
‘ದೇವನೊಬ್ಬ ಜಾದೂಗಾರ’ ಟೀಸರ್ ಬಿಡುಗಡೆ
ನಂಬಿಕೆ ನಿರಾಸೆ ಭಾವನೆಗಳನ್ನೇ ಆಧಾರವಾಗಿಟ್ಟುಕೊಂಡು ಮೂಡಿಬರುತ್ತಿರುವ ‘ದೇವನೊಬ್ಬ ಜಾದೂಗಾರ’ ಚಿತ್ರದ ಟೀಸರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಖಟ್ವಾಂಗ ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಣವಾಗಿರುವ ಈ ಚಿತ್ರವನ್ನು ಸೌದಿ ಅರೇಬಿಯಾದ ಉದ್ಯಮಿ ಬಾಲಕೃಷ್ಣ ಶೆಟ್ಟಿ ನಿರ್ಮಿಸಿದ್ದಾರೆ.
ಟೀಸರ್ ಅನ್ನು ಖ್ಯಾತ ನಟಿ ಶ್ವೇತಾ ಶ್ರೀವಾಸ್ತವ್ ಬಿಡುಗಡೆ ಮಾಡಿದ್ದು, ನಿರ್ದೇಶಕ ಸಿಂಪಲ್ ಸುನಿ ಹಾಗೂ ಬಿಗ್ ಬಾಸ್ ಖ್ಯಾತಿ ಹುಚ್ಚ ವೆಂಕಟ್ ಕಾರ್ಯಕ್ರಮದಲ್ಲಿ ಭಾಗವಹಿಸಿ ಚಿತ್ರತಂಡಕ್ಕೆ ಶುಭಾಶಯ ಕೋರಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ವೇತಾ ಶ್ರೀವಾಸ್ತವ್, “ನಿರ್ದೇಶಕ ವರುಣ್ ವಸಿಷ್ಠ ಅವರ ಸಿನಿಮಾ ಕನಸಿಗೆ ಇಂದು ರೂಪ ಸಿಕ್ಕಿದೆ. ಸಿಂಪಲ್ ಆಗ್ ಒಂದ್ ಲವ್ ಸ್ಟೋರಿ’ ದಿನಗಳಿಂದ ವರುಣ್ ಪರಿಚಯ. ಚಿತ್ರ ತಂಡಕ್ಕೆ ಶುಭವಾಗಲಿ” ಎಂದು ಹಾರೈಸಿದರು. ಹೊಸ ವರ್ಷದ ಅಂಗವಾಗಿ ಹೊಸ ಪ್ರತಿಭೆಗಳಿಗೆ ಶುಭಾಶಯ ಕೋರಿದ ಸಿಂಪಲ್ ಸುನಿ ಹಾಗೂ ಹುಚ್ಚ ವೆಂಕಟ್, ಹೊಸ ಪ್ರಯತ್ನಗಳಿಗೆ ಬೆಂಬಲ ಅಗತ್ಯವೆಂದು ಹೇಳಿದರು.
ನಿರ್ಮಾಪಕ ಬಾಲಕೃಷ್ಣ ಶೆಟ್ಟಿ ಮಾತನಾಡಿ, ನನ್ನ ಮಗನಿಗೆ ನಟನಾಗಬೇಕೆಂಬ ಆಸೆ ಇದ್ದ ಕಾರಣ ಈ ಚಿತ್ರ ನಿರ್ಮಾಣಕ್ಕೆ ಕೈ ಹಾಕಿದೆ. ನಾಲ್ಕು ವರ್ಷಗಳ ಶ್ರಮದ ಫಲವಾಗಿ ಚಿತ್ರ ಸಿದ್ಧವಾಗಿದೆ ಎಂದರು.
ನಿರ್ದೇಶಕ ವರುಣ್ ವಸಿಷ್ಠ ಮಾತನಾಡಿ, ಕಾಶಿಪುರ ಎಂಬ ಕಾಲ್ಪನಿಕ ಊರಿನಲ್ಲಿ ನಡೆಯುವ ಕಥೆಯಿದು. ದೇವ ಎಂಬ ಲಾರಿ ಚಾಲಕನ ಜೀವನ, ಅವನ ಸುತ್ತ ನಡೆಯುವ ಅಸಾಧಾರಣ ಘಟನೆಗಳು ಹಾಗೂ ಕ್ರೈಂ ಥ್ರಿಲ್ಲರ್ ಹಾದಿಯಲ್ಲಿ ಸಾಗುವ ಕಥಾವಸ್ತು ಚಿತ್ರದಲ್ಲಿದೆ. ಮಂಗಳಮುಖಿ ಪಾತ್ರವೂ ಪ್ರಮುಖ ಅಂಶವಾಗಿದ್ದು, ಪ್ರತಿಯೊಬ್ಬ ಪಾತ್ರವೂ ಕಥೆಗೆ ಮಹತ್ವ ಹೊಂದಿದೆ ಎಂದರು.
ನಾಯಕ ನಟ ಸಚಿನ್, ನಾಯಕಿ ಪ್ರಿಯಾ ಜೆ. ಆಚಾರ್, ಹಿರಿಯ ನಟಿ ಸುಧಾ ಬೆಳವಾಡಿ ತಮ್ಮ ಪಾತ್ರಗಳ ಬಗ್ಗೆ ಮಾತನಾಡಿ ಚಿತ್ರ ತಂಡದ ಶ್ರಮವನ್ನು ಶ್ಲಾಘಿಸಿದರು.
ಚಿತ್ರಕ್ಕೆ ದೀಪಕ್ ನಾಯಕ್ ಸಂಗೀತ, ಋತ್ವಿಕ್ ಮುರಳೀಧರ್ ಹಿನ್ನೆಲೆ ಸಂಗೀತ, ವಿಜೇತ್ ಚಂದ್ರ ಸಂಕಲನ, ಚೇತನ್ ಎ.ಡಿ.ಐ. ಹಾಗೂ ಶ್ಯಾಮ್ ರಾವ್ ನಗರಗದ್ದೆ ಛಾಯಾಗ್ರಹಣ ನೀಡಿದ್ದಾರೆ. ಲಹರಿ ಸಂಸ್ಥೆಯ ಸೋದರ ಸಂಸ್ಥೆಯಾದ ಎಂ.ಆರ್.ಟಿ. ಯೂಟ್ಯೂಬ್ ಚಾನೆಲ್ನಲ್ಲಿ ಚಿತ್ರದ ಟೀಸರ್ ಬಿಡುಗಡೆಗೊಂಡಿದೆ.

























