
ಉಳ್ಳಾಲ-ಇಲ್ಲಿನ ಕೋಟೆಪುರದಲ್ಲಿರುವ ಮೀನಿನ ಆಹಾರ ತಯಾರಿಕ ಸಂಸ್ಕರಣಾ ಘಟಕದ ಗೋದಾಮು ಬೆಂಕಿಗೆ ಆಹುತಿಯಾಗಿದ್ದು, ಲಕ್ಷಾಂತರ ರೂ. ನಷ್ಟ ಉಂಟಾಗಿದೆ. ಖಾದರ್ ಎಂಬವರಿಗೆ ಸೇರಿದ ಎಂಎಂಪಿ ಫಿಶ್ ಫುಡ್ ಗೋದಾಮಿಗೆ ಬೆಂಕಿ ಅವಘಢಕ್ಕೆ ಒಳಗಾಗಿದೆ. ಸಂಜೆ ವೇಳೆ ಗೋದಾಮಿನ ಒಳಕ್ಕೆ ಬೆಂಕಿ ಕಾಣಿಸಿಕೊಂಡು ಒಮ್ಮಿಂದೊಮ್ಮೆಲೇ ಸುತ್ತಲೂ ಹರಿದಾಡಿದೆ. ಬೆಂಕಿಯ ಕೆನ್ನಾಲೆ ಹೊರಗೂ ಆವರಿಸಿದ್ದು, ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ನೀರು ಎರಚಿ ಬೆಂಕಿ ನಂದಿಸಲು ಯತ್ನಿಸಿದ್ದಾರೆ.
ಬಳಿಕ ತುಂಬಾ ಹೊತ್ತಿನ ನಂತರ ಮಂಗಳೂರಿನಿಂದ ಅಗ್ನಿ ಶಾಮಕ ದಳದ ವಾಹನ ಬಂದು ಬೆಂಕಿ ನಂದಿಸುವ ಕಾರ್ಯಕ್ಕೆ ಮುಂದಾಗಿದೆ. ಉಳ್ಳಾಲ ಪೊಲೀಸರು ಸ್ಥಳದಲ್ಲಿದ್ದರು. ಕೋಟ್ಯಂತರ ವ್ಯವಹಾರ ನಡೆಸುವ ೧೪ ಫಿಶ್ ಫುಡ್ ಮತ್ತು ಆಯಿಲ್ ಮಿಲ್ ಗಳಲ್ಲಿ ಸುರಕ್ಷತಾ ಕ್ರಮಗಳನ್ನೇ ಅನುಸರಿಸುತ್ತಿಲ್ಲ. ಆಂಬ್ಯುಲೆನ್ಸ್ ಆಗಲಿ ಅಗ್ನಿ ಶಾಮಕದಳದ ವಾಹನಗಳಾಗಲಿ ಯಾವುದೇ ಸ್ಥಳದಲ್ಲಿರುವುದಿಲ್ಲ.
ಘಟನೆ ಸಂಭವಿಸಿದಾಗ ಮಂಗಳೂರಿನಿಂದ ಬರಬೇಕಾಗಿದೆ, ಸ್ವಲ್ಪ ಎಚ್ಚರಿಕೆ ತಪ್ಪಿದರೂ ಸ್ಥಳದಲ್ಲಿ ವಾಸಿಸುವ ಸಾವಿರಾರು ಮನೆಗೂ ಅಪಾಯ ಕಟ್ಟಿಟ್ಟ ಬುತ್ತಿ. ಹೈಟೆನ್ಷನ್ ವಿದ್ಯುತ್ ತಂತಿಯೂ ನೆಲದಡಿಯಿಂದ ಹಾದುಹೋಗಿದೆ. ೧೪ ಫಿಶ್ ಮಿಲ್ ಗಳಿದ್ದರೂ ಆಂಬ್ಯುಲೆನ್ಸ್ ಗಳಾಗಲಿ, ಅಗ್ನಿ ಶಾಮಕ ದಳಗಳಂತಹ ಮೂಲಭೂತ ಸುರಕ್ಷಾ ಕ್ರಮಗಳಿಲ್ಲದೆ ಸಾರ್ವಜನಿಕರನ್ನು ಅಪಾಯದಲ್ಲಿರಿಸಿ ಘಟಕಗಳು ಕಾರ್ಯಾಚರಿಸುತ್ತಿದೆ ಅನ್ನುವ ಆರೋಪವನ್ನು ಸ್ಥಳಿಯರು ಮಾಡಿದ್ದಾರೆ.