Home ಜಿಲ್ಲೆ ಮಂಗಳೂರು ದರ್ಬೆವೃತ್ತಕ್ಕೆ ಅಂಬೇಡ್ಕರ್ ಹೆಸರು-ಮುಗಿಯದ ಸಬೂಬು; -ದಲಿತ ಸಂಘಟನೆ ಮುಖಂಡರ ಆಕ್ರೋಶ

ದರ್ಬೆವೃತ್ತಕ್ಕೆ ಅಂಬೇಡ್ಕರ್ ಹೆಸರು-ಮುಗಿಯದ ಸಬೂಬು; -ದಲಿತ ಸಂಘಟನೆ ಮುಖಂಡರ ಆಕ್ರೋಶ

ಪುತ್ತೂರು; ಹಲವು ವರ್ಷಗಳಿಂದ ದರ್ಬೆ ವೃತ್ತಕ್ಕೆ ಡಾ.ಬಿ.ಆರ್. ಅಂಬೇಡ್ಕರ್ ಅವರ ಹೆಸರು ಇಡಬೇಕೆಂದು ದಲಿತ ಸಂಘಟನೆಗಳು ಹೋರಾಟ ನಡೆಸುತ್ತಿವೆ. ನಗರಸಭೆಯ ಅಧಿಕಾರಿಗಳಲ್ಲಿ ಕೇಳಿದರೆ ಪ್ರಕರಣ ನ್ಯಾಯಾಲಯದಲ್ಲಿದೆ ಎಂದು ಸಬೂಬು ಹೇಳುತ್ತಿದ್ದಾರೆ. ಪ್ರತಿ ಸಭೆಯಲ್ಲಿ ಕೇಳಿದರೂ ಇದೇ ಜವಾಬು. ನಾವೇನು ಕೆಲಸ ಇಲ್ಲದೆ ಇಲ್ಲಿಗೆ ಬರುವುದಲ್ಲ. ಕೇವಲ ಕಾಟಾಚಾರದ ಮಾತುಗಳನ್ನು ಕೇಳಲು ಬರುವುದಲ್ಲ. ಸ್ಪಷ್ಟ ಉತ್ತರ ಕೊಡಿ ಎಂದು ದಲಿತಸಂಘಟನೆಯ ಮುಖಂಡರು ಆಕ್ರೋಶ ವ್ಯಕ್ತಪಡಿಸಿದರು.
ಸೋಮವಾರ ತಾಪಂ ಸಭಾಂಗಣದಲ್ಲಿ ನಡೆದ ಎಸ್‌ಸಿ-ಎಸ್‌ಟಿ ಕುಂದುಕೊರತೆ ನಿವಾರಣಾ ಸಭೆ ತಹಶೀಲ್ದಾರ್ ಎಸ್.ಬಿ.ಕೂಡಲಗಿ ಅಧ್ಯಕ್ಷತೆಯಲ್ಲಿ ನಡೆಯಿತು.
ವಿಷಯ ಪ್ರಸ್ತಾಪಿಸಿದ ಸೇಸಪ್ಪ ನೆಕ್ಕಿಲು, ಕೊರಗಪ್ಪ ಹಾಗೂ ಅಣ್ಣಪ್ಪ ಕಾರೆಕ್ಕಾಡು ದರ್ಬೆವೃತ್ತಕ್ಕೆ ಅಂಬೇಡ್ಕರ್ ಹೆಸರು ಇಡಬೇಕು ಎಂಬ ಆಶಯದಿಂದ ನಾವು ಹೋರಾಟ ನಡೆಸುತ್ತಿದ್ದೇವೆ. ಸಭೆಯಲ್ಲಿ ಈ ಪ್ರತೀ ಬಾರಿಯೂ ಒಂದೇ ಉತ್ತರ ಕೇಳಿ ಸಾಕಾಗಿದೆ. ಸಭೆಗೆ ಬರುವಾಗ ಸರಿಯಾದ ಮಾಹಿತಿ ನೀಡಿ ಎಂದು ಆಗ್ರಹಿಸಿದರು. ಈ ಬಗ್ಗೆ ಉತ್ತರಿಸಿದ ಪೌರಾಯುಕ್ತೆ ವಿದ್ಯಾ ಕಾಳೆ ಅವರು ಈ ಬಗ್ಗೆ ಈಗಾಗಲೇ ಉಚ್ಛನ್ಯಾಯಾಲಯಕ್ಕೆ ವಕೀಲರ ಮುಖಾಂತರ ವಕಾಲತ್ತು ಸಲ್ಲಿಸಲಾಗಿದೆ. ಈ ಹಿನ್ನಲೆಯಲ್ಲಿ ಪ್ರಕರಣದ ಮಾಹಿತಿಯನ್ನು ಸಭೆಯ ಮುಂದಿಡಲು ಆಗುತ್ತಿಲ್ಲ ಎಂದು ತಿಳಿಸಿದರು.
ನಗರದ ಸಿಂಗಾಣಿಯಲ್ಲಿ ಪ್ರದೇಶದಲ್ಲಿ ಮುಸ್ಲಿಂ ಮಹಿಳೆಯೊಬ್ಬರು ಹಣದ ಆಮಿಷ ತೋರಿಸಿ ಪರಿಶಿಷ್ಟಜಾತಿಯ ಕುಟುಂಬವನ್ನು ಎಬ್ಬಿಸಿ ತಾನು ಮನೆ ಕಟ್ಟಿದ್ದಾರೆ. ಇಲ್ಲಿ ಇವರು ಸೇರಿದಂತೆ ಇಬ್ಬರು ಮುಸ್ಲಿಂ ಮಹಿಳೆಯರು ತಾತ್ಕಾಲಿಕ ಶೆಡ್ ನಿರ್ಮಿಸಿದ್ದಾರೆ. ಯಾವುದೇ ರಾಜಕೀಯದ ಒತ್ತಡಕ್ಕೆ ಮಣಿಯದೆ ಈ ಜಾಗವನ್ನು ಪರಿಶಿಷ್ಟ ಜಾತಿಯವರಿಗೆ ನೀಡಬೇಕು ಎಂದು ಅಣ್ಣಪ್ಪ ಕಾರೆಕ್ಕಾಡು ಆಗ್ರಹಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಅವರು ಪೌರಾಯುಕ್ತರೊಂದಿಗೆ ಸ್ಥಳ ತನಿಖೆ ನಡೆಸಿ ಕ್ರಮಕೈಗೊಳ್ಳುವುದಾಗಿ ತಿಳಿಸಿದರು.
ಬೆಟ್ಟಂಪಾಡಿಯಲ್ಲಿ ೧೩ ಮನೆಗಳಿಗೆ ರಸ್ತೆ ಸಂಪರ್ಕ ಇಲ್ಲದೆ ತೊಂದರೆಯಾಗುತ್ತಿದ್ದ ಸಮಯದಲ್ಲಿ ರಸ್ತೆ ನಿರ್ಮಿಸಲಾಗಿದೆ. ಅದಕ್ಕೆ ನನ್ನ ಮತ್ತು ಇತರರ ಮೇಲೆ ಕ್ರಿಮಿನಲ್ ಪ್ರಕರಣ ದಾಖಲಿಸಿದ್ದಾರೆ. ಆದರೆ ಇದೇ ಭಾಗದಲ್ಲಿ ೧೨ ಎಕರೆ ಸರ್ಕಾರಿ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡು ಗೇರುಕೃಷಿ ನಡೆಸುತ್ತಿದ್ದಾರೆ. ಅವರ ಮೇಲೆ ಏನುಕ್ರಮ ಕೈಗೊಳ್ಳಲಾಗಿದೆ. ಇಲ್ಲಿನ ನಿವಾಸಿ ಒಬ್ಬಂಟಿ ಮಹಿಳೆಗೆ ಈ ತನಕವೂ ಶೌಚಾಲಯ ಇಲ್ಲ. ಬಡವರಿಗೊಂದು ನ್ಯಾಯ.ಶ್ರೀಮಂತರಿಗೊಂದು ನ್ಯಾಯ ಮಾಡುತ್ತಿದ್ದೀರಿ ಎಂದು ಆರೋಪಿಸಿದರು. ಇದಕ್ಕೆ ಉತ್ತರಿಸಿದ ತಹಶೀಲ್ದಾರ್ ಈ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದರು. ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಅವರು ಶೌಚಾಲಯ ಇಲ್ಲದ ಮನೆಗೆ ಗ್ರಾಪಂ ಮೂಲಕ ಶೌಚಾಲಯದ ವ್ಯವಸ್ಥೆ ಮಾಡಲಾಗುವುದು ಎಂದರು.
ಅಂಗನವಾಡಿಯಲ್ಲಿ ಕೆಲಸ ಮಾಡುವ ಪರಿಶಿಷ್ಟಜಾತಿ ಮತ್ತು ಪಂಗಡಕ್ಕೆ ಸೇರಿದ ಸಹಾಯಕರಿಗೆ ಮೇಲ್ವರ್ಗದ ಜನರಿಂದ ತೊಂದರೆಯಾಗುತ್ತಿದೆ. ಅಂಗನವಾಡಿಗಳಿಗೆ ಮಕ್ಕಳನ್ನು ಕಳುಹಿಸುತ್ತಿಲ್ಲ. ಅವರು ಬೇಯಿಸಿದ ಆಹಾರವನ್ನು ಮಕ್ಕಳು ಸ್ವೀಕರಿಸದಂತೆ ತಡೆಯಲಾಗುತ್ತಿದೆ. ಈ ಬಗೆ ಗಂಭೀರವಾಗಿ ಪರಿಗಣಿಸಬೇಕು ಎಂದು ಅಣ್ಣಪ್ಪ ಕಾರೆಕ್ಕಾಡು ಮತ್ತು ಸೇಸಪ್ಪ ನೆಕ್ಕಿಲು ಆಗ್ರಹಿಸಿದರು.
ವೇದಿಕೆಯಲ್ಲಿ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಕುಮಾರ್ ಭಂಡಾರಿ, ಸಮಾಜಕಲ್ಯಾಣ ಇಲಾಖೆಯ ಸಹಾಯಕ ನಿರ್ದೇಶಕಿ ಸುನೀತಾ ಹಾಗೂ ಪೌರಾಯುಕ್ತೆ ವಿದ್ಯಾ ಎಸ್ ಕಾಳೆ ಉಪಸ್ಥಿತರಿದ್ದರು.