ಖ್ಯಾತ ಶಿಲ್ಪಿ ರಾಮ್ ಸುತಾರ್ ನಿಧನ

ನೋಯ್ಡಾ,ಡಿ.೧೮- ವಿಶ್ವದ ಅತಿ ಎತ್ತರದ ಪ್ರತಿಮೆಯಾದ ಏಕತಾ ಪ್ರತಿಮೆಯನ್ನು ನಿರ್ಮಿಸಿದ ಪ್ರಸಿದ್ಧ ಶಿಲ್ಪಿ ರಾಮ್ ಸುತಾರ್ ಅವರು ನೋಯ್ಡಾದ ಸೆಕ್ಟರ್ ೧೯ ರಲ್ಲಿರುವ ತಮ್ಮ ನಿವಾಸದಲ್ಲಿ ದೀರ್ಘಕಾಲದ ಅನಾರೋಗ್ಯದ ನಂತರ ನಿಧನರಾಗಿದ್ದಾರೆ. ೧೦೦ ವರ್ಷ ವಯಸ್ಸಿನ ರಾಮ್ ಸುತಾರ್ ಅವರ ಅಂತ್ಯಕ್ರಿಯೆ ಗುರುವಾರ ಸೆಕ್ಟರ್ ೯೪ ರಲ್ಲಿ ನಡೆಯಲಿದೆ.


ಅವರಿಗೆ ಪದ್ಮಶ್ರೀ, ಪದ್ಮಭೂಷಣ ಮತ್ತು ಪದ್ಮವಿಭೂಷಣ ಪ್ರಶಸ್ತಿಗಳನ್ನು ನೀಡಲಾಗಿದೆ. ರಾಮ್ ಸುತಾರ್ ಅವರ ಸಾವಿನ ಬಗ್ಗೆ ಅವರ ಮಗ ಅನಿಲ್ ಸುತಾರ್ ಮಾಹಿತಿ ನೀಡಿದ್ದಾರೆ. ಅವರು ಸ್ವತಃ ಶಿಲ್ಪಿ ಮತ್ತು ತಮ್ಮ ತಂದೆಯ ಪರಂಪರೆಯನ್ನು ಮುಂದುವರಿಸುತ್ತಿದ್ದಾರೆ. ಏಕತಾ ಪ್ರತಿಮೆಯ ಜೊತೆಗೆ, ರಾಮ್ ಸುತಾರ್ ಹಲವಾರು ಪ್ರಸಿದ್ಧ ಪ್ರತಿಮೆಗಳನ್ನು ರಚಿಸಿದ್ದಾರೆ. ಅವರು ಪ್ರಪಂಚದಾದ್ಯಂತ ಸ್ಥಾಪಿಸಲಾದ ಮಹಾತ್ಮ ಗಾಂಧಿಯವರ ೩೫೦ ಕ್ಕೂ ಹೆಚ್ಚು ಪ್ರತಿಮೆಗಳನ್ನು ರಚಿಸಿದ್ದಾರೆ.


ಅವರು ಬಾಬಾ ಸಾಹೇಬ್ ಭೀಮರಾವ್ ಅಂಬೇಡ್ಕರ್ ಅವರ ಹಲವಾರು ಪ್ರತಿಮೆಗಳನ್ನು ಸಹ ರಚಿಸಿದ್ದಾರೆ. ಪುಣೆಯಲ್ಲಿರುವ ಛತ್ರಪತಿ ಸಂಭಾಜಿ ಮಹಾರಾಜರ ೧೦೦ ಅಡಿ ಎತ್ತರದ ಪ್ರತಿಮೆಯೂ ಅವರ ಗಮನಾರ್ಹ ಕೃತಿಗಳಲ್ಲಿ ಒಂದಾಗಿದೆ. ಕಳೆದ ನವೆಂಬರ್‌ನಲ್ಲಿ ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಅವರು ರಾಮ್ ಸುತಾರ್ ಅವರಿಗೆ ರಾಜ್ಯದ ಅತ್ಯುನ್ನತ ನಾಗರಿಕ ಗೌರವವಾದ ಮಹಾರಾಷ್ಟ್ರ ಭೂಷಣವನ್ನು ಪ್ರದಾನ ಮಾಡಿದ್ದಾರೆ. ಅವರು ತಮ್ಮ ಸಂಪುಟದ ಸದಸ್ಯರೊಂದಿಗೆ ನೋಯ್ದಾಗೆ ವೈಯಕ್ತಿಕವಾಗಿ ಪ್ರಯಾಣ ಬೆಳೆಸಿ ಅವರ ಮನೆಯಲ್ಲಿ ಅವರನ್ನು ಸನ್ಮಾನಿಸಿದ್ದಾರೆ.

ಫೆಬ್ರವರಿ ೧೯, ೧೯೨೫ ರಂದು ಮಹಾರಾಷ್ಟ್ರದ ಗೊಂಡೂರ್ ಗ್ರಾಮದಲ್ಲಿ ಬಡ ಕುಟುಂಬದಲ್ಲಿ ಜನಿಸಿದ ರಾಮ್ ಸುತಾರ್ ನೋಯ್ದಾದಲ್ಲಿ ತಮ್ಮ ಸ್ಟುಡಿಯೋವನ್ನು ಸ್ಥಾಪಿಸಿದ್ದಾರೆ. ಮತ್ತು ೧೯೯೦ ರಿಂದ ಅಲ್ಲಿ ವಾಸಿಸುತ್ತಿದ್ದರು. ಅಜಂತಾ-ಎಲ್ಲೋರಾ ಗುಹೆಗಳಲ್ಲಿನ ಅನೇಕ ಪ್ರಾಚೀನ ಶಿಲ್ಪಗಳ ಪುನಃಸ್ಥಾಪನೆಯಲ್ಲಿ ಅವರು ಪ್ರಮುಖ ಪಾತ್ರ ವಹಿಸಿದ್ದಾರೆ. ಸಂಸತ್ ಭವನದಲ್ಲಿ ಮಹಾತ್ಮ ಗಾಂಧಿಯವರ ಪ್ರತಿಮೆ, ೨೫೧ ಮೀಟರ್ ಎತ್ತರದ ಶ್ರೀರಾಮನ ಪ್ರತಿಮೆ ಮತ್ತು ಅಯೋಧ್ಯೆಯ ಲತಾ ಮಂಗೇಷ್ಕರ್ ಚೌಕದಲ್ಲಿರುವ ವೀಣೆಯನ್ನು ರಾಮ್ ಸುತಾರ್ ವಿನ್ಯಾಸಗೊಳಿಸಿದ್ದಾರೆ.ರಾಮ ಸುತಾರ ನಿಧಾನಕ್ಕೆ ಗಣ್ಯರ, ಅಭಿಮಾನಿಗಳ ಸಂತಾಪದ ಮಹಾಪೂರವೇ ಹರಿದು ಬಂದಿದೆ.