Home ಜಿಲ್ಲೆ ಮೈಸೂರು ಒಳಮೀಸಲಾತಿ ಹೆಸರಿನಲ್ಲಿ ಪರಿಶಿಷ್ಟ ಜಾತಿಗಳನ್ನು ಒಡೆಯುವ ನೀತಿ: ಕೃಷ್ಣಮೂರ್ತಿ ಆರೋಪ

ಒಳಮೀಸಲಾತಿ ಹೆಸರಿನಲ್ಲಿ ಪರಿಶಿಷ್ಟ ಜಾತಿಗಳನ್ನು ಒಡೆಯುವ ನೀತಿ: ಕೃಷ್ಣಮೂರ್ತಿ ಆರೋಪ

ಸಂಜೆವಾಣಿ ವಾರ್ತೆ
ಮಳವಳ್ಳಿ.ಮಾ.16:-
ವರದಿ ಒಳಮೀಸಲಾತಿ ಹೆಸರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ಉದ್ದೇಶಪೂರ್ವಕವಾಗಿ ಪರಿಶಿಷ್ಟ ಜಾತಿಗಳನ್ನು ಒಡೆಯುವ ನೀತಿಯನ್ನು ಅನುಸರಿಸಿದೆ ಎಂದು ಬಹುಜನ ಸಮಾಜ ಪಕ್ಷದ (ಬಿಎಸ್ಪಿ) ರಾಜ್ಯಾಧ್ಯಕ್ಷ ಎಂ. ಕೃಷ್ಣಮೂರ್ತಿ ಆರೋಪಿಸಿದರು.


ಪಟ್ಟಣದ ಡಾ. ಬಿ.ಆರ್. ಅಂಬೇಡ್ಕರ್ ಪುತ್ಥಳಿ ಆವರಣದಲ್ಲಿ ಬಹುಜನ ಸಮಾಜ ಪಕ್ಷದ ಸಂಸ್ಥಾಪಕರಾದ ಕಾನ್ಶಿರಾಂ ಜೀ ಅವರ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ಬಹುಜನ ದಿವಸ್ ಜಾಗೃತಿ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಪರಿಶಿಷ್ಟ ಜಾತಿಯ ಒಂದು ಪಂಗಡ ಒಳಮೀಸಲಾತಿಗಾಗಿ ಕಳೆದ 35 ವರ್ಷಗಳಿಂದ ಹೋರಾಟ ನಡೆಸುತ್ತಿದೆ. ಈ ವಿಚಾರವಾಗಿ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರ್ಕಾರ ನ್ಯಾಯಮೂರ್ತಿ ನಾಗಮೋಹನ್ ದಾಸ್ ಅವರ ನೇತೃತ್ವದಲ್ಲಿ ಸಮಿತಿಯನ್ನು ರಚಿಸಿತ್ತು. ಆದರೆ ಅವೈಜ್ಞಾನಿಕ ರೋಸ್ಟರ್ ವ್ಯವಸ್ಥೆ ಅಳವಡಿಸಿ ಪರಿಶಿಷ್ಟ ಜಾತಿಗಳಲ್ಲಿ ಗೊಂದಲ ಉಂಟುಮಾಡಿದೆ ಎಂದು ಅವರು ಹೇಳಿದರು.


ಎಸ್ಸಿ-ಎಸ್ಟಿ ಸಮುದಾಯಗಳಿಗಾಗಿ ಮೀಸಲಾಗಿದ್ದ ಸುಮಾರು 53 ಸಾವಿರ ಕೋಟಿ ಹಣವನ್ನು ಬೇರೆ ಯೋಜನೆಗಳಿಗೆ ದುರುಪಯೋಗ ಮಾಡಲಾಗುತ್ತಿದೆ. ಇದರ ಕುರಿತು ಮಳವಳ್ಳಿ ಕ್ಷೇತ್ರದ ಶಾಸಕ ಪಿ.ಎಂ. ನರೇಂದ್ರಸ್ವಾಮಿ ಸೇರಿದಂತೆ ಕಾಂಗ್ರೆಸ್ ದಲಿತ ಶಾಸಕರೂ ಮಾತನಾಡುತ್ತಿಲ್ಲ ಎಂದು ಅವರು ಟೀಕಿಸಿದರು. ಇಂತಹ ದಲಿತ ವಿರೋಧಿ ನೀತಿಗಳನ್ನು ಅನುಸರಿಸುವ ಕಾಂಗ್ರೆಸ್ ಪಕ್ಷಕ್ಕೆ ಮುಂದಿನ ದಿನಗಳಲ್ಲಿ ತಕ್ಕ ಪಾಠ ಕಲಿಸಬೇಕು ಎಂದು ಹೇಳಿದರು.
ಕೇಂದ್ರದಲ್ಲಿ ಆಡಳಿತ ನಡೆಸುತ್ತಿರುವ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವೂ ಧರ್ಮದ ಆಧಾರದ ಮೇಲೆ ದೇಶವನ್ನು ಒಡೆಯುತ್ತಿದೆ. ಮೋದಿ ಅಧಿಕಾರಕ್ಕೆ ಬಂದಾಗ ನೀಡಿದ ಭರವಸೆಗಳನ್ನು ಈಡೇರಿಸಿಲ್ಲ. ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಅಂಬೇಡ್ಕರ್ ಮತ್ತು ಸಂವಿಧಾನ ವಿರೋಧಿ ನೀತಿಗಳನ್ನು ಅನುಸರಿಸುತ್ತಿದ್ದು, ಜಾತಿ ಹಾಗೂ ಧರ್ಮದ ಹೆಸರಿನಲ್ಲಿ ಸಮಾಜವನ್ನು ವಿಭಜಿಸುತ್ತಿವೆ ಎಂದು ಆರೋಪಿಸಿದರು.


ಡಾ. ಬಿ.ಆರ್. ಅಂಬೇಡ್ಕರ್ ನಂತರ ಶೋಷಿತ ಸಮುದಾಯಗಳಿಗೆ ರಾಜಕೀಯ ಅಧಿಕಾರ ದೊರಕಿಸಲು ಜಾಗೃತಿ ಮೂಡಿಸಿದ ಮಹಾನ್ ನಾಯಕ ದಾದಾಸಾಹೇಬ್ ಕಾನ್ಶಿರಾಂ ಜೀ ಎಂದು ಅವರು ಹೇಳಿದರು. ಉತ್ತರ ಪ್ರದೇಶದಂತಹ ದೊಡ್ಡ ರಾಜ್ಯದಲ್ಲಿ ಬಹುಜನ ಸಮಾಜ ಪಕ್ಷವನ್ನು ಕಟ್ಟಿ, ಅಕ್ಕ ಮಾಯಾವತಿಯನ್ನು ನಾಲ್ಕು ಬಾರಿ ಮುಖ್ಯಮಂತ್ರಿಯಾಗಿ ಮಾಡಿದ್ದು ಅವರ ಸಾಧನೆ ಎಂದು ಸ್ಮರಿಸಿದರು. ರಾಜ್ಯದಲ್ಲಿಯೂ ಬಿಎಸ್ಪಿಯನ್ನು ಬಲಪಡಿಸುವ ಮೂಲಕ ಅಧಿಕಾರ ಪಡೆಯೋಣ ಎಂದು ಕರೆ ನೀಡಿದರು.
ಬಿಎಸ್ಪಿ ರಾಜ್ಯ ಉಪಾಧ್ಯಕ್ಷ ಜಾಕೀರ್ ಹುಸೇನ್ ಮಾತನಾಡಿ, ಮಾರಾಟವಾಗದ ಮತದಾರರನ್ನು ಸೃಷ್ಟಿಸುವ ಮೂಲಕ ಬೇಡುವ ಸಮಾಜವನ್ನು ನೀಡುವ ಸಮಾಜವನ್ನಾಗಿ ಮಾಡುವ ಪ್ರಯತ್ನವನ್ನು ಕಾನ್ಶಿರಾಂ ಜೀ ಮಾಡಿದ್ದಾರೆ. ಮಳವಳ್ಳಿ ಕ್ಷೇತ್ರದ ಮುಸ್ಲಿಂ ಬಾಂಧವರು ಮತ್ತು ದಲಿತರು ಪ್ರಬುದ್ಧ ನಾಯಕತ್ವ ಹೊಂದಿರುವ ಬಹುಜನ ಸಮಾಜ ಪಕ್ಷಕ್ಕೆ ಬೆಂಬಲ ನೀಡಬೇಕು ಎಂದು ಹೇಳಿದರು.


ರಾಜ್ಯ ಉಸ್ತುವಾರಿ ಗಂಗಾಧರ್ ಬಹುಜನ್ ಮಾತನಾಡಿ, ಬಹುಜನ ಸಮಾಜವನ್ನು ಕಟ್ಟುವ ಮೂಲಕ ಮತದಾನದ ಮಹತ್ವವನ್ನು ಜನರಿಗೆ ತಿಳಿಸಿ ಮಾರಾಟವಾಗದ ಮತದಾರರನ್ನು ರೂಪಿಸುವ ಕಾರ್ಯವನ್ನು ಕಾನ್ಶಿರಾಂ ಜೀ ಮಾಡಿದ್ದಾರೆ ಎಂದು ಹೇಳಿದರು. ಮನುವಾದಿ ಪಕ್ಷಗಳು ಸಮಾಜವನ್ನು ವಿಭಜಿಸಿ ಆಡಳಿತ ನಡೆಸುವ ಕುಯುಕ್ತಿಯನ್ನು ಜನರು ಅರಿತುಕೊಳ್ಳಬೇಕೆಂದು ಅವರು ತಿಳಿಸಿದರು.


ರಾಜ್ಯ ಉಸ್ತುವಾರಿ ಹ.ರಾ. ಮಹೇಶ್ ಮಾತನಾಡಿ, ಬಹುಜನ ಚಳುವಳಿಯ ಮೂಲಕ ಶಾಹು ಮಹಾರಾಜ, ನಾಲ್ವಡಿ ಕೃಷ್ಣರಾಜ ಒಡೆಯರ್, ಜ್ಯೋತಿರಾವ್ ಫುಲೆ, ಸಾವಿತ್ರಿಬಾಯಿ ಫುಲೆ, ನಾರಾಯಣ ಗುರು ಮತ್ತು ಪೆರಿಯಾರ್ ಅವರ ಇತಿಹಾಸವನ್ನು ಜಗತ್ತಿಗೆ ಪರಿಚಯಿಸಲಾಗಿದೆ ಎಂದು ಹೇಳಿದರು.
ರಾಜ್ಯ ಕಾರ್ಯದರ್ಶಿ ಸುಧಾ ಮಾತನಾಡಿ, ಸಮಾನತೆಯ ಸಂವಿಧಾನವನ್ನು ನೀಡಿದ ಡಾ. ಬಿ.ಆರ್. ಅಂಬೇಡ್ಕರ್ ಅವರ ಕನಸುಗಳನ್ನು ನನಸು ಮಾಡಲು ಕಾನ್ಶಿರಾಂ ಜೀ ತಮ್ಮ ಜೀವನವನ್ನೇ ಸಮರ್ಪಿಸಿದ್ದಾರೆ ಎಂದು ಹೇಳಿದರು.


ರಾಜ್ಯ ಉಸ್ತುವಾರಿಗಳಾದ ಹ.ರಾ ಮಹೇಶ, ಗಂಗಾಧರ್ ಬಹುಜನ್, ರಾಜ್ಯ ಉಪಾಧ್ಯಕ್ಷರು ಜಾಕೀರ್ ಹುಸೇನ್, ರಾಜ್ಯ ಕಾರ್ಯದರ್ಶಿ ನಾಗಯ್ಯ,ಜಾಕೀರ್ ಆಲಿ ಖಾನ್, ಮೈಸೂರು ವಲಯ ಉಸ್ತುವಾರಿ ಕೆ.ಟಿ ರಾಧಕೃಷ್ಣ, ಜಿಲ್ಲಾ ಅಧ್ಯಕ್ಷ ಶಿವ ಶಂಕರ್, ಪ್ರಧಾನ ಕಾರ್ಯದರ್ಶಿ ನವೀನ್ ಕುಮಾರ್, ಪ್ರಧಾನ ಕಾರ್ಯದರ್ಶಿ ಸುಧಾಕರ್,ಜಿಲ್ಲಾ ಸಂಯೋಜಕರು ಬೋರಯ್ಯ,ಜಿಲ್ಲಾ ಉಸ್ತುವಾರಿ ವೀರಭದ್ರಯ್ಯ,ಜಿಲ್ಲಾ ಕಾರ್ಯದರ್ಶಿ ಉಮೇಶ.ಎಸ್.ಮೌರ್ಯ,ಬಿಎಸ್ಪಿ ಮುಖಂಡರಾದ ದೌಲತ್ ಪಾಷಾ,ಮಾಯೀಗೌಡ,ಲೋಕೇಶಗೌಡ, ನಾಗರಾಜು,ಸುರೇಶ್,ಬಿ.ಡಿ ರಾಜೇಂದ್ರ,ಸಿದ್ದಲಿಂಗ ಮೂರ್ತಿಕೆ.ಜಿ,ದೇವರಾಜು. ಎನ್, ಅಶೋಕ,ಚನ್ನಪ್ಪ, ಪ್ರಮೋದ, ಗೋವಿಂದ, ಸಂತೋಷ ಮಹೇಶ್ ಹೆಚ್.ಮೌರ್ಯ, ಮಹಾಲಿಂಗ, ಆನಂದ್, ಶಿವ ಪ್ರಕಾಶ್, ಕೀರ್ತಿ, ತಮ್ಮಯ್ಯ, ಸಲೀಂ ಸೇರಿದಂತೆ ಇತರರು ಇದ್ದರು.