ಅಂತಿಮ‌ ತೀರ್ಪಿನವರೆಗೆ ಜನಾರ್ಧನರೆಡ್ಡಿಯವರನ್ನುಬಿಜೆಪಿಯಿಂದ ಅಮಾನತಿಗೆ: ಟಪಾಲ್ ಮನವಿ


(ಸಂಜೆವಾಣಿ ಪ್ರತಿನಿಧಿಯಿಂದ)
ಬಳ್ಳಾರಿ:ಜೂ,14-
ಓಎಂಸಿ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಗಂಗಾವತಿ ಶಾಸಕ ಜನಾರ್ಧನರೆಡ್ಡಿಗೆ ಸಿಬಿಐ ನ್ಯಾಯಾಲಯದ ಶಿಕ್ಷೆಯನ್ನು ತೆಲಂಗಾಣ ಹೈ ಕೋರ್ಟ್ ಅಮಾನತ್ತು ಗೊಳಿಸಿದೆ. ಇದಕ್ಕೆ ನಮ್ಮ ವಿರೋಧವಿದೆ.
ಅಂತಿಮವಾಗಿ ಸುಪ್ರೀಂ ಕೋರ್ಟ್ ನಲ್ಲಿ ತೀರ್ಮಾನವಾಗುವವರೆಗೆ ಅವರನ್ನು ಬಿಜೆಪಿಯಿಂದ ಅಮಾನತುಗೊಳಿಸಬೇಕೆಂದು ಪಕ್ಷದ ರಾಷ್ಟ್ರೀಯ ಅಧ್ಯಕ್ಷ ನಡ್ಡಾ, ಪ್ರಧಾನ ಮಂತ್ರಿ ಮೋದಿ, ಗೃಹ ಸಚಿವ ಅಮಿತ್ ಶಾ ಅವರಿಗೆ ಟಪಾಲ್ ಗಣೇಶ್ ಪತ್ರ ಬರೆದಿದ್ದಾರೆ.
ನಾವು ನಮ್ಮ ತಂದೆ ಹಲವು ದಶಕಗಳಿಂದ ಬಳ್ಳಾರಿ ಮೀಸಲು ಅರಣ್ಯದಲ್ಲಿ ಮೈನಿಂಗ್ ನಡೆಸಿಕೊಂಡು ಬಂದಿತ್ತು. ಅದನ್ನು 2006ರಲ್ಲಿ ಒಬುಳಾಪುರಂ ಮೈನಿಂಗ್ ಕಂಪನಿ ಆಕ್ರಮಿಸಿಕೊಂಡಿತು. ನಮ್ಮ ತಂದೆ ಅವರು ಕಂಪನಿಯ ನಿರ್ದೇಶಕರ ವಿರುದ್ಧ ಸ್ಥಳೀಯ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಎಫ್‌ಐಆರ್ ದಾಖಲಾಗಿ ಆರೋಪಗಳು ರೂಪುಗೊಂಡಿವೆ. ಈ ವಿಷಯವು ಸಂಡೂರು ಜೆಎಂಎಫ್‌ಸಿ ನ್ಯಾಯಾಲಯದಲ್ಲಿದೆ.
ಜನಾರ್ದನ ರೆಡ್ಡಿ ಅವರು ಬಿಜೆಪಿಯಿಂದ ಸಚಿವರಾದ ನಂತರ ಓಬಳಾಪುರಂ ಮೈನಿಂಗ್ ಕಂಪನಿಯ ನಿರ್ದೇಶಕರೊಂದಿಗೆ ಸೇರಿ, ಪಕ್ಕದ ಲೀಸ್‌ಗಳನ್ನು ತಮ್ಮ ನಿಯಂತ್ರಣಕ್ಕೆ ತೆಗೆದುಕೊಂಡು, ಮೈನಿಂಗ್ ಲೀಸ್ ಗಡಿಗಳನ್ನು ಬದಲಾಯಿಸಿ, ಎಂಎಂಡಿಎಂಆರ್ ಕಾಯ್ದೆ, ಎಫ್‌ಸಿ ಕಾಯ್ದೆ, ಇಸಿ ಕಾಯ್ದೆ ಇತ್ಯಾದಿಗಳಂತೆ ಪಡೆಯಲಾಗಿದ್ದ ಲೀಸ್‌ಗಳ ನಿಯಮಗಳನ್ನು ಉಲ್ಲಂಘಿಸಿ, ಅಕ್ರಮವಾಗಿ ಗಣಿಗಾರಿಕೆ ನಡೆಸಿದರು.
ಅವರು ಆಂಧ್ರ ಪ್ರದೇಶದ ಪರವಾನಗಿಗಳ ಮೂಲಕ ಹಾಗೂ ಕರ್ನಾಟಕದ ಲೀಸ್‌ಗಳಿಂದ ಅಕ್ರಮವಾಗಿ ಕಬ್ಬಿಣ ಅದಿರು ಸಾಗಿಸಿದರು.
ಸಿಬಿಐ ಚಾರ್ಜ್‌ಷೀಟ್ ಮತ್ತು ತೀರ್ಪಿನಲ್ಲಿ ನಾವು ವಿವಿಧ ನ್ಯಾಯಾಂಗ ವೇದಿಕೆಗಳಲ್ಲಿ ಅಕ್ರಮಗಳನ್ನು ಎತ್ತಿಹಿಡಿಯಲಾಗಿದೆ.
ಆದರೂ ರಾಜ್ಯ ಹಾಗೂ ಕೇಂದ್ರದ ಅಧಿಕಾರಿಗಳು ಈ ತೀರ್ಪುಗಳನ್ನು ಗಂಭೀರವಾಗಿ ಪರಿಗಣಿಸುತ್ತಿಲ್ಲ.
2008ರಲ್ಲಿ ಜನಾರ್ದನ ರೆಡ್ಡಿ ಅವರು ನಮ್ಮ ಲೀಸ್ ಪ್ರದೇಶದಲ್ಲಿ ನಾವು ಕೆಲಸಕ್ಕೆ ಹೋಗಲು ಅವಕಾಶ ನೀಡಲಿಲ್ಲ, ಅಡಚಣೆ ಮಾಡಿದರು ಹಾಗೂ ಅಕ್ರಮ ಗಣಿಗಾರಿಕೆ ನಡೆಸಿ 29 ಲಕ್ಷ ಮೆಟ್ರಿಕ್ ಟನ್ ಕಬ್ಬಿಣ ಅದಿರನ್ನು ಎಂ.ಬಿ.ಟಿ., ಹಿಂದ್ ಟ್ರೇಡರ್ಸ್, ಟಿ.ನಾರಾಯಣ ರೆಡ್ಡಿ, ಎನ್.ರತ್ನಯ್ಯ ಗಣಿ ಪ್ರದೇಶಗಳಿಂದ ಸಾಗಿಸಿದರು.
ಭಾರತ ಸಂವಿಧಾನದ ವಿಧಿ 191 ಮತ್ತು 1951ರ ಜನ ಪ್ರತಿನಿಧಿಗಳ ಕಾಯ್ದೆಯ ಸೆಕ್ಷನ್ 8 ಪ್ರಕಾರ, ಶಾಸಕರು ಅಕ್ರಮ ಗಣಿಗಾರಿಕೆ ಅಥವಾ ಹಾನಿಕಾರಕ ಚಟುವಟಿಕೆಗಳಲ್ಲಿ ತೊಡಗಿದರೆ ಅವರ ಸದಸ್ಯತ್ವವೇ ರದ್ದಾಗಬಹುದು. ಸಂಸದರು ಮತ್ತು ಶಾಸಕರು ಭಾರತ ಸಂವಿಧಾನ ಮತ್ತು ಕಾನೂನುಗಳನ್ನು ಪಾಲಿಸಲು ಮತ್ತು ನೈಸರ್ಗಿಕ ಸಂಪತ್ತುಗಳನ್ನು ರಕ್ಷಿಸಲು ಪ್ರಮಾಣ ವಚನ ತೆಗೆದುಕೊಳ್ಳುತ್ತಾರೆ. ಈ ಪ್ರಮಾಣವನ್ನು ಉಲ್ಲಂಘಿಸುವುದು ಜನರ ನಂಬಿಕೆಗೆ ಧಕ್ಕೆ ತರುವುದಾಗಿದೆ.
ನ್ಯಾಯಾಲಯವು ಜಾಮೀನು ನೀಡುವುದರಲ್ಲಿ ನಮಗೆ ವಿರೋಧವಿಲ್ಲ. ಆದರೆ, ಜನಾರ್ದನ ರೆಡ್ಡಿ ಅವರನ್ನು ಈ ಪ್ರಕರಣದ ಅಂತಿಮ ತೀರ್ಪು ತೆಲಂಗಾಣ ಉಚ್ಚ ನ್ಯಾಯಾಲಯದಿಂದ ಬರುವವರೆಗೆ ಬಿಜೆಪಿ ಪಕ್ಷದಿಂದ ಅಮಾನತುಗೊಳಿಸಬೇಕೆಂದು ಕೋರುತ್ತೇವೆ ಎಂದಿದ್ದಾರೆ.
ಜಾಮೀನಿನಮೇಲೆ ಬಿಡುಗಡೆ ಆದ ಮೇಲೆ
ಜನಾರ್ದನ ರೆಡ್ಡಿ ಅವರು ಮಾಧ್ಯಮಗಳ ಮುಂದೆ, ಉಚ್ಚ ನ್ಯಾಯಾಲಯವು ಎಲ್ಲಾ ಆರೋಪಗಳನ್ನು ತಿರಸ್ಕರಿಸಿದೆ ಎಂಬ ಸುಳ್ಳು ಹೇಳಿಕೆ ನೀಡಿದ್ದಾರೆ.
ಇದು ನ್ಯಾಯಾಲಯದ ಮೇಲೆ ಪ್ರಭಾವ ಬೀರುವ ಪ್ರಯತ್ನವಲ್ಲದೆ ಸಾರ್ವಜನಿಕ ಮತ್ತು ಸರಕಾರಿ ಅಧಿಕಾರಿಗಳಿಗೆ ತಪ್ಪು ಮಾಹಿತಿ ನೀಡುತ್ತಿರುವುದನ್ನು ತೋರಿಸುತ್ತದೆ ಎಂದಿದ್ದಾರೆ.