ಐದು ನಿಮಿಷಗಳಲ್ಲಿ ಐದು ಮಿಲಿಯನ್ ದಾಖಲೆ

42 ಮಿಲಿಯನ್ ವೀಕ್ಷಣೆಯತ್ತ ‘ಜನ ನಾಯಕನ್’ ಟ್ರೈಲರ್ ಅಬ್ಬರ

ತಲಪತಿ ವಿಜಯ್ ಅಭಿನಯದ ಬಹುನಿರೀಕ್ಷಿತ ಹಾಗೂ ಅಂತಿಮ ಚಿತ್ರವೆಂದು ಹೇಳಲಾಗುತ್ತಿರುವ ‘ಜನ ನಾಯಕನ್’ ಚಿತ್ರದ ಟ್ರೈಲರ್ ಇಡೀ ಇಂಟರ್ನೆಟ್ ಲೋಕವನ್ನು ಸಂಚಲನ ಸೃಷ್ಟಿಸಿತ್ತು. ಬಿಡುಗಡೆಯಾದ ಕೇವಲ ಐದು ನಿಮಿಷಗಳಲ್ಲಿ ಐದು ಮಿಲಿಯನ್‌ಗಿಂತ ಹೆಚ್ಚು ನೇರ ವೀಕ್ಷಣೆಗಳನ್ನು ಪಡೆದು ಟ್ರೈಲರ್ ಹೊಸ ದಾಖಲೆ ಬರೆದಿದೆ. ಒಟ್ಟಾರೆಯಾಗಿ ಗುರುವಾರಕ್ಕೆ 42 ಮಿಲಿಯನ್ ವೀಕ್ಷಣೆ ಕಂಡಿದೆ.

ಎರಡು ನಿಮಿಷ 52 ಸೆಕೆಂಡುಗಳ ಅವಧಿಯ ಈ ಟ್ರೈಲರ್‌ ಭರ್ಜರಿ ಸಾಹಸ ದೃಶ್ಯಗಳು, ರೋಮಾಂಚಕ ಸಂಗೀತ ಹಾಗೂ ಭಾವನಾತ್ಮಕ ಕ್ಷಣಗಳ ಸಂಯೋಜನೆಯೊಂದಿಗೆ ಪ್ರೇಕ್ಷಕರನ್ನು ಸೆಳೆದಿದೆ. ಚಿತ್ರದ ವೈಭವಯುತ ನಿರ್ಮಾಣ ಶೈಲಿ ಹಾಗೂ ವಿಜಯ್ ಅವರ ವಿಶೇಷ ಶೈಲಿ ಅಭಿಮಾನಿಗಳ ಮೆಚ್ಚುಗೆಗೆ ಪಾತ್ರವಾಗಿದ್ದು, ಇದು ಸಂಪೂರ್ಣ ಕುಟುಂಬ ಮನರಂಜನಾ ಚಿತ್ರವಾಗಲಿದೆ ಎಂಬ ನಿರೀಕ್ಷೆ ಮೂಡಿಸಿದೆ.

ಚಿತ್ರದಲ್ಲಿ ವಿಜಯ್ ಅವರೊಂದಿಗೆ ಪೂಜಾ ಹೆಗ್ಡೆ, ಬಾಬಿ ಡಿಯೋಲ್, ಮಮಿತಾ ಬೈಜು, ಗೌತಮ್ ವಾಸುದೇವ್ ಮೆನನ್, ಪ್ರಕಾಶ್ ರಾಜ್, ಪ್ರಿಯಾಮಣಿ ಹಾಗೂ ನರೇನ್ ಸೇರಿದಂತೆ ದೊಡ್ಡ ತಾರಾಗಣ ಕಾಣಿಸಿಕೊಂಡಿದೆ. ಎಚ್. ವಿನೋತ್ ನಿರ್ದೇಶನದ ಈ ಚಿತ್ರವನ್ನು ವೆಂಕಟ್ ಕೆ. ನಾರಾಯಣ (ಕೆವಿಎನ್) ನಿರ್ಮಿಸಿದ್ದಾರೆ. ಸತ್ಯನ್ ಸೂರ್ಯನ್ ಛಾಯಾಗ್ರಹಣ ಹಾಗೂ ಪ್ರದೀಪ್ ಇ. ರಾಘವ್ ಸಂಕಲನ ಚಿತ್ರಕ್ಕಿದೆ.

ಈ ಬಗ್ಗೆ ಮಾತನಾಡಿದ ನಿರ್ಮಾಪಕ ವೆಂಕಟ್ ಕೆ. ನಾರಾಯಣ, ಮಲೇಷ್ಯಾದಲ್ಲಿ ನಡೆದ ಆಡಿಯೋ ಬಿಡುಗಡೆಗೆ ಸಿಕ್ಕ ಅಪಾರ ಸ್ಪಂದನೆ ವಿಜಯ್ ಮತ್ತು ಅವರ ಅಭಿಮಾನಿಗಳ ನಡುವಿನ ಅಪೂರ್ವ ಬಾಂಧವ್ಯಕ್ಕೆ ಸಾಕ್ಷಿಯಾಗಿದೆ. ಟ್ರೈಲರ್ ಪಡೆದಿರುವ ಭರ್ಜರಿ ಪ್ರತಿಕ್ರಿಯೆ ಚಿತ್ರದ ಮೇಲಿನ ನಿರೀಕ್ಷೆಯನ್ನು ಮತ್ತಷ್ಟು ಹೆಚ್ಚಿಸಿದೆ ಎಂದರು.

‘ಜನ ನಾಯಕನ್’ ಚಿತ್ರವು ಪೊಂಗಲ್ ಹಬ್ಬದ ಅಂಗವಾಗಿ ಜನವರಿ 9, 2026ರಂದು ವಿಶ್ವಾದ್ಯಂತ ಬಿಡುಗಡೆಯಾಗಲಿದ್ದು, ವಿಜಯ್ ಅವರ ವೃತ್ತಿಜೀವನದ ಅಂತಿಮ ಚಿತ್ರವೆಂಬ ಕಾರಣಕ್ಕೆ ಅಭಿಮಾನಿಗಳಲ್ಲಿ ಭಾರೀ ಉತ್ಸಾಹ ಹಾಗೂ ಭಾವನಾತ್ಮಕ ನಿರೀಕ್ಷೆ ಮನೆಮಾಡಿದೆ.