಣ ಕ್ರಮದ ನಡುವೆ, ರಾಷ್ಟ್ರೀಯ ಗಾರ್ಡ್ ನಿಯೋಜನೆ ಅಮೆರಿಕಾದ ವಿವಿಧ ರಾಜ್ಯಗಳಲ್ಲಿ ವಿಸ್ತರಿಸಲು ಉದ್ದೇಶಿಸಲಾಗಿದೆ ಎಂದು ಹೇಳಲಾಗಿದೆ. “ಆಂಟಿಫಾ ಮತ್ತು ಇತರ ದೇಶೀಯ ಭಯೋತ್ಪಾದಕರ ದಾಳಿಯಿಂದ ಯಾವುದೇ ಸೌಲಭ್ಯ ರಕ್ಷಿಸಲು ಸಹಾಯ ಮಾಡುತ್ತದೆ” ಎಂದು ಡೊನಾಲ್ಡ್ ಟ್ರಂಪ್ ತಮ್ಮ ಸಾಮಾಜಿಕ ಜಾಲತಾಣದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ.