
ಸಂಜೆವಾಣಿ ನ್ಯೂಸ್
ಮೈಸೂರು: ಜೂ.09:- ಈಗಿನ ಆಧುನಿಕ ದಿನಮಾನದಲ್ಲಿ ಗುರು-ಶಿಷ್ಯರ ಬಾಂಧವ್ಯವೂ ಹಿಂದಿನ ದಶಕಗಳಲ್ಲಿ ಇದ್ದಂತೆ ಇಲ್ಲ ಎಂದು ಕರ್ನಾಟಕ ಕಲಾಶ್ರೀ ಡಾ.ಕೆ.ಕುಮಾರ್ ಅಭಿಪ್ರಾಯಪಟ್ಟರು.
ನಗರದ ರಾಮಾನುಜ ರಸ್ತೆಯಲ್ಲಿ ಇರುವ ಮೈಸೂರು ಆರ್ಟ್ ಗ್ಯಾಲರಿಯಲ್ಲಿ ಭಾನುವಾರ ನಡೆದ ಸಾಧಕರೊಂದಿಗೆ ಸಂವಾದ-102 ಕಾರ್ಯಕ್ರಮದಲ್ಲಿ ತಿಂಗಳ ಸಾಧಕರಾಗಿ ಭಾಗವಹಿಸಿ ಅವರು ತಮ್ಮ ಸಾಧನೆಯ ಹಾದಿಯಲ್ಲಿ ಆಗಿರುವ ಅನುಭವಗಳನ್ನು ಹಂಚಿಕೊಂಡರು.
ನಮ್ಮ ಕಾಲದಲ್ಲಿ ಶಿಷ್ಯರು ಎಷ್ಟು ಹೊತ್ತು ಕಲಿಯುತ್ತಾರೋ ಅಷ್ಟೂ ಹೊತ್ತಿನ ತನಕವು ಗುರುಗಳು ಪಾಠ ಹೇಳಿಕೊಡುತ್ತಿದ್ದರು. ಗುರುಗಳು ಎಷ್ಟು ಹೊತ್ತಿನ ತನಕ ಪಾಠ ಹೇಳುತ್ತಾರೋ ಅಷ್ಟು ಹೊತ್ತು ಶಿಷ್ಯರು ಕಲಿಯುತ್ತಿದ್ದರು. ಒಂದು ರೀತಿ ಒಬ್ಬರಿಗೊಬ್ಬರು ಸವಾಲು ಹಾಕಿಕೊಂಡತೆ. ಅವರು ಹೆಚ್ಚೋ-ನಾವು ಹೆಚ್ಚೋ ಎನ್ನುವ ರೀತಿಯಲ್ಲಿ. ಇವನೇ ಸಾಕು ಎನ್ನುತ್ತಿಲ್ಲ ಎಂದು ಕೊಂಡು ಗುರುಗಳು ಮತ್ತಷ್ಟು ಅವಧಿ ಪಾಠ ಮಾಡಿದರೆ, ಗುರುಗಳೇ ಬೇಡ ಎನ್ನುತ್ತಿಲ್ಲ ಎಂದು ಶಿಷ್ಯರು ಇನ್ನಷ್ಟು ಉತ್ಸಾಹದಿಂದ ಕಲಿಯುತ್ತಿದ್ದರು. ಆ ರೀತಿ ಬಾಂಧವ್ಯವನ್ನು ಈಗ ನೋಡಲು ಸಿಗುತ್ತಿಲ್ಲ ಎಂದು ಬೇಸರಿಸಿದರು.
ಸಾಧನೆಯ ಹಾದಿಯಲ್ಲಿ ಉಂಟಾಗುವ ಕಹಿ ಘಟನೆಗಳನ್ನು ಸವಾಲಾಗಿ ಸ್ವೀಕಾರ ಮಾಡಿದರೆ ಜೀವನದಲ್ಲಿ ಯಶಸ್ಸು ಸಾಧ್ಯವಾಗುತ್ತದೆ. ಆಡಿಕೊಳ್ಳುವವರ ಮಾತನ್ನು ಮೆಟ್ಟಿ ನಿಂತು ಸಾಧನೆ ಮಾಡಿ ತೋರಿಸಬೇಕು ಎಂದ ಕುಮಾರ್ ಅವರು, ತಮ್ಮ ಜೀವನದಲ್ಲಿ ನಡೆದ ಕಹಿ ಘಟನೆಗಳನ್ನು ಮೆಲುಕು ಹಾಕಿದರು.
ಕೆ.ಜಿ.ಕೊಪ್ಪಲಿನ ಹುಡುಗ ಹಾಡು-ನೃತ್ಯ ಕಲಿಯುವುದು ಎಂದರೇ ಏನು ಎಂದು ಕೆಲವರು ಜರಿಯುತ್ತಿದ್ದರು. ನಮ್ಮ ಸುತ್ತಮುತ್ತಲಿನವರೇ ನಮ್ಮ ಮನೆಗೆ ಕಲ್ಲು ಎಸೆದರು. ದಾರಿಯಲ್ಲಿ ಹೋಗುವ ಸಂದರ್ಭದಲ್ಲಿ ಹೀಯಾಳಿಸಿ ಮಾತನಾಡುತ್ತಿದ್ದರು. ಇವನ್ನೆಲ್ಲ ಸಹಿಸಿ ಕೊಂಡು ಓದಿ, ಪದವಿಯನ್ನು ಪಡೆದುಕೊಂಡು ಸಂಗೀತ ಕ್ಷೇತ್ರದಲ್ಲಿ ಪಿಎಚ್‍ಡಿ ಮಾಡಿದವರಲ್ಲಿ ಮೊದಲಿಗನಾದೆ, ಡೀಲಿಟ್ ಪದವಿಯನ್ನು ಪಡೆದುಕೊಂಡೆ ಎಂದು ತಿಳಿಸಿದರು.
ನನ್ನ ಸಾಧನೆಗೆ ನಮ್ಮ ತಾಯಿ ಪೆÇ್ರೀತ್ಸಾಹವೇ ಮೂಲಾಧಾರ. ನನ್ನ ತಂದೆಗೆ ಮಗ ಸಂಗೀತ ಕಲಿಯುವುದು ಇಷ್ಟವಿರಲಿಲ್ಲ. ಅವರ ಕೋಪಕ್ಕೆ ತುತ್ತಾಗಿ ಎಷ್ಟೋ ರಾತ್ರಿಗಳನ್ನು ಮನೆಯ ಜಗುಲಿಯ ಮೇಲೆ ಕಳೆದಿದ್ದೇನೆ. ಈ ಸಂದರ್ಭದಲ್ಲಿ ನನ್ನ ತಾಯಿ ನನ್ನ ಜೊತೆಗೆ ಇದ್ದು ನನಗೆ ಧೈರ್ಯವನ್ನು ತುಂಬಿದ್ದರು. ಅದೇ ರೀತಿ ನನ್ನನ್ನು ಮದುವೆಯಾದ ಮಾಲತಿ ಕೂಡ ನನಗೆ ತುಂಬಾ ಬೆಂಬಲ ಕೊಟ್ಟಿದ್ದಾರೆ. ಅವರು ಮಕ್ಕಳ ವೈದ್ಯಯಾಗಿದ್ದರೂ ಕೂಡಾ ಸಂಗೀತ-ನೃತ್ಯದಲ್ಲಿ ಆಸಕ್ತಿ ಹೊಂದಿರುವುದರಿಂದ ನನ್ನ ಯಶಸ್ಸಿಗೂ ಶ್ರಮಿಸಿದ್ದಾರೆ. ಸಾಧಿಸುವ ಚಲದಿಂದ ಸಕಲೇಶಪುರದ ಕಾಡಿನ ಮಧ್ಯದಲ್ಲಿ ಇರುವ ಗ್ರಾಮದಲ್ಲಿ ಹಲವಾರು ಜನರಿಗೆ ಸಂಗೀತ-ನೃತ್ಯವನ್ನು ಹೇಳಿಕೊಟ್ಟಿದ್ದೇನೆ. ಆ ಊರಿಗೆ ಹೋಗಬೇಕಾದರೆ ಕಾಡಿನ ಮಧ್ಯದಲ್ಲೇ ಹೋಗಬೇಕಾಗಿತ್ತು. ಅದ್ಯಾವ ಧೈರ್ಯವಿತ್ತೋ ಗೊತ್ತಿಲ್ಲ. ಅಲ್ಲಿ ಪಾಠ ಮಾಡಿ ಶಿಷ್ಯರನ್ನು ಸಂಪಾದನೆ ಮಾಡಿದ್ದೇನೆ. ಕಳೆದ 13 ವರ್ಷದಲ್ಲಿ 24 ಮಂದಿಗೆ ಪಿಎಚ್‍ಡಿ ಮಾರ್ಗದರ್ಶಕನಾಗಿ ಕೆಲಸ ಮಾಡಿ, ಅವರು ಮಹಾ ಪ್ರಬಂಧವನ್ನು ಸಾದರ ಪಡಿಸಲು ಸಹಕಾರ ನೀಡಿದ್ದೇನೆ ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಿರಿಯ ಕಲಾವಿದ ಎಲ್.ಶಿವಲಿಂಗಪ್ಪ ವಹಿಸಿದ್ದರು. ಕಲಾ ವಿಮರ್ಶಕ ಕೆ.ಜೆ.ನಾರಾಯಣ ಕಿಕ್ಕೇರಿ, ಮೈಸೂರು ಆರ್ಟ್ ಗ್ಯಾಲರಿಯ ಕಾರ್ಯದರ್ಶಿ ಡಾ.ಜಮುನಾರಾಣಿ ಮಿರ್ಲೆ, ಪ್ರಧಾನ ಸಂಚಾಲಕ ಶ್ರೀಕಂಠಮೂರ್ತಿ ಮತ್ತಿತರರು ಹಾಜರಿದ್ದರು.