ದ್ವೇಷಕ್ಕೆ ವಿರಾಮ ಹೇಳುವ ‘ರಾಂಗ್ ವರ್ಡ್ಸ್’

ಸರ್ಕಾರ ಮುಂದಿಟ್ಟಿರುವ ಹೊಸ ಮಸೂದೆಯ ಕುರಿತಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ನಿರ್ಮಿಸಲಾದ ‘ರಾಂಗ್ ವರ್ಡ್ಸ್’ ವಿಡಿಯೋ ಆಲ್ಬಂ ಇತ್ತೀಚೆಗೆ ರೇಣುಕಾಂಬ ಸ್ಟುಡಿಯೋದಲ್ಲಿ ಅದ್ದೂರಿಯಾಗಿ ಬಿಡುಗಡೆಗೊಂಡಿತು. ರ‍್ಯಾಡಿಕಲ್ ಕಾನ್ಸೆಪ್ಟ್ ಸ್ಟುಡಿಯೋ ನಿರ್ಮಾಣ ಜವಾಬ್ದಾರಿಯನ್ನು ವಹಿಸಿಕೊಂಡಿದೆ.

ಬೆಂಗಳೂರು ಮೂಲದ ಯುವ ಪ್ರತಿಭೆ ನಹೇಶ್ ಪೂಲ್ ಈ ಐದು ನಿಮಿಷಗಳ ಗೀತೆಯ ಕೇಂದ್ರ ಬಿಂದುವಾಗಿದ್ದು, ವೃತ್ತಿಯಲ್ಲಿ ಆಟೋಮೊಬೈಲ್ ಇಂಜಿನಿಯರ್ ಆಗಿರುವ ಅವರು ಪ್ರವೃತ್ತಿಯಿಂದ ಚಲನಚಿತ್ರ ನಿರ್ಮಾಪಕರಾಗಿದ್ದಾರೆ. ಗೀತೆಗೆ ಸಾಹಿತ್ಯ, ಸಂಗೀತ, ನಿರ್ದೇಶನ ಜತೆಗೆ ತಾವೇ ಅಭಿನಯಿಸಿರುವುದು ವಿಶೇಷವಾಗಿದೆ.

ಬಿಡುಗಡೆ ವೇಳೆ ಮಾತನಾಡಿದ ನಹೇಶ್ ಪೂಲ್, ದ್ವೇಷ ಭಾಷಣ ಹಾಗೂ ದ್ವೇಷ ಅಪರಾಧಗಳಿಗೆ ಸಂಬಂಧಿಸಿದಂತೆ ಸರ್ಕಾರ ಇತ್ತೀಚೆಗೆ ಹೊರಡಿಸಿರುವ ಮಸೂದೆಯ ಬಗ್ಗೆ ಜನರಲ್ಲಿ ಸಾಕಷ್ಟು ಅರಿವು ಇಲ್ಲದಿರುವುದನ್ನು ಗಮನಿಸಿ ಈ ಗೀತೆಯನ್ನು ರೂಪಿಸಿದ್ದಾಗಿ ತಿಳಿಸಿದರು. ತಪ್ಪು ಪದಗಳ ಬಳಕೆ ಸಮಾಜದ ಮೇಲೆ ಬೀರುವ ಪರಿಣಾಮಗಳನ್ನು ಹಾಡಿನ ಮೂಲಕ ಜನರಿಗೆ ತಲುಪಿಸುವ ಪ್ರಯತ್ನ ಮಾಡಲಾಗಿದೆ ಎಂದರು.

ಇದೇ ವೇಳೆ ಜನರಿಗೆ ಮಾದರಿಯಾಗುವ ರಸ್ತೆ ನಿರ್ಮಾಣ ಯೋಜನೆಯ ಕನಸನ್ನು ಹಂಚಿಕೊಂಡ ಅವರು, ವಿಧಾನಸೌದ ಮೆಟ್ಟಿಲುಗಳ ಬಳಿಯಿಂದ ಪ್ರತಿಯೊಂದು ಹಂತವನ್ನು ನೇರ ಪ್ರಸಾರದಲ್ಲಿ ಪ್ರದರ್ಶಿಸಿ ಪಾರದರ್ಶಕವಾಗಿ ರಸ್ತೆ ನಿರ್ಮಿಸುವ ಗುರಿ ಹೊಂದಿರುವುದಾಗಿ ಹೇಳಿದರು. ಈ ಸಂಬಂಧ ವಿಧಾನಸೌದ ಮುಂಭಾಗ ಒಂದು ದಿನ ಚಿತ್ರೀಕರಣ ನಡೆಸಲಾಗಿದೆ ಎಂದರು.

ಈ ವಿಡಿಯೋ ಆಲ್ಬಂಗೆ ಅಕ್ಷರಾ ಸುರೇಶ್ ಕ್ರಿಯೇಟಿವ್ ಮುಖ್ಯಸ್ಥೆಯಾಗಿದ್ದು, ಸಾಗರ್ ಛಾಯಾಗ್ರಹಣ ಹಾಗೂ ಸಂಕಲನ ಕಾರ್ಯ ವಹಿಸಿಕೊಂಡಿದ್ದಾರೆ.